ರೈಲಿನಲ್ಲಿ ಪರಿಚಯಗೊಂಡ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ೧೦ ವರ್ಷ ಕಠಿಣ ಸಜೆ, ಜುಲ್ಮಾನೆ

0
48

ಕಾಸರಗೋಡು: ರೈಲಿನಲ್ಲಿ ಪರಿಚಯಗೊಂಡ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ  ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ) ಹತ್ತು ವರ್ಷ ಕಠಿಣ ಸಜೆ ಮತ್ತು ೫೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿ ದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.  ಕಾಸರಗೋಡು ಜಿಲ್ಲೆಯ ವಲಿಯಪರಂಬ ಮಾಡಕ್ಕಲ್ ಪುದಿಯವೀಟಿಲ್‌ನ ಅಖಿಲ್ ಕುಮಾರ್(೨೫) ಈ ಪ್ರಕರಣದ ಆರೋಪಿಯಾಗಿದ್ದು, ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ.

ಭಾರತೀಯ ಸೇನಾ ಪಡೆಯ ಗುಜರಾತ್ ಜಾಮ್‌ನಗರದ ಎಂ.ಆರ್.ಸಿ ಘಟಕದ ಜವಾನನಾಗಿದ್ದ ಆರೋಪಿ ಅಖಿಲ್ ಕುಮಾರ್ ೨೦೧೫ ಎಪ್ರಿಲ್ ೮ರಂದು ರೈಲಿನಲ್ಲಿ ಬರುತ್ತಿದ್ದ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹೊಸದುರ್ಗ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ೧೫ವರ್ಷ ಪ್ರಾಯದ ಬಾಲಕಿಯನ್ನು ಪರಿಚಯಗೊಂಡಿದ್ದನು. ಬಳಿಕ ಆಕೆಯನ್ನು ಪದೇ ಪದೇ ಫೋನ್‌ನಲ್ಲಿ ಸಂಪರ್ಕಿಸುತ್ತಿದ್ದನೆಂದೂ,  ೨೦೧೫ ಎಪ್ರಿಲ್ ೨೮ರಂದು ಆತ ಬಾಲಕಿಯ ಮನೆಗೆ ಬಂದು  ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ   ಬಾಲಕಿ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಅಖಿಲ್ ಕುಮಾರ್ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ನ್ಯಾಯವಾದಿ ಪಿ.ಆರ್. ಪ್ರಕಾಶ್ ಅಮ್ಮಣ್ಣಾಯ ನ್ಯಾಯಾಲಯದಲ್ಲಿ ವಾದಿಸಿದ್ದರು.

NO COMMENTS

LEAVE A REPLY