ಜಿಲ್ಲೆಯಲ್ಲಿ ಕಳ್ಳರು ಬೀಡುಬಿಟ್ಟಿರಲು ಸಾಧ್ಯತೆ: ಹಣಕಾಸು ಸಂಸ್ಥೆಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಎಸ್.ಎಸ್.ಬಿ ಮುನ್ನೆಚ್ಚರಿಕೆ

0
16

ಕಾಸರಗೋಡು: ಮಳೆಗಾಲ ತೀವ್ರಗೊಳ್ಳ ತೊಡಗಿರುವಂತೆ ಜಿಲ್ಲೆಯಲ್ಲಿ ಕಳ್ಳತನವೂ ಹೆಚ್ಚಾಗತೊಡಗಿದ ಹಿನ್ನೆಲೆಯಲ್ಲಿ ಹಣ ಕಾಸು ಸಂಸ್ಥೆಗಳು ತೀವ್ರ ಮುಂಜಾಗ್ರತೆ ವಹಿಸಬೇಕೆಂದು ರಾಜ್ಯ ಪೊಲೀಸ್‌ನ ಸ್ಟೇಟ್ ಸ್ಪೆಷಲ್ ಬ್ರಾಂಚ್ ಮುನ್ನೆಚ್ಚರಿಕೆ ನೀಡಿದೆ.

ಗಡಿಪ್ರದೇಶದಲ್ಲಿ ಕಾರ್ಯಾಚರಿಸುವ ಬ್ಯಾಂಕ್‌ಗಳು ಹೆಚ್ಚಿನ ಜಾಗ್ರತೆ ಪಾಲಿಸುವಂತೆ ಸ್ಟೇಟ್ ಸ್ಪೆಷಲ್ ಬ್ರಾಂಚ್ ವರದಿಯಲ್ಲಿ ತಿಳಿಸಿದೆ. ಕಾಟುಕುಕ್ಕೆ, ಪೆರ್ಲ, ಕುಂಬ್ಡಾಜೆ, ನೀರ್ಚಾಲು, ಮಾನ್ಯ, ಮುಗು, ಮಣಿಯಂಪಾರೆ ಮೊದಲಾದೆಡೆ ಕಾರ್ಯಾಚರಿಸುವ ಬ್ಯಾಂಕ್‌ಗಳಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು.  ಈ ಪೈಕಿ ಕೆಲವು ಬ್ಯಾಂಕ್‌ಗಳು ನಿರ್ಜನ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿವೆ. ಇಂತಹ ಪ್ರದೇಶಗಳಲ್ಲಾಗಿ ಕೆಲವೊಮ್ಮೆ ೨೪ ಗಂಟೆಗಿಂತಲೂ ಹೆಚ್ಚು ಕಾಲ ವಿದ್ಯುತ್ ಮೊಟಕಾಗುವ ಸಾಧ್ಯತೆ ಹೆಚ್ಚಿದೆ. ಮಳೆ ಧಾರಾಕಾರ ಸುರಿಯುವ  ಸಂದರ್ಭದಲ್ಲಿ ಇಂತಹ ಬ್ಯಾಂಕ್‌ಗಳನ್ನು ಗುರಿಯಾಗಿರಿಸಿ ಕಳ್ಳರು ತಲುಪುವ ಸಾಧ್ಯತೆಯಿದೆ.

ವರ್ಷಗಳ ಹಿಂದೆ ನೀರ್ಚಾಲಿನಲ್ಲಿ ಕಾವಲುಗಾರನನ್ನು ಕೊಲೆಗೈದು ಬ್ಯಾಂಕ್ ದರೋಡೆಗೆತ್ನಿಸಿದ ಘಟನೆಯೂ ನಡೆದಿತ್ತು. ಅನಂತರ   ಮುಳ್ಳೇರಿಯ ಪೇಟೆಯಲ್ಲಿರುವ ಬ್ಯಾಂಕ್‌ವೊಂದರಿಂದ ಕಳವು ಯತ್ನ ಕೆಲವೇ ತಿಂಗಳ ಹಿಂದೆಯಷ್ಟೇ ನಡೆದಿತ್ತು.  ಸಾಮಾನ್ಯವಾಗಿ ಜನವಾಸ ಕಡಿಮೆಯಿದ್ದು ಹಾಗೂ ಅಭದ್ರತೆಯ ಹಣಕಾಸು ಸಂಸ್ಥೆಗಳನ್ನು ಗೊತ್ತುಪಡಿಸಿ ದರೋಡೆ ನಡೆಸುವ ತಂಡಗಳು ಇಂತಹ ಕೃತ್ಯಗಳಲ್ಲಿ ತೊಡಗುತ್ತಿವೆ. ಒಂದು ವಾರ ಹಿಂದೆಯಷ್ಟೇ ಪಂಜಿಕಲ್ಲಿನ ಕ್ಯಾಂಪ್ಕೋದಿಂದ ಅಡಿಕೆ ಕಳವುಯತ್ನ ನಡೆದಿತ್ತು. ಅದರ ಕೆಲವು ದಿನಗಳ ಹಿಂದೆ ಸುಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡೆಕೋಲಿನ ಅಡಿಕೆ ದಾಸ್ತಾನು ಕೇಂದ್ರದಿಂದ ೧೫ ಕ್ವಿಂಟಾಲ್ ಅಡಿಕೆ ಕಳವು ನಡೆದಿತ್ತು. ಇದೇ ರೀತಿ ಜಿಲ್ಲೆಯ ವಿವಿಧೆಡೆಗಳಲ್ಲಿ ಮನೆ, ಹಣಕಾಸು, ವ್ಯಾಪಾರ ಸಂಸ್ಥೆಗಳನ್ನು ಕೇಂದ್ರೀಕರಿಸಿ ಕಳ್ಳತನ ನಡೆಸಲಾಗುತ್ತಿದೆ.

NO COMMENTS

LEAVE A REPLY