ಬಾಲಕೃಷ್ಣನ್ ಕೊಲೆ: ಒಂದು, ಎರಡನೇ ಆರೋಪಿಗಳು ತಪ್ಪಿತಸ್ಥರು ಯುವತಿಯ ತಂದೆ ಸಹಿತ ಇತರ ಆರೋಪಿಗಳ ಖುಲಾಸೆ

0
19

ಕಾಸರಗೋಡು: ಭಿನ್ನಕೋಮಿಗೆ ಸೇರಿದ ಯುವತಿಯನ್ನು ಪ್ರೀತಿಸಿ ಮದುವೆಯಾದ ದ್ವೇಷದಿಂದ ಕಾಸರಗೋಡಿನ ಯೂತ್ ಕಾಂಗ್ರೆಸ್ ಮಂಡಲ ಅಧ್ಯಕ್ಷರಾಗಿದ್ದ ವಿದ್ಯಾನಗರ ಪಡುಪಡ್ಕ ನಿವಾಸಿ ಹಾಗೂ ಕಾಸರಗೋಡು ನಗರದಲ್ಲಿ ಕೊರಿಯರ್ ಸಂಸ್ಥೆಯೊಂದರ ಸಿಬ್ಬಂದಿಯಾಗಿದ್ದ ಬಾಲಕೃಷ್ಣನ್ (೨೫)ರನ್ನು ಕೊಲೆಗೈದ ಪ್ರಕರಣದ ತೀರ್ಪನ್ನು ಕೊಚ್ಚಿಯ ಸಿಬಿಐಯ ವಿಶೇಷ ನ್ಯಾಯಾಲಯ ಇಂದು ಘೋಷಿಸಿದೆ. ಪ್ರಕರಣದ ಪ್ರಥಮ, ಎರಡನೇ ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಯುವತಿಯ ತಂದೆ ಸಹಿತ ಇತರ ಆರೋಪಿಗಳನ್ನು ಖುಲಾಸೆ ಗೊಳಿಸಲಾಗಿದೆ.

ಕಾಸರಗೋಡು ಚಟ್ಟಂಚಾಲ್ ಕುನಿಕುನ್ನು ಪಾದೂರು ರಸ್ತೆಯ ಜನ್ನತ್ತುಲ್ ಫಿರ್ದೋಸ್‌ನ ಇಕ್ಕು ಅಲಿಯಾಸ್ ಮೊಹಮ್ಮದ್ ಇಕ್ಭಾಲ್, ತಳಂಗರೆ ಕೆ.ಎ. ವೀಟಿಲ್‌ನ ಜಾಕಿ ಹನೀಫ್ ಅಲಿಯಾಸ್ ಮೊಹಮ್ಮದ್ ಹನೀಫ್, ಕಾಸರಗೋಡು ತಾಯಲಂಗಾಡಿ ಮಲ್ಲಿಗ ವೀಟಿಲ್‌ನ ಅಬ್ದುಲ್ ಗಫೂರ್, ಚೆಂಗಳ ಮುಟ್ಟತ್ತೋಡಿ ಸಫೀನಾ ಮಂಜಿಲ್‌ನ ಎ.ಎಂ. ಮೊಹಮ್ಮದ್ ಮತ್ತು ಉಪ್ಪಳ ಮಣ್ಣಂಗುಳಿ ಹಾಜಿ ಮಲಗ್ ದರ್ಬಾರ್‌ನ ಅಬೂಬಕರ್ ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದಾರೆ.

ಒಂದರಿಂದ ಐದನೇ ಆರೋಪಿಗಳು ಸೇರಿ ಒಳಸಂಚು ಹೂಡಿ ಅದರ ಪ್ರಕಾರ ಇಕ್ಭಾಲ್ ಮತ್ತು ಮೊಹಮ್ಮದ್ ಹನೀಫ್ ಸೇರಿ ೨೦೦೧ ಸೆಪ್ಟಂಬರ್ ೧೮ರಂದು ಬಾಲಕೃಷ್ಣನ್‌ರನ್ನು ನಗರದ ನುಳ್ಳಿಪ್ಪಾಯಲ್ಲಿ ಕಾರಿಗೇರಿಸಿ ನಗರದ  ಪಿಲಿಕುಂಜೆಯ ಚಂದ್ರಗಿರಿ ಕಡವಿನ ಸಮೀಪ ಕರೆತಂದು ಅಲ್ಲಿ ಅವರನ್ನು ಚಾಕುವಿನಿಂದ ಇರಿದು ಕೊಲೆಗೈಯ್ಯಲಾಗಿತ್ತೆಂಬುದು ಸಿಬಿಐ ಕೇಸು. ಈ ಪ್ರಕರಣದ ಐದನೇ ಆರೋಪಿಯ ಪುತ್ರಿಯನ್ನು ಬಾಲಕೃಷ್ಣನ್ ಮದುವೆಯಾದ ದ್ವೇಷವೇ ಕೊಲೆಗೆ ಕಾರಣವಾಗಿದೆಯೆಂದೂ, ಅಬ್ದುಲ್ ಗಫೂರ್ ಮತ್ತು ಅಬೂಬಕರ್ ಸೇರಿ ಕೊಲೆಗೆ ಸುಫಾರಿ ನೀಡಿರುವುದಾಗಿ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಸಿಬಿಐ ಆರೋಪಿಸಿದೆ.  ೨೦೧೦ ನವೆಂಬರ್‌ನಲ್ಲಿ ಸಿಬಿಐ ನ್ಯಾಯಾಲಯಕ್ಕೆ ಈ ಚಾರ್ಜ್ ಶೀಟ್ ಸಲ್ಲಿಸಿತ್ತು.

ಈ ಕೊಲೆ ಪ್ರಕರಣದ ತನಿಖೆ ಯನ್ನು ಮೊದಲು ಕಾಸರಗೋಡು ಪೊಲೀಸರು ನಡೆಸುತ್ತಿದ್ದರು. ಈಮಧ್ಯೆ  ತನಿಖೆ ಸರಿಯಾದ ರೀತಿಯಲ್ಲಿ  ನಡೆ ಯುತ್ತಿಲ್ಲವೆಂದು ದೂರಿ ಬಾಲಕೃಷ್ಣನ್‌ರ ತಂದೆ ನಿವೃತ್ತ ತಹಶೀಲ್ದಾರ್ ಎಂ. ಗೋಪಾಲನ್ ಮತ್ತು ತಾಯಿ ಪಂಕಜಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ  ಹೈಕೋರ್ಟ್ ನೀಡಿದ ಆದೇಶದಂತೆ ಈ ಪ್ರಕರಣದ ತನಿಖೆಯನ್ನು ಬಳಿಕ ಸಿಬಿಐಗೆ ಬಿಟ್ಟುಕೊಟ್ಟಿತ್ತು. ಅದರಂತೆ ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.

NO COMMENTS

LEAVE A REPLY