ಮನೆಗೆ ನುಗ್ಗಿ ಹಣ ಕಳವುಗೈದ ಇಬ್ಬರ ಕಯ್ಯಾರೆ ಸೆರೆ

0
40

ಬದಿಯಡ್ಕ: ಮನೆಗೆ ನುಗ್ಗಿ ಹಣ ಕಳವುಗೈದು ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರನ್ನು ನಾಗರಿಕರು ಕಯ್ಯಾರೆ ಸೆರೆಹಿಡಿದ ಘಟನೆ ನಡೆದಿದೆ. ಬಳಿಕ ಅವರನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಲಾಹುದ್ದೀನ್ (೧೮) ಹಾಗೂ ೧೭ರ ಹರೆಯದ ಇನ್ನೋರ್ವ  ಸೆರೆಗೀಡಾದವರೆಂದು ಹೇಳಲಾಗುತ್ತಿದೆ. ಇವರೀಗ ಬದಿಯಡ್ಕ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಮೊನ್ನೆ ರಾತ್ರಿ ಮುಂಡಿತ್ತಡ್ಕ  ಕುಂದಕಟ್ಟೆಯ ಅಶ್ರಫ್ ಎಂಬವರ ಮನೆಯಿಂದ ಹಣ ಕಳವುಗೈದು ಪರಾರಿಯಾಗುತ್ತಿದ್ದಾಗ ಇವರನ್ನು ನಾಗರಿಕರು ಸೆರೆಹಿಡಿದಿದ್ದಾರೆ. ಅಶ್ರಫ್ ಹಾಗೂ ಕುಟುಂಬ ಮೊನ್ನೆ ರಾತ್ರಿ ಮನೆಗೆ ಬೀಗ ಜಡಿದು ಎಲ್ಲಿಗೋ ಹೋಗಿದ್ದರು. ಈ ಸಂದರ್ಭದಲ್ಲಿ ಟೆರೇಸ್‌ನ ಮನೆಗೆ ಜೋಡಿಸಿದ್ದ ಸಿಮೆಂಟ್ ಶೀಟ್‌ನ್ನು ತೆರವುಗೊಳಿಸಿ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದರು. ಬಳಿಕ ಕಪಾಟಿನಲ್ಲಿದ್ದ ೧೨,೦೦೦ ರೂಪಾಯಿ ದೋಚಿ ಪರಾರಿಯಾಗಲೆತ್ನಿಸಿದ್ದಾರೆ. ರಾತ್ರಿ ೯ ಗಂಟೆಗೆ ಅಶ್ರಫ್ ಹಾಗೂ ಕುಟುಂಬ ಮನೆಗೆ ಮರಳಿದಾಗ  ಈ ಇಬ್ಬರು ಮನೆಯ ಮೇಲೆ ಕಂಡುಬಂದಿದ್ದಾರೆ. ಅಶ್ರಫ್ ಕೂಡಲೇ ಪರಿಸರ ನಿವಾಸಿಗಳನ್ನು ಸೇರಿಸಿಕೊಂಡು ಕಳ್ಳರನ್ನು ಸೆರೆಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕಳೆದ ಆರು ತಿಂಗಳೊಳಗೆ ಮುಂಡಿತ್ತಡ್ಕ, ಪಳ್ಳ, ಕನ್ಯಪ್ಪಾಡಿ ಸಹಿತ ವಿವಿಧೆಡೆಗಳಿಂದಾಗಿ ಹತ್ತರಷ್ಟು ಮನೆಗಳಿಗೆ ನುಗ್ಗಿರುವುದಾಗಿಯೂ, ಅಲ್ಲಿಂದ ಹಣ, ಮೊಬೈಲ್ ಫೋನ್ ಮೊದಲಾದವುಗಳನ್ನು ಕಳವು ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಈ ಕಳವುಗಳ ಕುರಿತು ಯಾರೂ ಪೊಲೀಸರಿಗೆ ದೂರು ನೀಡಿಲ್ಲವೆನ್ನಲಾಗುತ್ತಿದೆ. ಇಂದು ಸಂಜೆಯೊಳಗೆ ಕಳ್ಳರ ಬಂಧನ ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY