ಊರು ಕಾಣಲೆಂದು ಮನೆ ಬಿಟ್ಟು ಬಂದ ಮುಂಬೈ ಬಾಲಕರಿಬ್ಬರಿಗೆ ಆರ್.ಪಿ.ಎಫ್ ಸಂರಕ್ಷಣೆ

0
398

ಕಾಸರಗೋಡು: ಮನೆ ಬಿಟ್ಟು ಊರು ಸುತ್ತಲು ಬಂದ ಮುಂಬೈಯ  ನಿವಾಸಿಗಳಾದ ಬಾಲಕರಿಬ್ಬರು ರೈಲಿನಲ್ಲಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಬಂದಿಳಿದು ಏನು ಮಾಡಬೇಕೆಂದು ತಿಳಿಯದೆ ಅತ್ತಿತ್ತ ತಿರುಗಾಡುತ್ತಿದ್ದುದನ್ನು ಕಂಡ ಕಾಸರಗೋಡು ರೈಲ್ವೇ ಭದ್ರತಾ ಪಡೆಯವರು ಅವರನ್ನು ವಶಕ್ಕೆ ತೆಗೆದು ಚೈಲ್ಡ್ ಲೈನ್‌ಗೆ ಹಸ್ತಾಂತರಿಸಿ ಅವರಿಗೆ ಸಂರಕ್ಷಣೆ ಒದಗಿಸಿದ ಘಟನೆ ನಿನ್ನೆ ನಡೆದಿದೆ.

ಮುಂಬೈ ಅಂಧೇರಿ ವೆಸ್ಟನ್ ಹರ್ಷ(೧೫) ಮತ್ತು ಹೊಸು(೧೫) ಎಂಬವರು ಕೆಲವು ದಿನಗಳಿಂದ ಮನೆ ಬಿಟ್ಟು ಗೋವಾದ ಮಡ್ಗೋವಾಕ್ಕೆ ಬಂದು ಅಲ್ಲಿ  ಉಳಿದುಕೊಂಡಿ ದ್ದರು. ಬಳಿಕ ಅವರು ಅಲ್ಲಿಂದ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ  ನಿನ್ನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಬಂದಿಳಿದ್ದರು. ಆ ವೇಳೆ ಅವರು ಕೈಯಲ್ಲಿರುವ ಹಣ ಪೂರ್ಣವಾಗಿ ಖಾಲಿಯಾಗಿತ್ತು. ಇಲ್ಲಿನ ರೈಲು ನಿಲ್ದಾಣದಲ್ಲಿ ಬಂದಿಳಿದ ಆ ಬಾಲಕರಿಬ್ಬರು ಹಸಿವು ತಾಳಲಾರದೆ ಅತ್ತಿತ್ತ ತಿರುಗಾಡುತ್ತಿದ್ದುದನ್ನು ಗಮನಿಸಿದ ಆರ್.ಸಿ.ಎಫ್ ಅಧಿಕಾರಿಗಳು ಅವರನ್ನು ವಶಕ್ಕೆ ತೆಗೆದು ಪ್ರಶ್ನಿಸಿದಾಗ ಊರು ಬಿಟ್ಟು ಬಂದ ವಿಷಯ ಆ ಬಾಲಕರಿಬ್ಬರು ತಿಳಿಸಿದ್ದಾರೆ.

ಈ ಇಬ್ಬರು ಬಾಲಕರು ಮುಂಬೈಯ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆ ಪೈಕಿ ಹರ್ಷನ ತಂದೆ ಮುಂಬೈಯ ಓರ್ವ ಗುತ್ತಿಗೆದಾರರಾಗಿದ್ದು, ಇನ್ನೋರ್ವ ಬಾಲಕ ಹೊಸುನ ತಂದೆ ಮುಂಬೈ ಸಿನೇಮಾರಂಗದ ಕಾರ್ಯಕರ್ತನಾಗಿದ್ದಾನೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಬಳಿಕ ಆರ್.ಪಿ.ಎಫ್‌ನವರು ಮುಂಬೈಯಲ್ಲಿರುವ ಆ ಬಾಲಕರ ಹೆತ್ತವರಿಗೆ ಫೋನಾಯಿಸಿ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಇಬ್ಬರು ಮಕ್ಕಳು ನಾಪತ್ತೆಯಾದ ಬಗ್ಗೆ ಮುಂಬೈ ಅಂಧೇರಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸು ಕೂಡಾ ದಾಖಲುಗೊಂಡಿದೆ. ಈ ಬಾಲಕರನ್ನು ಈಗ ಚೈಲ್ಡ್ ಲೈನ್‌ನ ಸಂರಕ್ಷಣೆಗೆ ನೀಡಲಾಗಿದೆ. ಹೆತ್ತವರು ಬಂದ ಬಳಿಕ ಮಕ್ಕಳನ್ನು ಅವರ ಜತೆ ಕಳುಹಿಸಿಕೊಡುವ ತಯಾರಿಕೆಯೂ ನಡೆಯುತ್ತಿದೆ.

NO COMMENTS

LEAVE A REPLY