ಅಬುದಾಬಿಯಿಂದ ತಂದ ೫.೭೫ ಕಿಲೋ ಚಿನ್ನ ವಶ: ಕಾಸರಗೋಡು ನಿವಾಸಿ ಸಹಿತ ಮೂವರ ಸೆರೆ

0
55

ತಿರುವನಂತಪುರ: ಅಬುದಾಬಿ ಯಿಂದ ತಿರುವನಂತಪುರಕ್ಕೆ ಬಂದ ವಿಮಾನದಲ್ಲಿ ೫.೭೫ ಕಿಲೋ ಚಿನ್ನವನ್ನು ಡೈರೆಕ್ಟರ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ವಶಪಡಿಸಿಕೊಂಡಿದೆ. ಈ ಸಂಬಂಧ ಕಾಸರಗೋಡು ನಿವಾಸಿ ಸಹಿತ ಮೂವರನ್ನು ಬಂಧಿಸಲಾಗಿದೆ. ಕಾಸರಗೋಡು ಜಿಲ್ಲೆಯ ನಿವಾಸಿಯೆನ್ನಲಾದ ಇಬ್ರಾಹಿಂ ಮನ್ನೂರ್ (೩೩), ಆಲಪ್ಪುಳದ ಮುಹಮ್ಮದ್ ಶಿನಾಸ್ (೩೩), ಎರ್ನಾಕುಳಂನ ಕಣ್ಣನ್ (೩೦) ಎಂಬಿವರನ್ನು ಬಂಧಿಸಲಾಗಿದೆ. ಈ ಪೈಕಿ ಮುಹಮ್ಮದ್ ಶಿನಾಸ್ ವಿಮಾನ ನಿಲ್ದಾಣದ ಕಸ್ಟಮರ್ಸ್ ಸರ್ವಿಸ್ ಏಜೆಂಟ್ ಆಗಿದ್ದಾನೆ. ವಶಪಡಿಸಿದ ಚಿನ್ನಕ್ಕೆ ಎರಡು ಕೋಟಿ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ.

ನಿನ್ನೆ ಮುಂಜಾನೆ ೨.೩೦ಕ್ಕೆ ಅಬುದಾಬಿಯಿಂದ ತಲುಪಿದ ವಿಮಾನದಲ್ಲಿ ಇಬ್ರಾಹಿಂ ಹಾಗೂ ಕಣ್ಣನ್ ಚಿನ್ನ ತಂದಿದ್ದಾರೆ. ಈ ಚಿನ್ನವನ್ನು ವಿಮಾನ ನಿಲ್ದಾಣದಲ್ಲಿ ನೌಕರನಾಗಿರುವ ಮುಹಮ್ಮದ್ ಶಿನಾಸ್‌ನ ಮೂಲಕ ನೀಡಿ ಹೊರಕ್ಕೆ ಸಾಗಿಸುವ ಪ್ರಯತ್ನ ನಡೆಸಲಾಗಿದೆ. ಪ್ರಯಾಣಿಕರನ್ನು ಬಸ್‌ನಲ್ಲಿ ಹತ್ತಿಸಿ ಟರ್ಮಿನಲ್‌ಗೆ ಕರೆದೊಯ್ಯುತ್ತಿದ್ದಾಗ ಚಿನ್ನ ತಂದ ತಂಡ ಬಸ್‌ನಲ್ಲಿ ಅದನ್ನು ಮುಹಮ್ಮದ್ ಶಿನಾಸ್‌ಗೆ ಹಸ್ತಾಂತರಿಸಿದೆ. ಬಸ್‌ನಲ್ಲಿ ನೌಕರರೊಂದಿಗಿದ್ದ ಡಿಆರ್‌ಐ ಅಧಿಕಾರಿಗಳನ್ನು ಅದನ್ನು ಕಂಡು ಚಿನ್ನ ನೀಡಿದವರು ಹಾಗೂ ಪಡೆದವರನ್ನು ಸೆರೆಹಿಡಿದಿದ್ದಾರೆ. ಮುಹಮ್ಮದ್ ಶಿನಾಸ್ ವಿಮಾನ ನಿಲ್ದಾಣ ನೌಕರನಾದ ಹಿನ್ನಲೆಯಲ್ಲಿ ಆತನ ಮೂಲಕ ಚಿನ್ನವನ್ನು ನೀಡಿ ಹೊರಗೆ ತಲುಪಿಸಿದರೆ ಯಾರಿಗೂ ತಿಳಿಯದು ಎಂಬುದಾಗಿತ್ತು ತಂಡದ ನಿರೀಕ್ಷೆಯೆನ್ನಲಾಗಿದೆ. ಮುಹಮ್ಮದ್ ಶಿನಾಸ್ ಮೂರು ವರ್ಷಗಳಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ.

NO COMMENTS

LEAVE A REPLY