ಉತ್ಸವ ವಾತಾವರಣದಲ್ಲಿ ಅಂತ್ಯೋದಯದ ಚೊಚ್ಚಲ ನಿಲುಗಡೆಗೆ ಸ್ವಾಗತ

0
16

ಕಾಸರಗೋಡು: ವಿವಿಧ ರಾಜಕೀಯ ಪಕ್ಷಗಳು ಮತ್ತು ಹಲವು ಸಂಘ ಸಂಸ್ಥೆಗಳ ನಿರಂತರ ಹೋರಾಟಗಳ ಫಲಶ್ರುತಿಯಾಗಿ ಕಾಸರಗೋಡಿನಲ್ಲಿ ಚೊಚ್ಚಲವಾಗಿ ನಿಲುಗಡೆಗೊಂಡ ಮಂಗಳೂರು-ಕೊಚ್ಚುವೇಳಿ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲುಗಾಡಿಗೆ ನಿನ್ನೆ ರಾತ್ರಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಅದ್ದೂರಿಯ ಸ್ವಾಗತ ನೀಡಲಾಯಿತು.

ನಿನ್ನೆ ರಾತ್ರಿ ೭.೫೦ಕ್ಕೆ ಕೊಚ್ಚುವೇಳಿಯಿಂದ ಕಾಸರಗೋಡು ರೈಲು ನಿಲ್ದಾಣದಲ್ಲಿ ಚೊಚ್ಚಲವಾಗಿ ಅಂತ್ಯೋದಯ ರೈಲು ನಿಲುಗಡೆಗೊ ಳಿಸಿದಾಗ ಬಿಜೆಪಿ ನೇತಾರ ರಾಜ್ಯ ಸಭಾ ಸದಸ್ಯ ವಿ. ಮುರಳೀಧರನ್, ಶಾಸಕ ಎನ್.ಎ. ನೆಲ್ಲಿಕುನ್ನು ಸೇರಿದಂತೆ ಹಲವು ನೇತಾರರು ಮತ್ತು ಕಾರ್ಯಕರ್ತರು ಸೇರಿದಂತೆ ಭಾರೀ ಜನ ಸಮೂಹವೇ ರೈಲು ನಿಲ್ದಾಣದಲ್ಲಿ ನೆರೆದು ರೈಲಿಗೆ ಅದ್ದೂ ರಿಯ ಸ್ವಾಗತ ನೀಡಲಾಯಿತು.

ಬಿಜೆಪಿ ನೇತೃತ್ವದಲ್ಲಿ ಅಂತ್ಯೋದಯ ಎಕ್ಸ್‌ಪ್ರೆಸ್‌ಗೆ ಕಾಸರಗೋಡು ಜನತೆಯ ಸ್ವಾಗತ ಎಂಬ ಬ್ಯಾನರ್‌ಗಳನ್ನು ಹಿಡಿದು ಸ್ವಾಗತಿಸಲಾಯಿತು. ರಾಜ್ಯಸಭಾ ಸದಸ್ಯ ವಿ. ಮುರಳೀಧರನ್ ಫ್ಲಾಗ್ ಆಫ್ ಗೈದರು. ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಸುರೇಶ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಎಂ. ಜನನಿ, ನೆಂಜಿಲ್ ಕುಂಞಿರಾಮನ್, ಪಿ. ರಮೇಶ್, ಸುರೇಶ್ ಕುಮಾರ್ ಶೆಟ್ಟಿ, ಪ್ರಮೀಳಾ ಸಿ. ನಾಯ್ಕ್,  ಎಂ. ಹರೀಶ್ಚಂದ್ರ, ಎಂ. ಸುಧಾಮ, ಹರೀಶ್ ನಾರಂಪಾಡಿ, ಕೆ.ಪಿ. ಪುರುಷೋತ್ತಮ, ಉಮಾ ಕಡಪ್ಪುರ, ಧನಂಜಯ ಮಧೂರು, ಎ.ಕೆ. ಕೈಯಾರ್, ಅರುಣಾ ಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದರು. ಬಳಿಕ ಬಿಜೆಪಿ ವತಿಯಿಂದ ಸಿಹಿ  ವಿತರಿಸಲಾಯಿತು. ರೈಲಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡಿದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಮತ್ತು ಪಿ. ಮುರಳೀಧರನ್‌ರನ್ನು ಅಭಿನಂದಿಸಿ ಬಿಜೆಪಿ ಕಾರ್ಯಕರ್ತರು ಘೋಷಣೆಯನ್ನು ಕೂಗಿದರು.

ಸಿಪಿಎಂ, ಮುಸ್ಲಿಂಲೀಗ್ ಮತ್ತಿತರ ಹಲವು ಪಕ್ಷಗಳ  ಕಾರ್ಯಕರ್ತರು  ರೈಲಿಗೆ ಸ್ವಾಗತ ನೀಡಿದರು. ರೈಲು ಕಾಸರಗೋಡಿನಿಂದ ಮಂಗಳೂರಿನತ್ತ ಪ್ರಯಾಣ ಮುಂದುವರಿಸಿದಾಗ ಶಾಸಕ ಎನ್.ಎ. ನೆಲ್ಲಿಕುನ್ನು ಅದರಲ್ಲಿ ಮಂಗಳೂರಿಗೆ ಸಾಗಿದರು. ರೈಲುಗಾಡಿಗೆ ನೀಡಿದ ಸ್ವಾಗತ ರೈಲು ನಿಲ್ದಾಣದಲ್ಲಿ ಭಾರೀ ಉತ್ಸವದ ಪ್ರತೀತಿಯನ್ನು ಬೀರಿತ್ತು.

NO COMMENTS

LEAVE A REPLY