ಕನ್ನಡಿಗರಿಂದ ಬೃಹತ್ ಜಾಥ, ಸತ್ಯಾಗ್ರಹ

0
73

ಕಾಸರಗೋಡು: ಕನ್ನಡಿಗರ ಮೇಲೆ ಕಡ್ಡಾಯವಾಗಿ ಮಲೆಯಾಳ ಭಾಷೆ ಹೇರುವಂತೆ ಮಾಡಿ ಆ ಮೂಲಕ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳುವ ಭಾಷಾ ಮಸೂದೆಯನ್ನು ಪ್ರತಿಭಟಿಸಿ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾಸರ ಗೋಡು ಜಿಲ್ಲಾಧಿಕಾರಿ ಕಚೇರಿಗೆ ಕನ್ನಡಿಗರು ಇಂದು ಬೆಳಿಗ್ಗೆ ಬೃಹತ್ ಮೆರವಣಿಗೆ ನಡೆಸಿ ಧರಣಿ ಮುಷ್ಕರ ಹೂಡಿದರು.

ರಾಜ್ಯದಲ್ಲಿ ಆಡಳಿತ ಭಾಷೆಯ ನ್ನಾಗಿ ಮಲೆಯಾಳವನ್ನು ಕಡ್ಡಾಯ ಗೊಳಿಸಿ ವಿಧಾನಸಭೆಯಲ್ಲಿ ಅಂಗೀಕರಿ ಸಲ್ಪಟ್ಟ ೨೦೧೫ರ ಭಾಷಾ ಮಸೂದೆ ಯಿಂದ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸಬೇಕು, ಆ ಮೂಲಕ ಸಂವಿಧಾನಾತ್ಮಕವಾಗಿ ಜಿಲ್ಲೆಯ ಕನ್ನಡಿಗರಿಗೆ ಲಭಿಸುವ ಹಕ್ಕುಗಳನ್ನು ಸಂರಕ್ಷಿಸಬೇಕೆಂಬ  ಪ್ರಧಾನ ಬೇಡಿಕೆ ಮುಂದಿರಿಸಿಕೊಂಡು ಈ ಚಳವಳಿ ನಡೆಸಲಾಗುತ್ತಿದೆ.

ವಿಧಾನಸಭೆ ಅಂಗೀಕರಿಸಿದ ಭಾ ಷಾ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದಲ್ಲಿ ಭಾಷಾ ಅಲ್ಪಸಂಖ್ಯಾತರ ಎಲ್ಲಾ ಸಂವಿಧಾನಾತ್ಮಕ ಹಕ್ಕುಗಳು ಮತ್ತು ಸವಲತ್ತುಗಳು ನಷ್ಟಗೊಳ್ಳಲಿವೆ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ  ಇಂತಹ ಕ್ರಮದಿಂದ ಸರಕಾರ ಹಿಂದಕ್ಕೆ ಸರಿಯಬೇಕೆಂದು  ಸಂಯುಕ್ತ ಹೋರಾಟ ಸಂಘಟನೆಗಳು ಆಗ್ರಹಪಟ್ಟಿವೆ. ಇದಕ್ಕೆ ಸರಕಾರ ತಯಾರಾಗದಿದ್ದಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಲಾಗುವುದೆಂಬ ಮುನ್ನೆಚ್ಚರಿಕೆ ನೀಡಿದೆ.

 ವಿದ್ಯಾನಗರದಲ್ಲಿರುವ ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯನ್ನು ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಾಸ್ತರ್ ಉದ್ಘಾಟಿಸಿದರು. ಕೇರಳ ಗಡಿನಾಡ  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ   ಎಸ್.ವಿ.ಭಟ್, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಮಹಾಲಿಂಗೇಶ್ವರ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ, ಜಿ.ಪಂ. ಸದಸ್ಯ ಕೆ.ಶ್ರೀಕಾಂತ್, ರಂಗ ಕಲಾವಿದ ಉಮೇಶ್ ಸಾಲಿಯಾನ್ ಹಾಗೂ  ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನೇತೃತ್ವ ನೀಡಿದ್ದರು.  ಶಾಲಾ-ಕಾಲೇಜು ವಿದ್ಯಾರ್ಥಿಗಳು  , ಇತರ ಹಲವು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಕನ್ನಡಿಗರು ಮೆರವಣಿಗೆ ಮೂಲಕ ಕಲೆಕ್ಟರೇಟ್  ಬಳಿ ಸಾಗಿ ಧರಣಿ ಮುಷ್ಕರ ಹೂಡಿದರು.

  ಚಳವಳಿಗೆ ಕೆಎಸ್‌ಟಿಪಿ, ಸ್ನೇಹರಂಗ, ಕೋಟೆಯಾರ್ ಸಮಾಜ, ಜಿಲ್ಲಾ ಬಂಟರ ಸಂಘ, ಸಾಂಸ್ಕೃತಿಕ ಪ್ರತಿಷ್ಠಾನ ಸೇರಿದಂತೆ ಹಲವು ಸಂಘಟನೆಗಳು ಪೂರ್ಣ ಬೆಂಬಲ ನೀಡಿ ರಂಗಕ್ಕಿಳಿದಿವೆ.

NO COMMENTS

LEAVE A REPLY