ಭೂತಕೋಲಕ್ಕೆ ಹೋದ ವ್ಯಕ್ತಿ ಕಲ್ಪಣೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ: ಕೊಲೆಯೆಂದು ಶಂಕೆ

0
71

ಕಾಸರಗೋಡು: ಭೂತಕೋಲ ನೋಡಲು ಹೋದ ವ್ಯಕ್ತಿ  ಕೆಂಪುಕಲ್ಲು ಕಲ್ಪಣೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ  ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.

ರಾಜಪುರಂಗೆ ಸಮೀಪದ ಇರಿಯಾ ಮಂಡೇಙಾನದ ದಾಮು (೬೮) ಎಂಬವರು ಫೆ. ೨೮ರಂದು ಪರಕ್ಕಳಾಯಿ ಮುಳಿವನ್ನೂರು ಕ್ಷೇತ್ರ ಬಳಿಯ ಕೆಂಪುಕಲ್ಲು ಕಲ್ಪಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ಇವರ ಸಾವು ಕೊಲೆಯಾಗಿದೆಯೆಂದು ಶಂಕೆ ವ್ಯಕ್ತಪಡಿಸಿ   ಮನೆಯವರು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದಾರೆ. ಅದರಂತೆ ಹೊಸದುರ್ಗ ಡಿವೈಎಸ್ಪಿ ಪಿ.ಎನ್. ಸಜೀವ್ ನೇತೃತ್ವದ ಪೊಲೀಸರ ತಂಡ ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ.

ಪರಕ್ಕಳಾಯಿ ಬಲಿಪ್ಪಾರ ಕರಿಚಾಮುಂಡಿ ದೇವಸ್ಥಾನದಲ್ಲಿ ನಡೆದ ಭೂತಕೋಲ ಕಾಣಲೆಂದು  ಮನೆಯಿಂದ ಹೊರಟ ದಾಮು ಬಳಿಕ ಮನೆಗೆ ಹಿಂತಿರುಗಲಿಲ್ಲ. ನಂತರ ಮನೆಯವರು ಹುಡುಕಾಟ ನಡೆಸಿದಾಗ ಕ್ಷೇತ್ರ ಬಳಿಯ ಕೆಂಪುಕಲ್ಲು ಕಲ್ಪಣೆಯಲ್ಲಿ ದಾಮು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆ ಸ್ಥಳಕ್ಕೆ ದಾಮು ಹೋಗುವ ಸಾಧ್ಯತೆಯೇ ಇಲ್ಲವೆಂದು ಮನೆಯವರು ಹೇಳುತ್ತಿದ್ದಾರೆ.  ತಲೆ ಹಿಂಭಾಗದಲ್ಲಿ ಆಳವಾದ ಗಾಯ ಕಾಣಿಸಿಕೊಂಡಿತ್ತು. ಕೈಬೆರಳುಗಳು ಪರಸ್ಪರ ಜೋಡಿಸಿದ ಸ್ಥಿತಿಯಲ್ಲಿತ್ತು. ಆದರೆ ಅವರು ಧರಿಸಿದ ಬಟ್ಟೆಯಲ್ಲಾಗಲೀ  ಮೃತದೇಹ ಪತ್ತೆಯಾದ ಸ್ಥಳದಲ್ಲಾಗಲೀ ರಕ್ತದ ಕಲೆಗಳು ಪತ್ತೆಯಾಗಿರಲಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಪರಿಯಾರಂ ವೈದ್ಯಕೀಯ ಕಾಲೇಜಿನ ಪೊಲೀಸ್ ಸರ್ಜನ್‌ರೂ ಸ್ಥಳಕ್ಕೆ ಆಗಮಿಸಿ  ಪರಿಶೀಲನೆ ನಡೆಸಿದ್ದರು. ಇದನ್ನು ಅವಲೋಕಿಸಿದಾಗ ದಾಮು ಸಾವು ಕೊಲೆಯಾಗಿದೆಯೆಂಬ ಶಂಕೆ ಇನ್ನಷ್ಟು ಬಲಗೊಳ್ಳುತ್ತಿದೆಯೆಂದು ಮನೆಯವರು ಹೇಳುತ್ತಿದ್ದಾರೆ.

ಕೆಂಪುಕಲ್ಲು ಕಲ್ಪಣೆ ಹೆಚ್ಚು ಆಳವೇನೂ ಇಲ್ಲ. ಅದಕ್ಕೆ ಬಿದ್ದಲ್ಲಿ ಸಾವನ್ನಪ್ಪುವ ಸಾಧ್ಯತೆಯೂ ಇಲ್ಲವೆಂದೂ ಮನೆಯವರು ಹೇಳುತ್ತಿದ್ದಾರೆ.

NO COMMENTS

LEAVE A REPLY