ಮತ್ತೆ ಜಾನುವಾರು ಕಳ್ಳರ ಹಾವಳಿ ಕಳವುಗೈದು ಸಾಗಾಟಕ್ಕೆ ಸ್ಕಾರ್ಫಿಯೋ ಕಾರು

0
480

ಕುಂಬಳೆ: ಜಾನುವಾರುಗಳನ್ನು ಕೈಕಾಲು ಕಟ್ಟಿ ಸ್ಕಾರ್ಫಿಯೋ ಕಾರಿನಲ್ಲಿ ತುಂಬಿಸಿ ಸಾಗಾಟ ನಡೆಸಿದ್ದ ವಿಷಯ ತಿಳಿದು ಹಿಂಬಾಲಿಸಿದವರನ್ನು  ಕಣ್ತಪ್ಪಿಸಿ ತಂಡ ಪರಾರಿಯಾಗಿದೆ.

ನಿನ್ನೆ ಮುಂಜಾನೆ ೨ ಗಂಟೆ ವೇಳೆ ಕುಂಬಳೆ ಪೇಟೆ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಮಹಾರಾಷ್ಟ್ರ ನೋಂದಾವಣೆಯ ಸ್ಕಾರ್ಫಿಯೋ ಕಾರಿನಲ್ಲಿ ಜಾನುವಾರು ಗಳ ಕೈಕಾಲುಗಳನ್ನು ಕಟ್ಟಿ ತುಂಬಿಸಿದ್ದ ಸ್ಥಿತಿಯಲ್ಲಿ ನಾಗರಿಕರು ಕಂಡಿದ್ದಾರೆ.  ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಲ್ಲಿಗೆ ತಲುಪುವುದರೊಂದಿಗೆ ಕಾರು ಕಾಸರಗೋಡು  ಭಾಗಕ್ಕೆ ಪರಾರಿಯಾಗಿದೆ. ಅದನ್ನು ನಾಗರಿಕರು ಹಿಂಬಾಲಿಸಿದರೂ ಮೊಗ್ರಾಲ್ ಪುತ್ತೂರು ಪಂಜಿಗುಡ್ಡೆ ಬಳಿ ಒಳದಾರಿ ಮೂಲಕ ಜಾನುವಾರು ತುಂಬಿದ ಕಾರು ಪರಾರಿಯಾಗಿ ಕಣ್ಮರೆಯಾಯಿತು.

ಈ ವಿಷಯವನ್ನು ನಾಗರಿಕರು ಕುಂಬಳೆ, ಕಾಸರಗೋಡು ಪೊಲೀಸ್ ಠಾಣೆಗಳಿಗೆ ತಿಳಿಸಿದ್ದು ಪೊಲೀಸರು ಸ್ಥಳಕ್ಕೆ ತಲುಪಿದರೂ ಜಾನುವಾರು ಸಾಗಾಟ ಗಾರರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಇದೇ ವೇಳೆ ಮೊನ್ನೆ ರಾತ್ರಿ  ಮೊಗ್ರಾಲ್ ಕುಟ್ಯಾಲ್ ವಳಪ್‌ನ ಅಬೂಬಕರ್ ಸಿದ್ದಿಕ್‌ರ ಹಿತ್ತಿಲಿನಲ್ಲಿ ಕಟ್ಟಿಹಾಕಿದ್ದ ೫೦ ಸಾವಿರ ರೂಪಾಯಿ ಮೌಲ್ಯದ ಎರಡು ಹಸುಗಳು ಕಳವಿಗೀಡಾಗಿವೆಯೆಂದು ಪೊಲೀಸರಿಗೆ ದೂರು ನೀಡಲಾಗಿದೆ.

ಅಲ್ಲದೆ ಅದೇ ರಾತ್ರಿ ಕುಂಬಳೆ ಪೇಟೆಯಲ್ಲಿದ್ದ ಎರಡು ಹಸುಗಳು ಹಾಗೂ ಒಂದು ಕರುವನ್ನು ಕಳವುಗೈದಿರುವುದಾಗಿ ಹೇಳಲಾಗುತ್ತಿದೆ. ಮೊಗ್ರಾಲ್ ಹಾಗೂ ಪರಿಸರ ಪ್ರದೇಶಗಳಲ್ಲಿ ಜಾನುವಾರು ಕಳ್ಳರ ಹಾವಳಿ ತೀವ್ರಗೊಂಡಿದೆಯೆಂದು ವ್ಯಾಪಕ ಆರೋಪ ಕೇಳಿಬಂದಿದೆ.

NO COMMENTS

LEAVE A REPLY