ಪ್ರಕೃತಿ ವಿಕೋಪ: ಬಲಿಯಾದವರ ಸಂಖ್ಯೆ ೯೨ಕ್ಕೆ

0
68

ತಿರುವನಂತಪುರ: ರಾಜ್ಯದಲ್ಲಿ ಮಹಾಮಳೆಯಿಂದ ಸೃಷ್ಟಿಯಾದ ಪ್ರವಾಹ ಮತ್ತು ಭೂಕುಸಿತದಿಂದ ಪ್ರಾಕೃತಿಕ ದುರಂತಕ್ಕೆ ಬಲಿಯಾದವರ ಸಂಖ್ಯೆ ಈಗ ೯೨ಕ್ಕೇರಿದೆ.

ಮಲಪ್ಪುರಂ ಜಿಲ್ಲೆಯ ಕವಳಪ್ಪಾರ ಮತ್ತು ವಯನಾಡು ಜಿಲ್ಲೆಯ ಪೂತುಮಲದಲ್ಲಿ ಭೂಕುಸಿತವುಂಟಾದ ಪ್ರದೇಶಗಳಲ್ಲಿ ಮಣ್ಣಿನಡಿ ಸಿಲುಕಿಕೊಂ ಡಿರುವವರ ಪತ್ತೆಗಾಗಿರುವ ಕಾರ್ಯಾ ಚರಣೆ ಇಂದೂ ಮುಂದುವರಿಯುತ್ತಿರು ವಂತೆಯೇ ಕವಳಪ್ಪಾರದ ಭೂಕುಸಿತ ವುಂಟಾದ ಮಣ್ಣಿನಡಿಯಿಂದ ಇಂದು ಆರು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.

ಮೃತರನ್ನು ಕವಳಪ್ಪಾರ ಕಾಲನಿಯ ಸುಬ್ರಹ್ಮಣ್ಯ ಎಂಬವರ ಪತ್ನಿ ಸುಧಾ (೩೩), ಪಳ್ಳತ್ತ ಶಂಕರನ್ (೭೦), ಶಿವನ್ ಎಂಬವರ ಪತ್ನಿ ರಾಜಿ (೩೪), ಕೊಲ್ಲಂ ನಿವಾಸಿ ಅಲೆಕ್ಸ್ ಮಾನ್ಯುವಲ್ ಮತ್ತು ಗುರುತು ಹಚ್ಚಲು ಸಾಧ್ಯವಾಗದ ಇಬ್ಬರು ಗಂಡಸರ ಮೃತದೇಹಗಳು ಮಣ್ಣಿನಡಿಯಿಂದ ಇಂದು ಪತ್ತೆಹಚ್ಚಲಾಗಿದೆ. ಮಣ್ಣಿನಡಿ ಇನ್ನೂ ೪೪ ಮಂದಿ ಸಿಲುಕಿಕೊಂಡಿರುವುದಾಗಿ ತಿಳಿಯಲಾಗಿದ್ದು, ಅವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ. ಮಳೆ, ಭೂ ಕಸಿತ ಮತ್ತು ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದವರ ಪೈಕಿ ಇನ್ನೂ ೬೨ ಮಂದಿಯನ್ನು ಪತ್ತೆಹಚ್ಚಲು ಬಾಕಿಯಿದೆಯೆಂದು ಸರಕಾರದ ಲೆಕ್ಕಾಚಾರಗಳು ಸೂಚಿಸುತ್ತಿದೆ.

ಕಾಸರಗೋಡು ಜಿಲ್ಲೆಯಲ್ಲಿ ಮಳೆ ಪ್ರಮಾಣದಲ್ಲಿ ಇಳಿಕೆಯುಂಟಾಗಿರುವ ಹಿನ್ನೆಲೆಯಲ್ಲಿ ಮನೆ ಬಿಟ್ಟು ಸಂತ್ರಸ್ತ ಶಿಬಿರಗಳಿಗೆ ಬಂದು ಸೇರಿದವರು ಅಲ್ಲಿಂದ ತಮ್ಮ ಸ್ವಂತ ಮನೆಗೆ ಹಿಂತಿರುಗತೊಡಗಿದ್ದಾರೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ವಿವಿಧೆಡೆಗಳಲ್ಲಾಗಿ ಒಟ್ಟು ೩೧ ಸಂತ್ರಸ್ತ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ೩೮೮೨ ಮಂದಿಗೆ ಸಂರಕ್ಷಣೆ ಒದಗಿಸಲಾಗಿತ್ತು. ಆ ಪೈಕಿ ಈಗ ಪನತ್ತಡಿ ಮತ್ತು ತೃಕರಿಪುರ ಉಡುಂಬುತ್ತಲ  ಎಂಬೆರಡು ಕಡೆಗಳಲ್ಲಿ ಮತ್ತೆ ಸಂತ್ರಸ್ತ ಶಿಬಿರಗಳು ಬಾಕಿ ಉಳಿದುಕೊಂಡಿವೆ. ಅದರಲ್ಲಿ ಈಗ ೬೯ ಮಂದಿ ಮಾತ್ರವೇ ಉಳಿದುಕೊಂಡಿದ್ದಾರೆ. 

ನೆರೆ ಆವರಿಸಿದ ಮನೆಗಳ ಶುಚೀಕರಣ ಕೆಲಸಕ್ಕೆ ನಿನ್ನೆಯಿಂದಲೇ ಚಾಲನೆ ನೀಡಲಾಗಿದೆ. ಶುಚೀ ಕರಣಕ್ಕಾಗಿ ಹಲವು ಯುವ ಸಂಘಟನೆಗಳು ರಂಗಕ್ಕಿಳಿದಿವೆ. ಸಂತ್ರಸ್ತ ಶಿಬಿರಗಳು ಹೊಂದಿರುವ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಬೇಕಲ ಕೋಟೆಯ ಒಂದು ಭಾಗ ಕುಸಿದುಬಿದ್ದಿದೆ. ಅದರಿಂದಾಗಿ ಬೇಕಲಕೋಟೆ    ಸಂದರ್ಶನಕ್ಕೆ ಕೆಲವೊಂದು ನಿಯಂತ್ರಣ ಹೇರಲಾಗಿದೆ.  ಕಾಸರಗೋಡು-ಹೊಸದುರ್ಗ ಕೆಎಸ್‌ಟಿಪಿ ರಸ್ತೆಯ ಬದಿಯಲ್ಲಿರುವ ಗುಡ್ಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು,  ಅದನ್ನು ಜೆಸಿಬಿ ಬಳಸಿ ಸರಿಪಡಿಸುವ ಯತ್ನ ಆರಂಭಿಸಲಾಗಿದೆ. ಅದರಿಂದಾಗಿ ಆ ರೂಟ್‌ನಲ್ಲಿ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ.

NO COMMENTS

LEAVE A REPLY