ಕೊಳವೆ ಬಾವಿಗೆ ಜಲ ಮರುಪೂರಣ

0
304

– ವಿರಾಜ್ ಅಡೂರು

ಗ್ರಾಮೀಣ ಪ್ರದೇಶವೂ ಸೇರಿದಂತೆ ಈ ವರ್ಷ ಎಲ್ಲೆಡೆ ಬರಗಾಲ ಕರಿಛಾಯೆ. ಪ್ರಮುಖ ಜಲಮೂಲಗಳಾದ ಕೆರೆ, ಬಾವಿ, ತೋಡು, ಹೊಳೆಗಳು ಬರಿದಾಗಿವೆ. ಅಂತರ್ಜಲ ಮಟ್ಟ ಬಹಳಷ್ಟು ಕುಸಿದಿದೆ ಎಂಬ ವಾದಕ್ಕೆ ಒಂದೆರಡು ಇಂಚು ನೀರು ನೀಡಿದ ಕೊಳವೆಬಾವಿಗಳು ಬರಿದಾಗಿ ಸಾಕ್ಷಿಯಾಗಿವೆ. ಇದೀಗ ಎಲ್ಲೆಡೆ ಜಲ ಸಂಗ್ರಹದ ಉದ್ದೇಶದಿಂದ ಮತ್ತಷ್ಟೂ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಅತಿಯಾದ ಕೊಳವೆ ಬಾವಿ ನಿರ್ಮಾಣದಿಂದ ಭೂಮಿಯ ಆಂತರಿಕ ಪದರಗಳು ಸಡಿಲಗೊಳ್ಳುವ ಆತಂಕವಿದೆ. ನೀರಿನ ಅವಶ್ಯಕತೆಗಾಗಿ ಕೊಳವೆ ಬಾವಿ ಅನಿವಾರ್ಯ. ಇದನ್ನು ಕೊರೆಯುವ ಜತೆಗೆ ಮಳೆಗಾಲದಲ್ಲಿ ಕೊಳವೆ ಬಾವಿಗಳಿಗೆ ಜಲ ಮರುಪೂರಣದ ಮೂಲಕ ನೀರನ್ನು ತುಂಬಿಸುವ ಕೆಲಸವೂ ನಡೆಯಬೇಕು. ಈ ಒತ್ತಾಯ ಕಾನೂನು ರೂಪು ಪಡೆದು ಕಡ್ಡಾಯವಾಗಬೇಕು.  ಕೊಳವೆ ಬಾವಿಗಳು ನೀರಿನ ಟ್ಯಾಂಕ್  ಇದ್ದಂತೆ. ಅದಕ್ಕೆ ತುಂಬಿಸುವ ಕೆಲಸ ಮಾಡದೆ ಇದ್ದರೆ ಅದು ಖಾಲಿಯಾಗುವುದು ಖಂಡಿತ. ಆದ್ದರಿಂದ ಕೊಳವೆ ಬಾವಿಗಳಿಗೆ ನೀರಿನ ಮರುಪೂರಣ ಕೆಲಸ ಮಳೆಗಾಲದಲ್ಲಿ ನಡೆಯಲೇಬೇಕು. ಅದಕ್ಕೆ ಸರಕಾರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ನೂತನ ಕಾನೂನು ಸಿದ್ಧಪಡಿಸಿ ಅನುಷ್ಠಾನಗೊಳಿಸಬೇಕು. ಸಾಮಾನ್ಯವಾಗಿ ಕೊಳವೆಬಾವಿಗಳನ್ನು ಕೊರೆಯಲು ಭೂಗರ್ಭ ಇಲಾಖೆಯ ಅನುಮತಿ ಬೇಕು. ಇಲಾಖೆಯ ಅಧಿಕಾರಿಗಳು ಕೊಳವೆ ಬಾವಿ ಕೊರೆಯುವ ಪ್ರದೇಶಕ್ಕೆ ಆಗಮಿಸಿ, ಪರಿಶೀಲಿಸಿ ಅನುಮತಿ  ನೀಡುತ್ತಾರೆ. ಇದೀಗ ಗ್ರಾಮ ಪಂಚಾಯತ್‌ನಿಂದಲೂ ಅನುಮತಿ ಪಡೆಯಬೇಕು. ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಜಲ ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ ಕೆಲವೊಂದು ಕಡ್ಡಾಯ ಕಾನೂನುಗಳನ್ನು ರೂಪಿಸಬೇಕಾಗಿದೆ. ಭೂಗರ್ಭ ಇಲಾಖೆ, ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಖುದ್ದಾಗಿ ಕೊಳವೆ ಬಾವಿ ಕೊರೆದ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಬೇಕು. ಜಲಮರುಪೂರಣ ವಿಧಾನಗಳನ್ನು ಕೊಳವೆ ಬಾವಿಗಳಿಗೆ ಅಳವಡಿಸಿಕೊಂಡರೆ ಮಾತ್ರ ವಿದ್ಯುತ್ ಇಲಾಖೆಗಳು ಈ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಜಲ ಮರುಪೂರಣ ವಿಧಾನವನ್ನು ಅಳವಡಿಸದ ಕೊಳವೆ ಬಾವಿಗಳನ್ನು ಪ್ರಾದೇಶಿಕ ಗ್ರಾಮ ಪಂಚಾಯತ್‌ಗಳು ನಿರ್ದಾಕ್ಷಿಣ್ಯವಾಗಿ ನಿರ್ಬಂಧಿಸಬೇಕು. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನೀರು ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಕೊರೆದ ಕೊಳವೆ ಬಾವಿಗಳಿಗೆ ಮಳೆ ನೀರು ಸಂಗ್ರಹ ನಡೆಸುವ ಕುರಿತು ಸಾರ್ವತ್ರಿಕ ಜಾಗೃತಿಯನ್ನು ಕೂಡಾ ಈ ಆಡಳಿತ ಸಂಸ್ಥೆಗಳು ಮಾಡಬೇಕು.

ಮಳೆಗಾಲದಲ್ಲಿ ಮರುಪೂರಣ ನಡೆಸುವ ಬಗ್ಗೆ ಆಡಳಿತ ವಿಭಾಗ ಕಾನೂನು ರೂಪಿಸಬೇಕು. ಮಳೆಗಾಲದ ನೀರು ತೋಡಿನ ಮೂಲಕ ಹರಿದು ಹೋಗದೆ ಅವುಗಳನ್ನು ತನ್ನ ಬಾವಿ ಹಾಗೂ ಕೆರೆಗಳಲ್ಲಿ ಸೋಸಿ ಶೇಖರಿಸಿ ಇಂಗಿಸುವ ಪ್ರಯತ್ನ ಮಾಡಬೇಕು. ತನ್ನ ಜಮೀನಿನಲ್ಲಿ ಸಾಧ್ಯವಾದಷ್ಟು ಇಂಗುಗುಂಡಿಗಳನ್ನು ನಿರ್ಮಿಸಬೇಕು ಎಂಬ ಕ್ರಿಯಾತ್ಮಕ ಕಾನೂನನ್ನು ರೂಪಿಸಿ ಕಡ್ಡಾಯಗೊಳಿಸಬೇಕು ಎಂಬುದು ಸಾರ್ವತ್ರಿಕ ಅಭಿಮತ. ಇದೀಗ ಅನೇಕ ಪ್ರದೇಶಗಳಲ್ಲಿ ಕೊರೆದ ಶೇಕಡಾ ೯೦ರಷ್ಟು ಕೊಳವೆಬಾವಿಗಳಿಗೆ ಜಲ ಮರುಪೂರಣ ಕಾರ್ಯ ನಡೆಯುತ್ತಿಲ್ಲ. ಆದ್ದರಿಂದ ಅನೇಕ ಕೊಳವೆ ಬಾವಿಗಳು ಕೆಲವೇ ವರ್ಷದಲ್ಲಿ ಬರಿದಾಗುತ್ತವೆ. ಪ್ರಾದೇಶಿಕವಾದ ಯುವ ಸಂಘಟನೆಗಳು ಯೋಗ್ಯ ಜಲತಜ್ಞರನ್ನು ಕರೆಸಿ ಸಾರ್ವಜನಿಕರಿಗೆ ಜಲ ಮರುಪೂರಣದ ವಿಧಾನಗಳು ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಜಲ ಸಂರಕ್ಷಣೆಯ ಹಿನ್ನೆಲೆಯಲ್ಲಿ ಇಂಗುಗುಂಡಿಗಳು ಬಹಳಷ್ಟು ಭರವಸೆ ಮೂಡಿಸಿದ್ದರೂ ಫಲಪ್ರದವಾಗಿ ಅನುಷ್ಠಾನಗೊಂಡಿಲ್ಲ. ಗುಡ್ಡ ಪ್ರದೇಶಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಡಳಿತ ಸಮಿತಿಗಳು ಕಾನೂನುಬದ್ದ ಯೋಜನೆಯನ್ನು ರೂಪಿಸಬೇಕಿದೆ. ಒಟ್ಟಿನಲ್ಲಿ ಕೊಳವೆ ಬಾವಿ ಹಾಗೂ ಇಂಗು ಗುಂಡಿಗಳ ಮೂಲಕ ಮಳೆಗಾಲದಲ್ಲಿ ನೀರನ್ನು ಹಿಡಿದಿಡುವ ಪ್ರಯತ್ನ ನಡೆಯಬೇಕು.

ಜಲ ಮರುಪೂರಣದ ವ್ಯವಸ್ಥೆ ದುಬಾರಿ ಇಲ್ಲ. ಪ್ರತೀ ವರ್ಷವೂ ಸಾಕಷ್ಟು ಮಳೆ ಬೀಳುವ ಕರಾವಳಿ ಪ್ರದೇಶದಲ್ಲಿ ಜಲ ಮರುಪೂರಣಕ್ಕೆ ಸಾಕಷ್ಟು ಪೂರಕ ವ್ಯವಸ್ಥೆ ಇದೆ. ಆದರೆ ನೀರನ್ನು ಹಿಡಿದಿಡುವ ಬಗೆಗಿನ ಜನತೆಯ ಔದಾಸಿನ್ಯ ಮಾತ್ರ ಮಿತಿ ಮೀರಿದೆ. ಮಳೆ ದೂರವಾದಾಗ ಹಾಹಾಕಾರ ಮಾಡುವ ಬದಲು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸ್ವತಃ ಕಂಡುಕೊಳ್ಳಲು ಸಾಧ್ಯವಿದೆ. ಒಂದು ಕೊಳವೆ ಬಾವಿಯಲ್ಲಿ ಜಲ ಮರುಪೂರಣದ ಮೂಲಕ ನೀರು ಇಂಗಿಸುವುದರಿಂದ ಆ ಪ್ರದೇಶದ ಸುಮಾರು ೧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟದ ಏರಿಕೆಯನ್ನು ದಾಖಲಿಸಬಹುದು ಎಂದು ಸಂಶೋಧಿಸಲಾಗಿದೆ. ಕೊಳವೆ ಬಾವಿಯಲ್ಲಿ ಸರಿಯಾದ ರೀತಿಯಲ್ಲಿ ನೀರಿಂಗಿಸಿದರೆ ಸುಮಾರು ೨೫ ವರ್ಷಕ್ಕಿಂತಲೂ ಹೆಚ್ಚು ಕಾಲ ಯಥೇಚ್ಛವಾಗಿ ನೀರು ಪಡೆಯಬಹುದು. ಮಳೆಗಾಲದಲ್ಲಿ ಮನೆಯ ಕಾಂಕ್ರೀಟ್ ಛಾವಣಿಯಿಂದ ಹರಿಯುವ ನೀರನ್ನೂ ಕೂಡಾ ಕೊಳವೆ ಬಾವಿಗಳಿಗೆ ನಿಖರ ರೀತಿಯಲ್ಲಿ ಸೋಸಿ ಕಳುಹಿಸುವ ವ್ಯವಸ್ಥೆಯನ್ನು ಮಾಡಬಹುದು. ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆ ಬರಡು ನೆಲವಲ್ಲ. ಆದರೆ ಅಲ್ಲಿನ ಪಾರಂಪರಿಕ ನೀರಿನ ಚಿಲುಮೆಗಳನ್ನು ಶಕ್ತವಾಗಿ ರಕ್ಷಿಸಲಾಗಿಲ್ಲ.

ಹರಿದು ಸಮುದ್ರ ಸೇರುವ ಮಳೆ ನೀರನ್ನು ತಮ್ಮ ಬೇರಿನ ಮೂಲಕ ಹಿಡಿದಿಡಲು ಮರಗಳ ಬೇರುಗಳು ಯಶಸ್ವಿಯಾಗುತ್ತವೆ. ಆದರೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವುದು ಆತಂಕಕಾರಿ. ಪ್ರತೀ ವೈಯಕ್ತಿಕ ಜಮೀನಿನ ಶೇಕಡಾ ೨೫ರಷ್ಟು ಭಾಗ ಅರಣ್ಯ ಪ್ರದೇಶಕ್ಕೆ ಮೀಸಲಿಡಬೇಕು. ಮನೆಯ ಅಗತ್ಯಕ್ಕೆ ಬಳಸಿದ ನೀರನ್ನು ಮರುಬಳಕೆ ಮಾಡಬೇಕು. ಬಟ್ಟೆ ಒಗೆದ ನೀರನ್ನು ಮನೆಯ ಹೂವಿನ ಗಿಡಗಳಿಗ ಒಯ್ಯಬೇಕು. ಸ್ನಾನ ಮಾಡಿದ ನೀರು ಕೃಷಿ ಕ್ಷೇತ್ರಕ್ಕೆ ಸಾಗುವಂತೆ ವ್ಯವಸ್ಥೆ ಮಾಡಬೇಕು. ಒಟ್ಟಿನಲ್ಲಿ ಜಲನಿಧಿಯು ಜನತೆಯ ಜೀವನಿಧಿ. ಮಳೆಗಾಲದಲ್ಲಿ ಜಲ ಮರುಪೂರಣ ಮಾಡದೇ ಇದ್ದರೆ ಕೊಳವೆ ಬಾವಿ ನೀರು ಕೂಡಾ ಶಾಶ್ವತವಲ್ಲ. ಈ ಬಗ್ಗೆ ಬಳಕೆದಾರರು ಗಂಭೀರವಾಗಿ ಚಿಂತಿಸಬೇಕು.

NO COMMENTS

LEAVE A REPLY