ಮಳೆ: ಕಾಸರಗೋಡು ಸಹಿತ ೯ ಜಿಲ್ಲೆಗಳಲ್ಲಿ ಭೂ ಕುಸಿತ ಸಾಧ್ಯತೆ; ಕಟ್ಟೆಚ್ಚರಕ್ಕೆ ನಿರ್ದೇಶ

0
23

ಕಾಸರಗೋಡು: ರಾಜ್ಯದಾದ್ಯಂ ತವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಇನ್ನೂ ಅದೇ ರೀತಿ ಮುಂದುವರಿ ಯುತ್ತಿದ್ದು, ಅದರಿಂದಾಗಿ ಕಾಸರಗೋಡು ಜಿಲ್ಲೆಯ ಮಲೆನಾಡ ಪ್ರದೇಶ ಸೇರಿದಂತೆ ಒಂಭತ್ತು ಜಿಲ್ಲೆಗಳಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮತ್ತು ಕಂದಾಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮಾತ್ರವಲ್ಲದೆ ಈ ಬಗ್ಗೆ ಕಟ್ಟೆಚ್ಚರ ಪಾಲಿಸುವಂತೆ ಯೂ ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಜಾಗ್ರತಾ  ನಿರ್ದೇಶ ನೀಡಲಾಗಿದೆ.

ಕಾಸರಗೋಡು ಮಾತ್ರವಲ್ಲದೆ, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ಪಾಲ್ಘಾಟ್, ತೃಶೂರು, ಎರ್ನಾಕುಳಂ, ಇಡುಕ್ಕಿ ಮತ್ತು ಕೋಟ್ಟಯಂ ಜಿಲ್ಲೆಗಳಲ್ಲಿ ಭೂ ಕುಸಿತ ಸಾಧ್ಯತೆ ಇದೆ. ಭೂಕುಸಿತ ಬೆದರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ತಾಲೂಕು ಮಟ್ಟಗಳ ಕಂಟ್ರೋಲ್ ರೂಮ್‌ಗಳು ಜುಲೈ ೧೩ರ ತನಕ ದೈನಂದಿನ ೨೪ ತಾಸುಗಳ ತನಕವೂ ತೀವ್ರ ನಿಗಾ ಮತ್ತು ಕಟ್ಟೆಚ್ಚರ ಪಾಲಿಸಬೇಕೆಂದು ಕಂದಾಯ ಇಲಾಖೆ ನಿರ್ದೇಶ ನೀಡಿದೆ. ಮಾತ್ರವಲ್ಲದೆ ಇಂತಹ ಪ್ರದೇಶಗಳಲ್ಲಿ ದುರಂತ ಪರಿಹಾರ ಪಡೆ ಮತ್ತು ಸಂತ್ರಸ್ತ ಶಿಬಿರಗಳನ್ನು ಏರ್ಪಡಿಸುವ ಕ್ರಮವನ್ನೂ ಕೈಗೊಳ್ಳಲಾಗಿದೆ. ಸಂತ್ರಸ್ತರ ಶಿಬಿರಗಳ ಕಟ್ಟಡಗಳ ಕೀಲಿಗೊಂಚಲುಗಳನ್ನು ಸಂಬಂಧಪಟ್ಟ ಗ್ರಾಮಾಧಿಕಾರಿಗಳು ಮತ್ತು ತಹಶೀಲ್ದಾರರು ಸದಾ ತಮ್ಮ ಕೈವಶವಿರಿಸಬೇಕು.

ರಾಜ್ಯದಲ್ಲಿ ಧಾರಾಕಾರ ಮಳೆ ಇನ್ನೂ ಹಲವು ದಿನಗಳ ತನಕ ಮುಂದುವರಿಯುವ ಸಾಧ್ಯತೆ ಇದೆ. ಇದರಿಂದ ಭೂಕುಸಿತ ಮಾತ್ರವಲ್ಲ, ನೆರೆ, ಗುಡ್ಡೆ ಮೇಲಿನ ಕಲ್ಲುಗಳೂ ಸಡಿಲಗೊಂಡು ಕುಸಿದು  ಬೀಳುವ ಸಾಧ್ಯತೆಯೂ ಇದೆ.

ಕೇಂದ್ರ ಸರಕಾರವೂ ಅಗತ್ಯದ ನೆರವು ಘೋಷಿಸಿದೆ. ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ ೩೫ರಿಂದ ೪೫ ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದೂ ಆ ಬಗ್ಗೆ ಜನರು ಜಾಗ್ರತೆ ಪಾಲಿಸ ಬೇಕೆಂದು  ಹವಾಮಾನ ಇಲಾಖೆ ತಿಳಿಸಿದೆ.

 

NO COMMENTS

LEAVE A REPLY