ಕೂಡ್ಲು ಬ್ಯಾಂಕ್ ಕಳವು:ಆರೋಪಿ ಮುಜೀಬ್ನನ್ನು ಬ್ಯಾಂಕ್ ಸಹಿತ ವಿವಿಧೆಡೆ ಕೊಂಡೊಯ್ದು ಮಾಹಿತಿ ಸಂಗ್ರಹ

0
292

ಕಾಸರಗೋಡು: ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಪ್ರಧಾನ ಆರೋಪಿಗಳ ಲ್ಲೋರ್ವನಾದ ಮುಜೀಬ್‌ನನ್ನು ನಿನ್ನೆ ಬ್ಯಾಂಕ್ ಸಹಿತ ವಿವಿಧೆಡೆಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಾಯಿತು. ಕಾಸರಗೋಡು ಸಿ.ಐ ಪಿ. ಕೆ. ಸುಧಾಕರನ್ ನೇತೃತ್ವದಲ್ಲಿ ಪೊಲೀಸರ ಬಂದೋ ಬಸ್ತಿನೊಂದಿಗೆ ಆರೋಪಿಯನ್ನು ದರೋಡೆ ನಡೆದ  ಎರಿಯಾಲ್‌ನ ಲ್ಲಿರುವ ಬ್ಯಾಂಕ್‌ಗೆ ಮೊದಲು ಕರೆದೊಯ್ಯಲಾಯಿತು. ಅನಂತರ ದರೋಡೆ ನಡೆಸಿದ  ಚಿನ್ನವನ್ನು ಹೂತಿಟ್ಟ ಚೌಕಿ ಕಲ್ಲಂಗೈ ರೈಲು ಹಳಿ ಸಮೀಪಕ್ಕೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಾಯಿತು. ಬ್ಯಾಂಕ್ ದರೋಡೆ ವೇಳೆ ಬ್ಯಾಂಕ್ ಸಿಬ್ಬಂದಿಗಳನ್ನು ಅಗತ್ಯವಿದ್ದರೆ ಕಟ್ಟಿಹಾಕಲೆಂದು ಕೊಂಡೊಯ್ದ ಬಟ್ಟೆಯ ಹಗ್ಗವನ್ನು ಈ ಸ್ಥಳದಿಂದ ಪತ್ತೆಹಚ್ಚಲಾಯಿತು. ಹಗ್ಗವನ್ನು ತುಂಡುಗಳಾಗಿ ಅಲ್ಲಿ ಉಪೇಕ್ಷಿ ಲಾಗಿತ್ತು. ಅದೇ ರೀತಿ ಆರೋಪಿಗಳು ಅಂದು ಮುಖಕ್ಕೆ ಕಟ್ಟಲು ಬಳಸಿದ ಕಪ್ಪು ಬಟ್ಟೆ, ೨ ಕಪ್ಪು ಬಣ್ಣದ ಅಂಗಿ ಎಂಬಿವುಗಳನ್ನು ಇದೇ ಸ್ಥಳದಿಂದ ಪತ್ತೆ ಹಚ್ಚಲಾಗಿದೆ.

ಬ್ಯಾಂಕ್ ದರೋಡೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅನಂತರ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಇದೇ ಮೊದಲ ಬಾರಿಗೆ ಪೊಲೀಸರು ಕಸ್ಟಡಿಗೆ ತೆಗೆದು ಮಾಹಿತಿ ಸಂಗ್ರಹಕ್ಕೆ ವಿವಿಧೆಡೆಗೆ ಸಾಗಿಸಿದ್ದಾರೆ. ಈ ವೇಳೆ ಪೊಲೀಸರು ವಿಚಾರಿಸಿದಾಗ ದರೋಡೆ ಬಳಿಕ ಚಿನ್ನಾಭರಣಗಳನ್ನು ಬಚ್ಚಿಟ್ಟ ಸ್ಥಳ, ತಲೆಮರೆಸಿಕೊಂಡು ಅಲೆದಾಡಿದ ಪ್ರದೇಶ ಮೊದಲಾದವುಗಳನ್ನು ಒಂದಾಗಿಸಿ ಆರೋಪಿ ಸುರುಳಿ ಬಿಟ್ಟಿದ್ದಾನೆ.

ಬ್ಯಾಂಕ್‌ನಿಂದ ಚಿನ್ನಾಭರಣ ಹಾಗೂ ನಗದು ದರೋಡೆ ನಡೆಸಿದ ಬಳಿಕ ಇನ್ನೋರ್ವ ಪ್ರಧಾನ ಆರೋಪಿ ಜೋಮೋನ್ ಜತೆ ಮುಜೀಬ್ ಬೈಕ್‌ನಲ್ಲಿ ಮೊದಲು ಚೌಕಿ ಪೆಟ್ರೋಲ್ ಬಂಕ್ ಬಳಿಗೆ ತಲುಪಿದ್ದಾನೆ. ಅಲ್ಲಿಂದ ರೈಲು ಹಳಿಯತ್ತ ತೆರಳಿ ಪೊದೆಗಳೆಡೆಯಲ್ಲಿ ಬೈಕ್ ಉಪೇಕ್ಷಿಸಲಾಯಿತು.  ಅಲ್ಲಿಂದ ಸುಮಾರು ೩೦೦ ಮೀಟರ್ ಮುಂದಕ್ಕೆ ನಡೆದು ಕಲ್ಲಂಗೈ ಎಂಬಲ್ಲಿಗೆ ತಲುಪಲಾಯಿತು. ಇಲ್ಲಿನ ರೈಲು ಹಳಿ ಬದಿಯಲ್ಲಿ ಕಾಡು ಬೆಳೆದು ನಿಂತಿದ್ದು ಅಲ್ಲದೆ ಅಲ್ಲಿ ಬೇರ‍್ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿ ಚಿನ್ನಾಭರಣ ಗಳನ್ನು ಗೋಣಿ ಚೀಲದಲ್ಲಿ ಕಟ್ಟಿ ಮಣ್ಣಿನಡಿ ಹೂಡಲಾಯಿತು. ಬಳಿಕ ರಾಷ್ಟ್ರೀಯ ಹೆದ್ದಾರಿಗೆ ಮರಳಿ ಖಾಸಗಿ ಬಸ್ಸೊಂದರಲ್ಲಿ ಕುಂಬಳೆಗೆ ತಲುಪಿದ ಆರೋಪಿಗಳು ಅಲ್ಲಿಂದ ಆಟೋ ರಿಕ್ಷಾದಲ್ಲಿ ಉಪ್ಪಳಕ್ಕೂ, ನಂತರ ಮಂಗಳೂರಿಗೆ ಪಲಾಯನಗೈದಿದ್ದಾರೆ. ಈ ಮಧ್ಯೆ ಪೊಲೀಸ್ ತನಿಖೆ ತೀವ್ರಗೊಳ್ಳುವುದನ್ನರಿತು ವಿವಿಧೆಡೆ ತಲೆಮರೆಸಿಕೊಂಡು ಹತ್ತು ದಿನಗಳ ಬಳಿಕವೇ ವಾಪಸು ಕಲ್ಲಂಗೈಗೆ ಈ ಇಬ್ಬರು ಬಂದಿದ್ದಾರೆ. ಅಲ್ಲಿ ರೈಲು ಹಳಿ ಬಳಿ ಹೂತಿಟ್ಟ ಚಿನ್ನಾಭರಣವನ್ನು ಮೇಲೆತ್ತಿ ಅನಂತರ ಕರ್ನಾಟಕದ ವಿರಾಜ್ ಪೇಟೆಗೆ ತೆರಳಿ ತಲೆಮರೆಸಿಕೊಂಡಿರುವುದಾಗಿ ಆರೋಪಿಯಿಂದ ಪೊಲೀಸರು ತಿಳಿದುಕೊಂಡಿದ್ದಾರೆ.

ಆರೋಪಿಗಳು ರೈಲು ಹಳಿ ಬದಿ ಚಿನ್ನಾಭರಣ ಹೂತಿಟ್ಟು ತೆರಳಿದ ಬಳಿಕ ಇದೇ ಸ್ಥಳದಲ್ಲಿ ಹಳಿ ವಿದ್ಯುತ್ತೀಕರಣ ಕಾಮಗಾರಿ ನಡೆದಿತ್ತು. ಇದರಂಗವಾಗಿ ಅಲ್ಲಿದ್ದ ಮರಗಳನ್ನು ಕಡಿದು ತೆಗೆಯಲಾಗಿತ್ತು. ಹತ್ತು ದಿನಗಳ ಬಳಿಕ ಆರೋಪಿಗಳು ಆ ಸ್ಥಳಕ್ಕೆ ತಲುಪಿದಾಗ ಸ್ಥಳ ಬದಲಾದಂತಾಗಿ ಚಿನ್ನ ಹೂತಿಟ್ಟ ಸ್ಥಳ ಮರೆತು ಹೋಗಿತ್ತೆನ್ನಲಾಗಿದೆ. ಇದೇ ವೇಳೆ ರೈಲು ಹಳಿ ಬದಿಯಿರುವ ಮೈಲುಕಲ್ಲಿನ ನಂಬ್ರದ ನೆನಪಿನ ಆಧಾರದಲ್ಲಿ ಚಿನ್ನ ಪತ್ತೆಹಚ್ಚಲಾಯಿತೆಂದು ಆರೋಪಿ ಮುಜೀಬ್ ತಿಳಿಸಿದ್ದಾನೆ.

NO COMMENTS

LEAVE A REPLY