ಮಂಜೇಶ್ವರ: ರಾತ್ರಿ ಗಸ್ತು ನಡೆಸುತ್ತಿದ್ದ ಪೊಲೀಸರನ್ನು ತೂಮಿನಾ ಡಿನಲ್ಲಿ ಆಕ್ರಮಿಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಕುಂಜತ್ತೂರು ಬಳಿಯ ತೂಮಿನಾಡು ನಿವಾಸಿ ಸಿದ್ದಿಕ್ (೨೩) ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತ ಒಂದನೇ ಆರೋಪಿಯಾಗಿದ್ದು, ಎರಡನೇ ಆರೋಪಿ ಕುಂಜತ್ತೂರು ನಿವಾಸಿ ಅಬ್ದುಲ್ ನಾಸಿರ್ (೨೦) ಎಂಬಾತನನ್ನು ಈಹಿಂದೆ ಸೆರೆಹಿಡಿಯಲಾಗಿದೆ. ಮಂಜೇಶ್ವರ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಸುನಿಲ್ ಕುಮಾರ್ (೪೪) ಆಕ್ರಮಣದಿಂದ ತಲೆಗೆ ಗಂಭೀರ ಗಾಯಗೊಂಡಿದ್ದರು. ಇವರ ಜೊತೆಯಲ್ಲಿದ್ದ ಎ.ಆರ್. ಕ್ಯಾಂಪ್‌ನ ದೀಪು ಎಂಬವರು ಆಕ್ರಮಣದಿಂದ ತಪ್ಪಿಸಿಕೊಂಡಿದ್ದರು. ಕಳೆದ ನವೆಂಬರ್ ೧೫ರಂದು ರಾತ್ರಿ ೧ ಗಂಟೆಗೆ ತೂಮಿನಾಡ್‌ನಲ್ಲಿ ಬೈಕ್ ನಲ್ಲಿಗಸ್ತು ತಿರುಗುತ್ತಿದ್ದಾಗ ಪೊಲೀಸರನ್ನು ತಂಡವೊಂದು ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಆಕ್ರಮಿಸಿತ್ತು. ಇದರಿಂದ ಸುನಿಲ್ ಕುಮಾರ್ ತಲೆಗೆ ಗಂಭೀರ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅಂದು ೫ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಇದರ ತನಿಖೆಯನ್ನು ಕುಂಬಳೆ ಸಿ.ಐ ಸುರೇಶ್‌ಬಾಬು ಕೈಗೆತ್ತಿಕೊಂಡಿದ್ದರು. ಇದರಂತೆ ನಿನ್ನೆ ರಾತ್ರಿ ಸಿದ್ದಿಕ್‌ನನ್ನು ಸಿ.ಐ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ. ಇಂದು ನ್ಯಾಯಾಲ ಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಉಳಿದ ೩ ಮಂದಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.