ತೃಶೂರು ನಿವಾಸಿಯನ್ನು ಆಕ್ರಮಿಸಿ ಚಿನ್ನ, ನಗದು ದರೋಡೆ ಸೂತ್ರಧಾರ ಜ್ಯುವೆಲ್ಲರಿ ನೌಕರ

0
238

ಕಾಸರಗೋಡು: ಜ್ಯುವೆಲ್ಲರಿಗಳಿಗೆ ಚಿನ್ನಾಭರಣ ತಲುಪಿಸುವ ತೃಶೂರು ನಿವಾಸಿಯನ್ನು ಕಾಸರಗೋಡು ನಗರದಲ್ಲಿ ಆಕ್ರಮಿಸಿ ಒಂದೂವರೆ ಕಿಲೋ ಚಿನ್ನ ಹಾಗೂ ೪,೩೬,೩೫೦ ರೂ. ದರೋಡೆ ಗೈದ ಪ್ರಕರಣದ ಮುಖ್ಯ ಸೂತ್ರಧಾರ ಜ್ಯುವೆಲ್ಲರಿ ನೌಕರನಾದ ಯುವಕನಾಗಿದ್ದಾನೆಂದು ಪೊಲೀಸರು ದೃಢೀಕರಿಸಿದ್ದಾರೆ.

ವಿಟ್ಲ ನಿವಾಸಿಯೂ, ಅಲ್ಲೇ ಇರುವ ಜ್ಯುವೆಲ್ಲರಿಯ ನೌಕರನಾದ ಮನ್ಸೂರ್ ಎಂಬಾತ ದರೋಡೆಗೆ ಯೋಜನೆ ರೂಪಿಸಿದವನೆಂದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಮನ್ಸೂರ್‌ನ ಆದೇಶದಂತೆ ಆತನ ಸ್ನೇಹಿತನಾದ ರಫೀಕ್ ಎಂಬಾತ ಇತರ ಕೆಲವರನ್ನು ಸೆರೆಸಿ ಚಿನ್ನಾಭರಣ ಹಾಗೂ ನಗದು ದರೋಡೆಗೈದಿದ್ದಾನೆ. ಮನ್ಸೂರ್ ಹಾಗೂ ರಫೀಕ್ ಸಹಿತ ದರೋಡೆ ತಂಡದ ಇತರರನ್ನೂ ಸೆರೆ ಹಿಡಿಯಲು ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಈ ತಿಂಗಳ ೧೨ರಂದು ರಾತ್ರಿ ಎಂಟು ಗಂಟೆ ವೇಳೆ ಕಾಸರಗೋಡು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ತೃಶೂರು ನಿವಾಸಿಯಾದ ಟೋನಿ (೫೦) ಎಂಬವರ ತಲೆಗೆ ಹೊಡೆದು ಕೆಳಕ್ಕೆ ಬೀಳಿಸಿದ ಬಳಿಕ ಅವರ ಕೈಯಲ್ಲಿದ್ದ ಒಂದೂವರೆ ಕಿಲೋ ಚಿನ್ನಾಭರಣ ಹಾಗೂ ಹಣವನ್ನು ದರೋಡೆಗೈದು ತಂಡ ಕಾರಿನಲ್ಲಿ ಪರಾರಿಯಾಗಿತ್ತು. ಈ ಘಟನೆ ಬಗ್ಗೆ ಕಾಸರಗೋಡು ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿದೆ.

ಘಟನೆ ನಡೆದ ದಿನದಂದು ಮಧ್ಯಾಹ್ನ ೨ ಗಂಟೆ ಬಳಿಕ ವಿಟ್ಲ ಭಾಗದಿಂದ ಕಾಸರಗೋಡಿಗೆ ಬಂದ ವಾಹನಗಳನ್ನು ಸಿ.ಸಿ. ಕ್ಯಾಮರಾ ಮೂಲಕ ಪರಿಶೀಲಿಸಿದಾಗ ದರೋಡೆ ತಂಡ ತಲುಪಿದ ಕಾರಿನ ಬಗ್ಗೆ ಮಾಹಿತಿ ಲಭಿಸಿದೆ. ಬಳಿಕ ನಡೆಸಿದ ತನಿಖೆಯಲ್ಲಿ ದರೋಡೆ ಪ್ರಕರಣದ ಆರೋಪಿಗಳ ಸ್ಪಷ್ಟ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿದೆ.  ಜ್ಯುವೆಲ್ಲರಿಗೆ ಚಿನ್ನಾಭರಣ ತಲುಪಿಸುವ ಟೋನಿ ಘಟನೆ ದಿನದಂದು ಮಧ್ಯಾಹ್ನ ವಿಟ್ಲಕ್ಕೆ ತೆರಳಿ ಅಲ್ಲಿನ ಜ್ಯುವೆಲ್ಲರಿಗೆ ಚಿನ್ನಾಭರಣದ ನೂತನ ಮೋಡೆಲ್ ತೋರಿಸಿ ಅಗತ್ಯದ ಚಿನ್ನಾಭರಣ ನೀಡಿದ್ದರು. ಅನಂತರ ಉಳಿದ ಆಭರಣಗಳೊಂದಿಗೆ ಅವರು ಕಾಸರಗೋಡಿಗೆ ಮರಳಿದ್ದಾರೆ. ಈ ಮಧ್ಯೆ ಜ್ಯುವೆಲ್ಲರಿಯ  ನೌಕರನಾದ ಮನ್ಸೂರ್ ದರೋಡೆಗೆ ಯೋಜನೆ ರೂಪಿಸಿದ್ದಾನೆ. ಮನ್ಸೂರ್ ಸ್ನೇಹಿತ ರಫೀಕ್‌ಗೆ ವಿಷಯ ತಿಳಿಸಿದ್ದು, ಇದರಂತೆ ರಫೀಕ್ ಇತರ ಕೆಲವರನ್ನು ಸೇರಿಸಿ ಎರಡು ಕಾರುಗಳಲ್ಲಾಗಿ ಟೋನಿಯನ್ನು ಹಿಂಬಾಲಿಸಿದ್ದರು.

ಟೋನಿ ಕಾಸರಗೋಡು  ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತಲುಪಿ ಹೋಟೆಲ್‌ವೊಂದಕ್ಕೆ ತೆರಳಿದ್ದರು. ಈ ವೇಳೆ  ದರೋಡೆಕೋರರು ತಲುಪಿದ ಒಂದು ಕಾರು ಹೋಟೆಲ್‌ನ ಪರಿಸರಕ್ಕೆ  ತಲುಪಿ ನಿಂತಿತು. ಟೋನಿ ಆಹಾರ ಸೇವಿಸಿ ಹೋಟೆಲ್‌ನಿಂದ ಹೊರಗಿಳಿದು ನಡೆದು ಹೋಗುತ್ತಿದ್ದಂತೆ ನಿಲ್ಲಿಸಿದ್ದ ಕಾರಿನಿಂದ ಓರ್ವ ದಿಢೀರ್ ಇಳಿದು ಟೋನಿಯನ್ನು ಆಕ್ರಮಿಸಿ ಅವರ ಕೈಯಲ್ಲಿದ್ದ ಚಿನ್ನಾಭರಣ, ನಗದು ಒಳಗೊಂಡ  ಬ್ಯಾಗ್‌ನ್ನು ಕಸಿದೆಳೆದು ಕಾರಿನಲ್ಲಿ ಪರಾರಿಯಾಗಿದ್ದಾನೆಂದು ಪೊಲೀಸರಿಗೆ ಲಭಿಸಿದ ಮಾಹಿತಿಯಾಗಿದೆ. ಇದೇ ವೇಳೆ ಹೋಟೆಲ್ ಬಳಿ ಟೋನಿಯವರನ್ನು  ಆಕ್ರಮಿಸುವುದನ್ನು ಅಲ್ಲಿದ್ದ ಕೆಲವರು ಕಂಡಿದ್ದರೂ ರಕ್ಷಿಸಲು ಅವರು ಮುಂದಾಗಿ ಲ್ಲವೆನ್ನಲಾಗಿದೆ. ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಕರ್ನಾಟಕ ಕೇಂದ್ರೀಕರಿಸಿ ತನಿಖೆ ತೀವ್ರಗೊಳಿಸಿದ್ದಾರೆ.  ದರೋಡೆ ತಂಡದಲ್ಲಿದ್ದ ರಫೀಕ್ ವಿಟ್ಲದ ಕೆಂಪುಕಲ್ಲು ಕೋರೆ ನೌಕರನನ್ನು ಹತ್ಯೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲೂ ಆರೋಪಿಯೆಂದು ತಿಳಿದುಬಂದಿದೆ.

NO COMMENTS

LEAVE A REPLY