ಅಧ್ಯಾಪಿಕೆಗೆ ಚಾಕು ತೋರಿಸಿ ನಗ-ನಗದು ದರೋಡೆ

0
17

ಹೊಸದುರ್ಗ: ಏಕಾಂಗಿಯಾಗಿ ವಾಸಿಸುತ್ತಿದ್ದ ನಿವೃತ್ತ ಅಧ್ಯಾಪಿಕೆಯ ಮನೆಗೆ ರಾತ್ರಿ ಮುಖವಾಡ ಧರಿಸಿದ ದರೋಡೆಕೋರ ತಂಡ ಚಾಕು ತೋರಿಸಿ ಪ್ರಾಣ ಬೆದರಿಕೆಯೊಡ್ಡಿ ದೇಹದಲ್ಲಿದ್ದ ಒಂಭತ್ತು ಪವನ್ ಚಿನ್ನದೊಡವೆ ಮತ್ತು ಕಪಾಟಿನೊಳಗಿದ್ದ ನಗದು ದರೋಡೆಗೈದ ಘಟನೆ ನಡೆದಿದೆ.

ಹೊಸದುರ್ಗ ವೆಳ್ಳಿಕ್ಕೋತ್ ಅಜಾ ನೂರು ಪಂ. ಕಚೇರಿ ಬಳಿ ವಾಸಿಸುತ್ತಿರುವ ತರವಾಡು ಮನೆಯಾದ ಸ್ವರ್ಗಂ ಮನೆಯ ದೇವನ್ ನಾಯರ್‌ರ ಪತ್ನಿ ನಿವೃತ್ತ ಅಧ್ಯಾಪಿಕೆ ಓಮನ ಟೀಚರ್ (೭೪) ಎಂಬವರ ಮನೆಯಲ್ಲಿ ಇಂದು ಮುಂಜಾನೆ ಈ ದರೋಡೆ ನಡೆದಿದೆ.

ಓಮನ ಟೀಚರ್‌ಗೆ ಮೂವರು ಪುತ್ರರಿದ್ದು ಆಪೈಕಿ ಓರ್ವ ದುಬಾಯಲ್ಲಿ, ಮತ್ತಿಬ್ಬರು ಪಿಲಾತರ ಮತ್ತು ಕಲ್ಲಿಕೋಟೆ ಎಂಬೆಡೆಗಳಲ್ಲಿ ವಾಸಿಸುತ್ತಿದ್ದಾರೆ. ಇಂದು ಮುಂಜಾನೆ ೧ ಗಂಟೆ ವೇಳೆ ಮುಖವಾಡ ಧರಿಸಿದ ದರೋಡೆಕೋರರ ತಂಡ ಓಮನ ಟೀಚರ್‌ರ ಮನೆ ಬಾಗಿಲಿನ ಬೀಗ ಮುರಿದಿದ್ದರು. ಅದರಲ್ಲಿ ಓರ್ವ ದರೋಡೆಕೋರ ಮನೆಯೊಳಗೆ ನುಗ್ಗಿದ್ದಾನೆ.  ಸದ್ದು ಕೇಳಿದಾಕ್ಷಣ ಓಮನ ಟಾರ್ಚ್ ಲೈಟ್ ಉರಿಸಿ ನೋಡಿದಾಗ ಮುಖವಾಡ ಧರಿಸಿದ ದರೋಡೆಕೋರ  ಮನೆಯೊಳಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.  ಆಗ ದರೋಡೆಕೋರ ಟೀಚರ್‌ರ ಕೈಯಿಂದ ಟಾರ್ಚ್ ಹಿಡಿದೆಳೆದು  ಚಾಕು ತೋರಿಸಿ ಪ್ರಾಣ ಬೆದರಿಕೆಯೊಡ್ಡಿ ಅವರ ಕುತ್ತಿಗೆಯಲ್ಲಿದ್ದ ಐದು ಪವನ್‌ನ ಚಿನ್ನದ ಸರ ಮತ್ತು ಕೈಯಲ್ಲಿದ್ದ ಎರಡು ಪವನ್‌ನ ಚಿನ್ನದಬಳೆಗಳೆರಡನ್ನು ಬಲವಂತವಾಗಿ ಕಳಚಿ ತೆಗೆದಿದ್ದಾರೆ. ಅಲ್ಲದೆ ಕಪಾಟಿನೊಳಗಿದ್ದ ೧೦೦೦ ರೂ. ನಗದನ್ನು ತೆಗೆದು ಪರಾರಿಯಾಗಿದ್ದಾನೆ. ದರೋಡೆಕೋರರನ್ನು ಕಂಡು ಹೆದರಿದ ಟೀಚರ್ ವಿಷಯವನ್ನು ಬೆಳಿಗ್ಗೆ ೫ ಗಂಟೆ ತನಕ ಯಾರಿಗೂ ತಿಳಿಸದೆ ಮನೆಯೊಳಗೆ ಅವಿತುಕೊಂಡಿದ್ದರು. ಬಳಿಕ ಪಿಲಾತ್ತರದಲ್ಲಿರುವ ಪುತ್ರನನ್ನು ಕರೆದು  ಮಾಹಿತಿ ನೀಡಿದ್ದಾರೆ. ಅದರಂತೆ ಪುತ್ರ ಊರಿನಲ್ಲಿರುವ ಸ್ನೇಹಿತನಿಗೆ ತಕ್ಷಣ ಮಾಹಿತಿ ನೀಡಿದ್ದು ಆತ ಟೀಚರ ಮನೆಗೆ ಆಗಮಿಸಿ ಅವರನ್ನು ಸಂತೈಸಿದನು. ನಂತರ ಟೀಚರನ್ನು ಹೊಸದುರ್ಗ ಪೊಲೀಸ್ ಠಾಣೆಗೆ ಕರೆದೊ ಯ್ದು ದೂರು ನೀಡಲಾಯಿತು. ವಿಷಯ ತಿಳಿದ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದರು. ಬೆರಳಚ್ಚುತಜ್ಞರು ಮನೆಯಿಂದ ಹಲವು ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ.

ಇದೇ ರೀತಿ ಕಳೆದವರ್ಷ ನಿವೃತ್ತ ಅಧ್ಯಾಪಿಕೆ ಚೀಮೇನಿಯ ಜಾನಕಿಯ ಮನೆಗೆ ರಾತ್ರಿ ವೇಳೆ ದರೋಡೆ ಕೋರರು ನುಗ್ಗಿ ನಗ-ನಗದು ದರೋಡೆಗೈದಿದ್ದರು. ಪೆರಿಯಾದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಸುಬೈದಾ(೬೫)ರನ್ನು ದರೋಡೆಕೋರರು ಉಸಿರುಗಟ್ಟಿಸಿ ಕೊಲೆಗೈದು ನಗ-ನಗದು ದರೋಡೆಗೈದಿದ್ದರು.

ಇಂದು  ದರೋಡೆ ನಡೆದ ಪ್ರದೇಶದ ಅಲ್ಪ ದೂರದಲ್ಲಿರುವ ವೇಲೇಶ್ವರ ಎಂಬಲ್ಲಿ ಕಳೆದವರ್ಷ ಶಾಂತಮ್ಮ ಎಂಬ ವೃದ್ಧೆ ಬೆಳಿಗ್ಗೆ ಮನೆ ಹಿತ್ತಿಲ ಬಾವಿ ಬಳಿಯ ಪಂಪ್ ಆನ್ ಮಾಡಲು ಹೋದ ವೇಳೆ ದರೋಡೆಕೋರರ ತಂಡ ಕುತ್ತಿಗೆ ಬಿಗಿದು ಪ್ರಜ್ಞಾಹೀನಗೊಳಿಸಿದಬಳಿಕ ಚಿನ್ನದೊಡವೆ ದರೋಡೆಗೈದಿತ್ತು.  ಇಂತಹ ಘಟನೆಗಳ ಭೀತಿಯಿಂದ ಜಿಲ್ಲೆ ಇನ್ನೂ ಪೂರ್ಣವಾಗಿ ಮುಕ್ತವಾಗದಿರುವಾಗಲೇ   ಇಂದು ಮುಂಜಾನೆ ವೆಳ್ಳಿಕ್ಕೋತ್‌ನಲ್ಲಿ ದರೋಡೆ ನಡೆದಿರುವುದು ಜನರನ್ನು ಇನ್ನಷ್ಟು ಭೀತಿಗೊಳಪಡಿಸಿದೆ.

NO COMMENTS

LEAVE A REPLY