ಆವರಣ ಗೋಡೆ ಕುಸಿದು ಮನೆ ಮೇಲೆ ಬಿದ್ದು ಮಹಿಳೆ, ಮೊಮ್ಮಗ ದಾರುಣ ಮೃತ್ಯು

0
28

ಪುತ್ತೂರು: ಭಾರೀ ಮಳೆಗೆ ಗುಡ್ಡೆ ಮೇಲಿನ ಆವರಣಗೋಡೆ ಮನೆ ಮೇಲೆ ಬಿದ್ದು ಅಜ್ಜಿ ಮತ್ತು ಮೊಮ್ಮಗ ದಾರುಣವಾಗಿ ಸಾವನ್ನಪ್ಪಿದ ವಿದ್ರಾವಕ ಘಟನೆ ಪುತ್ತೂರು ಬಳಿ ಇಂದು ಮುಂಜಾನೆ ನಡೆದಿದೆ. ಪುತ್ತೂರು ಹೆಬ್ಬಾರ್‌ಬೈಲು ನಿವಾಸಿಗಳಾದ ಪಾರ್ವತಿ(೬೫), ಅವರ ಮೊಮ್ಮಗ ಧನುಷ್(೧೧) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ಇಂದು ಮುಂಜಾನೆ ೨.೩೦ಕ್ಕೆ ಈ ದುರ್ಘಟನೆ ನಡೆದಿದೆ. ಸಾವನ್ನಪ್ಪಿದ ಪಾರ್ವತಿಯ ಪುತ್ರ ಮಹೇಶ್‌ರ ಪುತ್ರನಾಗಿದ್ದಾನೆ  ಮೃತ ಧನುಷ್. ಆತ ಸುದಾನ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಯಾಗಿದ್ದಾನೆ. ಪಾರ್ವತಿಯವರ ಪತಿ ಕೊಡಿಪ್ಪಾಡಿಯಲ್ಲಿ ಹೋಟೆಲ್‌ವೊಂದನ್ನು ನಡೆಸುತ್ತಿದ್ದರು. ಅವರು ಕಳೆದ ಮೇ ತಿಂಗಳಲ್ಲಿ ತೀರಿಕೊಂಡಿದ್ದರು.

ಪುತ್ತೂರಿನಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿಯತೊಡಗಿತ್ತು. ಆ ವೇಳೆ ಮನೆ ಪಕ್ಕದ ಭಾರೀ ಎತ್ತರದ ತಡೆಗೋಡೆ ಇಂದು ಮುಂಜಾನೆ ಕುಸಿದು ಪಾರ್ವತಿ ವಾಸಿಸುತ್ತಿರುವ ಮನೆ ಮೇಲೆ ಬಿದ್ದಿದೆ. ಆ ವೇಳೆ ಮನೆಯ ಒಂದು ಕೊಠಡಿಯಲ್ಲಿ ಪಾರ್ವತಿ ಮತ್ತು ಧನುಷ್ ಮಲಗಿದ್ದರು. ಮಲಗಿದ್ದ ಕೊಠಡಿಯ ಮೇಲೆಯೇ ತಡೆಗೋಡೆ ಕುಸಿದು ಬಿದ್ದಿದೆ. ತಕ್ಷಣ ಮನೆ ಮಂದಿ, ಊರವರು ಮತ್ತು ನಗರಸಭಾ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮಣ್ಣಿನಡಿ ಸಿಲುಕಿದ ಧನುಷ್ ಮತ್ತು ಪಾರ್ವತಿಯನ್ನು ಹೊರಕ್ಕೆ ತೆಗೆದು ಪಕ್ಕದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರಿಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆಸಾಗಿಸಲಾಗಿದೆ. ಮೃತ ಪಾರ್ವತಿ ಮಕ್ಕಳಾದ ಮಹೇಶ, ಯೋಗೀಶ್, ಗಾಯತ್ರಿ, ರಾಜೇಶ್ವರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY