ಕನ್ನಡ ಪರ ಹೋರಾಟಕ್ಕೆ ಸಂದ ಜಯ: ಅಡೂರು ಶಾಲೆಯ ಭಾಷೆ ತಿಳಿಯದ ಅಧ್ಯಾಪಿಕೆಯ ಬದಲಿಸಲು ನ್ಯಾಯಾಲಯ ಆದೇಶ

ಅಡೂರು: ಗಡಿನಾಡಾದ ಕಾಸರಗೋಡು ಜಿಲ್ಲೆಯ ಕನ್ನಡ ಪ್ರದೇಶದ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಗೆ ನ್ಯಾಯಾಲಯದಿಂದ ಪರಿಹಾರವಾಗಿದೆ. ಅಡೂರು ಶಾಲೆಯ ಕನ್ನಡ ವಿದ್ಯಾರ್ಥಿಗಳಿಗೆ ಪಾಠ ಮಾಡಲು ನೇಮಕಗೊಂಡಿದ್ದ ಕನ್ನಡ ಬಾರದ ಅಧ್ಯಾಪಿಕೆಯನ್ನು ಅಲ್ಲಿಂದ ವರ್ಗಾಯಿಸಿ ಕನ್ನಡ ತಿಳಿದಿರುವ ಅಧ್ಯಾಪಿಕೆಯನ್ನು ನೇಮಕ ಮಾಡಬೇಕೆಂದು ಕೇರಳ ಉಚ್ಚ ನ್ಯಾಯಾಲಯ ಆದೇಶಿಸಿದೆ. ಓಣಂ ಹಬ್ಬದ ರಜೆ ಕಳೆದ ಕೂಡಲೇ ಕನ್ನಡ ಅಧ್ಯಾಪಿಕೆಯನ್ನು ಶಾಲೆಯಲ್ಲಿ ನೇಮಕ ಮಾಡಬೇಕೆಂದು ಆದೇಶಿಸಿದ ನ್ಯಾಯಾ ಲಯ ಅಲ್ಲಿ ಈಗಾಗಲೇ ನೇಮಕಗೊಂ ಡಿರುವ ಮಲಯಾಳಿ ಮಾತೃ ಭಾಷೆಯ ಅಧ್ಯಾಪಿಕೆಯನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಬೇಕೆಂದು ಆದೇಶ ನೀಡಿದೆ. ಕನ್ನಡ ಶಾಲೆಯಲ್ಲಿ ಮಲೆಯಾಳಿ ಅಧ್ಯಾಪಕರನ್ನು ನೇಮಕ ಮಾಡುವ ಕೇರಳ ಪಿಎಸ್‌ಸಿಯ ಚಾಳಿಗೆ ಇದರಿಂದ ಹೊಡೆತ ಬಿದ್ದಿದೆ.

ಅಡೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಳೆದ ಜೂನ್ ೩ರಂದು ಕನ್ನಡ ತಿಳಿಯದ ಅಧ್ಯಾಪಿಕೆಯನ್ನು ಕನ್ನಡ ವಿದ್ಯಾರ್ಥಿಗಳಿಗೆ ಕಲಿಸಲು ನೇಮಕ ಮಾಡಲಾಗಿತ್ತು. ಇದನ್ನು ಪ್ರತಿಭಟಿಸಿದಾಗ,ಅಲ್ಲಿನ ಮುಖ್ಯೋಪಾಧ್ಯಾಯರನ್ನೇ ವರ್ಗಾಯಿಸಿ ಸರಕಾರ ಮೊಂಡು ವಾದ ಮುಂದಿಟ್ಟಿತ್ತು. ಆದರೆ ಶಾಲೆಯ ವಿದ್ಯಾರ್ಥಿಗಳ ಹೆತ್ತವರು, ಸ್ಥಳೀಯರು, ಕನ್ನಡಾಭಿಮಾನಿಗಳು ಸೇರಿ ಹೋರಾಟ ಸಮಿತಿ ರೂಪೀಕರಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ವಾದವನ್ನು ಆಲಿಸಿದ ನ್ಯಾಯಾಲಯ ಕನ್ನಡ ವಿದ್ಯಾರ್ಥಿಗಳಿಗೆ ಭಾಷೆ ತಿಳಿಯದ ಅಧ್ಯಾಪಿಕೆಯಿಂದ ಪಾಠ ಮಾಡಲು ಸಾಧ್ಯವಿಲ್ಲವೆಂದು ಮನಗಂಡು ಅವರನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸಿ ಕನ್ನಡ ತಿಳಿದಿರುವ ಅಧ್ಯಾಪಿಕೆಯನ್ನು ನೇಮಕ ಮಾಡಲು ಆದೇಶಿಸಿದೆ. ಈ ಆದೇಶವನ್ನು ಸ್ವಾಗತಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ನಿನ್ನೆ ಶಾಲೆ ಪರಿಸರದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲಾಯಿತು. ಗಡಿನಾಡಿನಲ್ಲಿ ಕನ್ನಡದ ಉಸಿರನ್ನು ಉಳಿಸಿಕೊಳ್ಳುವಲ್ಲಿ ಹೋರಾಟಗಾರರು ಸಫಲರಾಗಿರುವುದು ಕನ್ನಡಾಭಿಮಾನಿ ಗಳಿಗೆ ಸಂತಸ ತಂದಿದೆ.

Leave a Reply

Your email address will not be published. Required fields are marked *

You cannot copy content of this page