ಮೀಯಪದವು ನಿವಾಸಿ, ಸಮಾಜ ಸೇವಕ ಕೊಲ್ಲಿಯಲ್ಲಿ ಮೃತ್ಯು: ಮೃತದೇಹ ನಾಳೆ ಊರಿಗೆ

0
38

ಮಂಜೇಶ್ವರ: ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮೀಯಪದವು ಬಳಿಯ ನಿವಾಸಿ ಯುವಕನ ಅಕಾಲಿಕ ಅಗಲಿಕೆ ನಾಡನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೀಯಪದವು ಮುನ್ನಿಪ್ಪಾಡಿ ಬಾನಬೆಟ್ಟು ನಿವಾಸಿ ದಿ| ಮಹಾಬಲರ ಪುತ್ರ ನವೀನ್‌ಚಂದ್ರ ಆಳ್ವ (೨೯) ಸೌದಿಯ ಒಮಾನ್‌ನಲ್ಲಿ ದುರಂತದಿಂದ ಮೃತಪಟ್ಟ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಲಿಫ್ಟ್ ಮೆಕ್ಯಾನಿಕ್ ಕೆಲಸದಲ್ಲಿ ನಿರತನಾಗಿದ್ದ ವೇಳೆ ಕಳೆದ ದ.೨೪ರಂದು ಉಂಟಾದ ದುರಂತದಲ್ಲಿ ನವೀನ್‌ಚಂದ್ರ ಮೃತಪಟ್ಟಿದ್ದರು. ಇವರ ಮೃತದೇಹವನ್ನು  ನಾಳೆ ಊರಿಗೆ ತರಲಾಗುವುದು. ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿಸುವ ಮೃತದೇಹವನ್ನು ಬಳಿಕ ಮನೆಗೆ ತಂದು ಅಂತ್ಯಸಂಸ್ಕಾರ ನಡೆಸಲಾಗುವುದು.

ಕಳೆದ ಎಂಟು ತಿಂಗಳ ಹಿಂದೆ ಮಂಗಳೂರಿನಲ್ಲಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಸೌದಿಗೆ ತೆರಳಲು ಅವಕಾಶ ಒದಗಿ ಬಂದಿತ್ತು. ಇದರಂತೆ ಒಮಾನ್‌ಗೆ ತೆರಳಿ ಅಲ್ಲಿನ ಕಂಪೆನಿಯೊಂದರಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು. ದ.೨೪ರಂದು ಕೆಲಸ ನಿರ್ವಹಿಸುತ್ತಿದ್ದಾಗ ಲಿಫ್ಟ್ ಇವರ ದೇಹಕ್ಕೆ ಬಿದ್ದು ದುರಂತ ಸಂಭವಿಸಿದೆ. ಬಳಿಕ ಉನ್ನತ ಮಟ್ಟದ ತನಿಖೆ ನಡೆಸಲಾಗಿದ್ದು, ಇತ್ತೀಚೆಗೆ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲು ಅಧಿಕಾರಿಗಳು ತೀರ್ಮಾನಿಸಿದ್ದರು. ಇದರಂತೆ ನಾಳೆ ಮೃತದೇಹವನ್ನು ಊರಿಗೆ ತರಲಾಗುವುದು.

ಮೃತ ಯುವಕ ಊರಿನಲ್ಲಿ ವಿವಿಧ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಮನೆ ನಿರ್ಮಿಸಿ ಗೃಹಪ್ರವೇಶ ಕೂಡಾ ನಡೆಸಲಾಗಿತ್ತು. ಮೃತ ಯುವಕ ತಾಯಿ ಮೀರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY