ನಿಲಯ್ಕಲ್: ಬಿಜೆಪಿ, ಹಿಂದೂ ಐಕ್ಯವೇದಿ ನೇತಾರರಿಗೆ ತಡೆ; ಮಾತಿನ ಜಟಾಪಟಿ

0
31

ನಿಲಯ್ಕಲ್: ಪಂಪಾ ದರ್ಶನಕ್ಕಾಗಿ ತಮ್ಮ ಸ್ವಂತ ವಾಹನಗಳಲ್ಲಿ ಬಂದ ಬಿಜೆಪಿ ಮತ್ತು ಹಿಂದೂ ಐಕ್ಯವೇದಿಕೆಯ ನೇತಾರರ ನ್ನು ನಿಲಯ್ಕಲ್‌ನಲ್ಲಿ ಪೊಲೀಸರು ಇಂದು ಬೆಳಿಗ್ಗೆ ತಡೆದಿದ್ದಾರೆ.

ಬಿಜೆಪಿ ರಾಷ್ಟ್ರೀಯ ನೇತಾರ ಪಿ.ಕೆ.ಕೃಷ್ಣದಾಸ್, ರಾಜ್ಯ ನೇತಾರ ಎ.ಎನ್. ರಾಧಾಕೃಷ್ಣನ್, ಬಿಜೆಪಿಯ ಪತ್ತನಂತಿಟ್ಟ ಜಿಲ್ಲೆಯ ನೇತಾರರು ಮತ್ತು ಹಿಂದೂ ಐಕ್ಯವೇದಿಕೆಯ ರಾಜ್ಯಾಧ್ಯಕ್ಷೆ ಪಿ.ಕೆ.ಶಶಿಕಲಾ ಸೇರಿದಂತೆ ಹಲವರು ಪಂಪಾಕ್ಕೆ ತೆರಳಲೆಂದು ಇಂದು ಬೆಳಿಗ್ಗೆ ೯.೧೫ಕ್ಕೆ ತಮ್ಮ ವಾಹನದಲ್ಲಿ ನಿಲಯ್ಕಲ್‌ಗೆ ಬಂದು ಅಲ್ಲಿಂದ ಪಂಪಾಕ್ಕೆ ಸಾಗುವ ವೇಳೆ  ಪೊಲೀಸರು ತಡೆಗಟ್ಟಿದ್ದಾರೆ. ಪಂಪಾ ಮತ್ತು ಸನ್ನಿಧಾನದಲ್ಲಿ ಬಿಗು ಸ್ಥಿತಿ ಇದ್ದು, ಆ ಹಿನ್ನೆಲೆಯಲ್ಲಿ ನೀವು ಪಂಪಾಕ್ಕೆ ಸಾಗುವಂತಿಲ್ಲವೆಂದು ತಿಳಿಸಿದ್ದಾರೆ. ಆ ಮಾತನ್ನು ಕೇಳಿ ತಾಳ್ಮೆ ಕಳೆದುಕೊಂಡ ಬಿಜೆಪಿ ನೇತಾರರು ಪೊಲೀಸರನ್ನು ತರಾಟೆಗೆತ್ತಿಕೊಂಡಾಗ ಪೊಲೀಸರು ಮತ್ತು ಬಿಜೆಪಿ ನೇತಾರರ ಮಧ್ಯೆ ಪರಸ್ಪರ  ವಾಗ್ವಾದ ಉಂಟಾಗಿ ಮಾತಿನ ಜಟಾಪಟಿ ನಡೆದಿದೆ. ಆಗ ಆ ಪರಿಸರದಲ್ಲಿ ಬಿಗು ಸ್ಥಿತಿ ನಿರ್ಮಾಣವಾಯಿತು. ಕೊನೆಗೆ ಪೊಲೀಸರು ಪರಸ್ಪರ ಚರ್ಚೆ ನಡೆಸಿ ಕೈಗೊಂಡ  ತೀರ್ಮಾನ ಪ್ರಕಾರ ಬಿಜೆಪಿ ಮತ್ತು ಹಿಂದೂ ಐಕ್ಯವೇದಿ ನೇತಾರರನ್ನು ಅವರ ವಾಹನದ ಬದಲು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪಂಪಾಕ್ಕೆ ತೆರಳಲು ಅನುಮತಿ ನೀಡುವ ಮೂಲಕ ಬಿಗು ಸ್ಥಿತಿ ಸಡಿಲುಗೊಂಡಿದೆ. ಶಬರಿಮಲೆಗೆ ಯುವತಿಯರ ಪ್ರವೇಶ ವಿರುದ್ಧ ಭಾರೀ ಪ್ರತಿಭಟನೆ ಎದ್ದಿರುವ ಹಿನ್ನೆಲೆಯಲ್ಲಿ ಸನ್ನಿಧಾನ, ಪಂಪಾ, ನಿಲಯ್ಕಲ್, ಎರುಮೇಲಿ ಮತ್ತಿತರ ಪ್ರದೇಶಗಳನ್ನು ಪೂರ್ಣವಾಗಿ ಪೊಲೀಸ್ ವ್ಯೂಹಕ್ಕೊಳಪಡಿಸಲಾಗಿದೆ.

NO COMMENTS

LEAVE A REPLY