ವ್ಯಾಪಾರಿಯಿಂದ ಹಣ ಎಗರಿಸಿದ ಪ್ರಕರಣ: ಇನ್ನೋರ್ವ ಸೆರೆ

0
55

 

ಕಾಸರಗೋಡು: ಕೇಸಿನಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿ ವ್ಯಾಪಾರಿಯಿಂದ ಹಣ ಎಗರಿಸಿದ ಪ್ರಕರಣದ ಇನ್ನೋರ್ವ ಆರೋಪಿಯನ್ನು ವಿದ್ಯಾನಗರ ಎಸ್.ಐ ವಾಸುದೇವನ್ ಬಂಧಿಸಿದ್ದಾರೆ.

ಆಲಂಪಾಡಿ ಮಿನಿ ಎಸ್ಟೇಟ್‌ನ ಭಾಪಾಕಿನಗರ ಮಿಸ್ರಿಯಾ ಮಂಜಿಲ್‌ನ ಅಬ್ದುಲ್ ಖಾದರ್ ಬಿಎಂ (೧೯) ಬಂಧಿತ ಆರೋಪಿ. ಚೆಂಗಳ ಬಂಬ್ರಾಣಿ ಬೇಕೂರು ಹೌಸ್‌ನ ನಿವಾಸಿ ಹಾಗೂ ವ್ಯಾಪಾರಿಯಾಗಿರುವ ಮುನೀರ್ ಸಿ.ಎ (೨೫) ಎಂಬವರ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಬ್ದುಲ್ ಖಾದರ್‌ನನ್ನು ಬಂಧಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಮುಟ್ಟತ್ತೋಡಿ ಪಡಿಞ್ಞಾರಮೂಲೆಯ ಯುಪಿ ಮಂಜಿಲ್‌ನ ಮೊಹಮ್ಮದ್ ಸಿನಾನ್ (೧೯)ನನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.

ಕೇಸೊಂದರಲ್ಲಿ ಸಿಲುಕಿಸುವುದಾಗಿ ಬೆದರಿಸಿ ಒಂದು ವರ್ಷದಿಂದ ಆರೋಪಿಗಳು ತನ್ನಿಂದ ಹಲವು ಬಾರಿಯಾಗಿ ೩,೬೦,೦೦೦ ರೂ. ಕೇಳಿ ಪಡೆದಿದ್ದರೆಂದೂ ಆ ಬಳಿಕವೂ ಒಂದೂವರೆ ಲಕ್ಷ ರೂ. ನೀಡುವಂತೆ ಆರೋಪಿಗಳು ಮತ್ತೆ ತನ್ನನ್ನು ಬೆದರಿಸತೊಡಗಿದರೆಂದು ಆರೋಪಿಸಿ ಮುನೀರ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ  ಆರು ಮಂದಿ ವಿರುದ್ದ ಕೇಸು ದಾಖಲಿಸಿಕೊಂಡಿದ್ದರು. ಆ ಪೈಕಿ ಈಗ ಒಟ್ಟು ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY