ಗಲ್ಫ್ ಉದ್ಯೋಗಿಯಿಂದ ಹಣ ಲಪಟಾಯಿಸಲು ವಿವಾಹ ನಾಟಕ: ಯುವತಿ ಕಾಸರಗೋಡಿನಲ್ಲಿ ಸೆರೆ

0
36

ಕಾಸರಗೋಡು: ಗಲ್ಫ್ ಉದ್ಯೋಗಿಯಿಂದ ಹಣ ಲಪಟಾಯಿ ಸಲು ವಿವಾಹವೆಂದು ನಾಟಕವಾಡಿ ವಂಚಿಸಿದ ಪ್ರಕರಣದಲ್ಲಿ ಆರೋಪಿ ಯಾದ ಯುವತಿಯನ್ನು ಪೊಲೀಸರು ಕಾಸರಗೋಡಿನಿಂದ ಸೆರೆ ಹಿಡಿದಿದ್ದಾರೆ.

ಕೂಡ್ಲು ಕಾಳ್ಯಂಗಾಡ್ ಶ್ರೀ ಜಗದಂಬಾದೇವಿ ಕ್ಷೇತ್ರ ಸಮೀಪದ ಕ್ವಾರ್ಟ ರ್ಸ್‌ನಲ್ಲಿ ವಾಸಿಸುತ್ತಿರುವ ಸಮೀರ ಎಂಬಾಕೆ ಬಂಧಿತ ಯುವತಿಯೆಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ:

ಪಯ್ಯನ್ನೂರು ನಿವಾಸಿಯೂ ಈ ಹಿಂದೆ ಹೋಟೆಲ್ ವ್ಯಾಪಾರಿಯಾಗಿದ್ದು ಇದೀಗ ಗಲ್ಫ್‌ನಲ್ಲಿರುವ ವ್ಯಕ್ತಿಯಿಂದ ಹಣ ಲಪಟಾಯಿಸುವ ಉದ್ದೇಶದಿಂದ ಸಮೀರ ಹಾಗೂ ಮತ್ತಿಬ್ಬರು ಸೇರಿ ಉಪಾಯ ಹೆಣೆದಿದ್ದಾರೆ. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಕಾಂಗೋಲ್ ನಿವಾಸಿಯೂ ಕುರುಮಾತೂರ್ ಎಂಬಲ್ಲಿ ವಾಸಿಸುವ ಮುಸ್ತಫ ಎಂಬಾತನನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಈತನನ್ನು ತನಿಖೆ ನಡೆಸುವ ವೇಳೆ ಸಮೀರ ಹಾಗೂ ತಂಡ ಸೇರಿ ನಡೆಸಿದ ವಂಚನೆ ಬೆಳಕಿಗೆ ಬಂದಿದೆ. ಗಲ್ಫ್ ಉದ್ಯೋಗಿಯಿಂದ ಹಣ ಲಪಟಾಯಿಸಲು ಅನ್ವರ್ ಹಾಗೂ ಅಬ್ದುಲ್ಲ ಎಂಬವರು ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ಸಮೀರ ಅಬ್ದುಲ್ಲನ ಸಹೋದರಿಯಂತೆ ವರ್ತಿಸಿದ್ದು, ಬಳಿಕ ಗಲ್ಫ್ ಉದ್ಯೋಗಿಗೆ ಆಕೆಯನ್ನು ವಿವಾಹ ಮಾಡಿಕೊಡಲು ನಿರ್ಧರಿಸಲಾಗಿದೆ. ಇದರಂತೆ ಮದುವೆಯನ್ನು ಗೌಪ್ಯವಾಗಿ ನಡೆಸಲಾಯಿತು. ವಿವಾಹ ಖರ್ಚಿನ ಹೆಸರಲ್ಲಿ ಅನ್ವರ್ ಹಾಗೂ ಅಬ್ದುಲ್ಲ ಸೇರಿ ೮೦,೦೦೦ ರೂ.ಗಳನ್ನು ಗಲ್ಫ್ ಉದ್ಯೋಗಿಯಿಂದ ಪಡೆಯಲಾಗಿತ್ತು. ಅನಂತರ ವಿವಾಹ ನೋಂದಣಿ ಮಾಡುವಂತೆ ಗಲ್ಫ್ ಉದ್ಯೋಗಿಯಲ್ಲಿ ಈ ತಂಡ ತಿಳಿಸಿತ್ತು. ಆದರೆ ಈ ಹಿಂದೆ ಮದುವೆಯಾಗಿ ಪತ್ನಿ, ಮಕ್ಕಳಿರುವ ಗಲ್ಫ್ ಉದ್ಯೋಗಿ ಸಮೀರಳೊಂದಿಗಿನ ವಿವಾಹ  ನೋಂದಾಣಿಗೆ ಹಿಂಜರಿದಿದ್ದಾರೆ. ಈ ವೇಳೆ ಗಲ್ಫ್ ಉದ್ಯೋಗಿಗೆ ಬೆದರಿಕೆಯೊಡ್ಡಿದ ತಂಡ ಅನಂತರ ೫ ಲಕ್ಷ ರೂಪಾಯಿ ಲಪಟಾಯಿಸಿದೆ. ಅನಂತರವೂ ಹಣಕ್ಕೆ ಬೇಡಿಕೆಯುಂಟಾದಾಗ ಗಲ್ಫ್ ಉದ್ಯೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಅನ್ವರ್ ಹಾಗೂ ಅಬ್ದುಲ್ಲನನ್ನು ಬಂಧಿಸಿದ ಪೊಲೀಸರು ತನಿಖೆ ವಿಸ್ತರಿಸಿದಾಗ  ಸಮೀರಳ ಕುರಿತು ಮಾಹಿತಿ ಲಭಿಸಿದೆ. ಇದರಂತೆ ಕಾಸರಗೋಡಿಗೆ ತಲುಪಿದ ಪಯ್ಯನ್ನೂರು ಪೊಲೀಸರು ಸಮೀರಳನ್ನು ಬಂಧಿಸಿದ್ದಾರೆ. ಇದೇ ವೇಳೆ ಕಾಳ್ಯಂಗಾಡ್‌ನಲ್ಲಿ ಕ್ವಾರ್ಟರ್ಸ್‌ನಲ್ಲಿ  ಮೂರನೇ ಮಹಡಿಯಲ್ಲಿ ಹವಾ ನಿಯಂತ್ರಿತ ಕೊಠಡಿಯಲ್ಲಿ ವಾಸಿಸುತ್ತಿದ್ದ ಸಮೀರಳ ಜತೆಗೆ ಓರ್ವ ಯುವಕನೂ ವಾಸಿಸುತ್ತಿದ್ದನೆಂದು  ಹೇಳಲಾಗುತ್ತಿದೆ.  ಸಮೀರಳನ್ನು ತನಿಖೆಗೊಳಪಡಿಸಿದರೆ ಇನ್ನಷ್ಟು ವಂಚನೆ ಪ್ರಕರಣ ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸುತ್ತಿದ್ದಾರೆ.

NO COMMENTS

LEAVE A REPLY