ಉಪ್ಪಳ ಬಳಿ ಜೀಪು-ಲಾರಿ ಢಿಕ್ಕಿ: ಐದು ಮಂದಿ ದಾರುಣ ಮೃತ್ಯು

0
28

ಉಪ್ಪಳ: ಇಲ್ಲಿನ ನಯಾಬಜಾರ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿದ್ದು, ೧೨ ಮಂದಿ ಗಾಯಗೊಂಡಿದ್ದಾರೆ. ಜೀಪು ಹಾಗೂ ಸರಕು ಲಾರಿ ಪರಸ್ಪರ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.  ಜೀಪಿನಲ್ಲಿದ್ದ ಐದು ಮಂದಿ ತಕ್ಷಣ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಹಾಗೂ ಚಾಲಕನ ಸಹಿತ ಇಬ್ಬರು ಪುರುಷರಾಗಿದ್ದಾರೆ. ಗಾಯಗೊಂ ಡವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 

ತಲಪಾಡಿ ಬಳಿಯ ಕೆ.ಸಿ. ರೋಡ್ ಅಜಿನಡ್ಕ ನಿವಾಸಿ   ಮೊಯ್ದೀನ್ ಎಂಬವರ ಪತ್ನಿ ಬೀಫಾತಿಮ್ಮ (೬೫),  ಇವರ ಅಳಿಯ ಮುಸ್ತಾಕ್ (೪೧), ಸಂಬಂಧಿಕರಾದ ಇಮ್ತಿಯಾಸ್ (೩೫), ಇವರ ಪತ್ನಿ ತೂಮಿನಾಡು ನಿವಾಸಿ ಅಸ್ಮಾ (೩೦), ನಸೀಮ (೩೮)  ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.ಬೀಫಾತಿಮ್ಮರ ಪುತ್ರಿ ಸೌದ (ಮೃತಪಟ್ಟ ಮುಸ್ತಾಕ್‌ರ ಪತ್ನಿ), ಸಂಬಂಧಿಕರಾದ ಅಮಲ್, ಮಸೂದ್, ಮರ್ಶೂದ, ಆಬಿದ್, ಫಾತಿಮ, ಸುಮಯ್ಯ, ಆಸ್ಮ, ಆಸಿಯ, ತಾಹಿರ, ಸಲ್ಮಾನ್ ಫಾರಿಸ್, ಅಮರ್ ಎಂಬಿವರು ಗಾಯಗೊಂಡವರಾಗಿದ್ದಾರೆ.   ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕ ವೆಂದು ಹೇಳಲಾಗುತ್ತಿದೆ. ಮೃತಪಟ್ಟ ಬೀಫಾತಿಮ್ಮರ ಪಾಲಕ್ಕಾಡ್‌ನಲ್ಲಿ ರುವ ಪುತ್ರಿಯ ಗೃಹಪ್ರವೇಶ ನಿನ್ನೆ ನಡೆದಿತ್ತು. ಅಲ್ಲಿಗೆ ತೆರಳಿದ ಸಂಬಂಧಿಕರು   ಕಾರ್ಯಕ್ರಮದ ಬಳಿಕ ನಿನ್ನೆ ಮರಳಿ ಪ್ರಯಾಣ ಹೊರಟಿದ್ದರು.  ಈ ವೇಳೆ ನಾಡನ್ನೇ ಬೆಚ್ಚಿ ಬೀಳಿಸಿದ ಭೀಕರ ಅಪಘಾತ ಇಂದು ಬೆಳಿಗ್ಗೆ ಸಂಭವಿಸಿದೆ. ಮೃತದೇಹಗಳನ್ನು ಮಂಗಲ್ಪಾಡಿ ಸಾಮೂಹಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿರಿಸಲಾಗಿದೆ.ಇಂದು ಬೆಳಿಗ್ಗೆ ೬ ಗಂಟೆಗೆ ನಯಾಬಜಾರ್‌ನಲ್ಲಿ ರುವ ಮಂಗಲ್ಪಾಡಿ ಸಾಮೂಹಿಕ ಆರೋಗ್ಯ ಕೇಂದ್ರದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.  ಪಾಲಕ್ಕಾಡ್‌ನಿಂದ ಮರಳುತ್ತಿದ್ದವರು ಪ್ರಯಾಣಿಸಿದ ಜೀಪು ಹಾಗೂ ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಸರಕು ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಜೀಪಿನ ಮುಂಭಾಗ ಪೂರ್ಣ ನಜ್ಜುಗುಜ್ಜಾಗಿದೆ. ಲಾರಿಯ ಮುಂಭಾಗದ ಚಕ್ರ ಬೇರ್ಪಟ್ಟಿದೆ. ಇಮ್ತಿಯಾಸ್ ಜೀಪನ್ನು ಚಲಾಯಿಸುತ್ತಿದ್ದರೆನ್ನಲಾಗಿದೆ. ಅಪಘಾತ ಬಗ್ಗೆ ತಿಳಿದು ತಲುಪಿದ ನಾಗರಿಕರು ಪೊಲೀಸರಿಗೆ ಹಾಗೂ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ತಲುಪಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ನಾಗರಿಕರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ದ್ದಾರೆ. ಜೀಪಿನೊಳಗೆ ಸಿಲುಕಿದ್ದ ಚಾಲಕನನ್ನು ಒಂದು ಗಂಟೆ ಕಾಲ ನಡೆಸಿದ ಪ್ರಯತ್ನದ ಬಳಿಕವೇ ಹೊರ ತೆಗೆಯಲಾಗಿದ್ದು, ಅಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.

ವಾಹನಗಳ ಚಾಲಕರ ಪೈಕಿ ಯಾರಾದರೂ ನಿದ್ರಿಸಿರುವುದರಿಂದ ಈ ಅಪಘಾತ ಸಂಭವಿಸಿರಬಹು ದೆಂದು ಅಂದಾಜಿಸಲಾಗಿದೆ.

NO COMMENTS

LEAVE A REPLY