ಏಮ್ಸ್: ಜಿಲ್ಲೆಯಲ್ಲಿ ಸ್ಥಾಪಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳು ರಂಗಕ್ಕೆ

0
14

ಕಾಸರಗೋಡು: ದೇಶದಲ್ಲಿ ಅತ್ಯಾಧುನಿಕ ಆರೋಗ್ಯ ಪರಿಚರಣೆ ಸಂಸ್ಥೆಯಾದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಏಮ್ಸ್)ನ ಮೆಡಿಕಲ್ ಕಾಲೇಜು ರಾಜ್ಯದಲ್ಲಿ ಮಂಜೂರು ಮಾಡಲು ನಾಲ್ಕು ವರ್ಷದ ಹಿಂದೆ ಕೇಂದ್ರ ಸರಕಾರ ಒಪ್ಪಿಗೆ ನೀಡಿಯೂ, ಅಂದು ಅಧಿಕಾರದಲ್ಲಿದ್ದ ಯುಡಿಎಫ್, ಈಗ ಅಧಿಕಾರದಲ್ಲಿರುವ ಸಿಪಿಎಂ ಏಮ್ಸ್‌ಗೆ ಅನುಕೂಲವಾದ ನಿಲುವು ತಾಳದಿರುವುದು ಜಿಲ್ಲೆಯಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳು, ಪ್ರಧಾನ ಖಾಸಗಿ ಆಸ್ಪತ್ರೆಗಳು ಇಲ್ಲದ ಕಾಸರಗೋಡು ಜಿಲ್ಲೆಯಲ್ಲಿ ಸಾಕಷ್ಟು ಸ್ಥಳವಿದ್ದರೂ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಲು ಎರಡೂ ಒಕ್ಕೂಟಗಳು ಆಸಕ್ತಿವಹಿಸುತ್ತಿಲ್ಲ ಎಂಬ ಆರೋಪ ಬಲಗೊಳ್ಳುತ್ತಿದೆ. ಏಮ್ಸ್‌ಗೆ ಸ್ಥಾಪಿಸುವುದಕ್ಕೆ ಸಾವಿರಾರು ಕೋಟಿ ರೂ. ವೆಚ್ಚವಿದ್ದರೂ ಅದಕ್ಕೆ ಅಗತ್ಯವಿರುವ ಹಣ ಕೇಂದ್ರ ಸರಕಾರ  ಭರವಸೆ ನೀಡಿ ನಾಲ್ಕು ವರ್ಷವಾದರೂ ಕ್ರಮ ಇಲ್ಲದಿರುವುದು ಜನರಲ್ಲಿ ರೋಷಕ್ಕೆಡೆ ಮಾಡಿಕೊಟ್ಟಿದೆ. ರಾಜ್ಯ ಸರಕಾರ ಕಾಲೇಜಿಗೆ  ಅಗತ್ಯವಿರುವ ೨೦೦ ಎಕ್ರೆ ಸ್ಥಳ ಬಿಟ್ಟುಕೊಡಬೇಕಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಸರಕಾರಿ ಸ್ಥಳ ಕಾಸರಗೋಡಿನಲ್ಲಿ ಇದೆ. ಪೈವಳಿಕೆ, ಕರಂದಳಂ, ಮಡಿಕೈ ಎಂಬೆಡೆಗಳಲ್ಲಿ ಇದಕ್ಕಗತ್ಯವಾದ ಸರಕಾರಿ ಸ್ಥಳವಿದೆ. ಮಂಜೇಶ್ವರದಲ್ಲೂ ಸ್ಥಳ ನೀಡುವ ಸೂಚನೆ ಇದೆ. ಇದೇ ವೇಳೆ ಕಲ್ಲಿಕೋಟೆಯಲ್ಲಿ ಏಮ್ಸ್‌ಗೆ ಬೇಕಾಗಿ ೨೦೦ ಎಕ್ರೆ ಸ್ಥಳ ಪತ್ತೆಮಾಡಿದ್ದಾರೆಂದು ಇತ್ತೀಚೆಗೆ ಆರೋಗ್ಯ ಖಾತೆ ಸಚಿವೆ ಸೂಚಿಸಿದ್ದಾರೆ. ಇದು ಜಿಲ್ಲೆಯಲ್ಲಿ ರೋಷ ಹೆಚ್ಚಿಸಿದೆ. ಕಲ್ಲಿಕೋಟೆಯಲ್ಲಿ ಈಗ ರಾಜ್ಯದ ಅತ್ಯಂತ ಉನ್ನತ ಸರಕಾರಿ ಮೆಡಿಕಲ್ ಕಾಲೇಜು, ಎರಡು ಖಾಸಗಿ ಮೆಡಿಕಲ್ ಕಾಲೇಜುಗಳು, ಬೃಹತ್ ಖಾಸಗಿ ಆಸ್ಪತ್ರೆಗಳು ಈಗ ಇದೆ. ಸರಕಾರಿ ವಲಯದಲ್ಲಿ, ಖಾಸಗಿ ವಲಯದಲ್ಲಿ ಮೆಡಿಕಲ್ ಕಾಲೇಜುಗಳಿಲ್ಲದ ರಾಜ್ಯದ ಏಕ ಜಿಲ್ಲೆ ಕಾಸರಗೋಡು ಆಗಿದೆ. ಮೆಡಿಕಲ್ ಕಾಲೇಜಿಗೆ ಅಗತ್ಯದ ಸ್ಥಳ ಅತ್ಯಂತ ಕನಿಷ್ಠ ವೆಚ್ಚದಲ್ಲಿ ಲಭ್ಯವಾಗುವುದು ಕೂಡಾ ಜಿಲ್ಲೆಯಲ್ಲಾಗಿದೆ. ಆದರೂ ಏಮ್ಸ್‌ಗೆ ಕಾಸರಗೋಡನ್ನು ಪರಿಗಣಿಸದಿರುವುದು ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನೊಂದಿಗೆ ರಾಜ್ಯದ ಎಡ-ಬಲ ಒಕ್ಕೂಟಗಳ ಹೊಂದಾಣಿಕೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಶ್ರೀಕಾಂತ್ ಆರೋಪಿಸಿದರು.

ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಆಗ್ರಹಿಸಿ ಶ್ರೀಕಾಂತ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆರೋಗ್ಯ ಸಚಿವೆ ಶೈಲಜಾ, ಸಚಿವ ಇ. ಚಂದ್ರಶೇಖರನ್, ಸಂಸದ ಪಿ. ಕರುಣಾ ಕರನ್ ಎಂಬವರಿಗೆ ಮನವಿ ನೀಡಿದ್ದಾರೆ. ಮರ್ಚಂಟ್ಸ್ ಅಸೋಸಿಯೇಶನ್, ಜಿಲ್ಲಾ ಸಮಿತಿ, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಸಮಿತಿ, ಎಂಡೋಸಲ್ಫಾನ್ ಪೀಡಿತದ ಒಕ್ಕೂ ಟಗಳು, ಮಂಜೇಶ್ವರ ಬ್ಲೋಕ್ ಪಂಚಾಯತ್ ಮೊದಲಾದ ಸಂಘಟನೆಗಳು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಬೇಕೆಂದು ಆಗ್ರಹಿಸಿವೆ.

NO COMMENTS

LEAVE A REPLY