ಪೋಕ್ಸೋ ಕೇಸಿನಲ್ಲಿ ಸಿಲುಕಿಸುವುದಾಗಿ ಬೆದರಿಸಿ ವ್ಯಾಪಾರಿಯಿಂದ ೫೦ ಸಾವಿರ ರೂ. ಎಗರಿಸಿದ ನಾಲ್ಕು ಮಂದಿ ಸೆರೆ

0
48

 

ಪೋಕ್ಸೋ ಕೇಸಿನಲ್ಲಿ ಸಿಲುಕಿಸು ವುದಾ ಗಿ ಬೆದರಿಸಿ ವ್ಯಾಪಾರಿಯಿಂದ ೫೦೦೦೦ ರೂ. ಎಗರಿಸಿ, ಅದರ ಹೊರತಾಗಿ ಮತ್ತೆ ಐದು ಲಕ್ಷ ರೂ. ಬೇಡಿಕೆಯೊಡ್ಡಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಧುಸೂದನನ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ನಗರದ ಅಣಂಗೂರು ಟಿಪ್ಪುನಗರದ ಮೊಹಮ್ಮದ್ ಅಶ್ರಫ್ ಯಾನೆ ಅಚ್ಚು(೨೪), ಅಣಂಗೂರು ಕೊಲ್ಲಂಪಾಡಿ ಶಹಬಾಸ್ ಮಂಜಿಲ್ ನ ಮೊಹಮ್ಮದ್ ರಿಯಾಸ್(೩೦), ಕೊಲ್ಲಂಪಾಡಿ ಸಾಬಿತ್ ಮಂಜಿಲ್‌ನ  ಸಾಬೀತ್ ಎಸ್.ಎ(೩೨) ಮತ್ತು ಪುಳ್ಕೂರು ಪಳ್ಳಂನ ಹಬೀಬ್ ಪಿ.ಐ.(೨೫) ಬಂಧಿತರಾದ ಆರೋಪಿಗಳಾಗಿದ್ದಾರೆ. ನಗರದ ಹೊಸ ಬಸ್ ನಿಲ್ದಾಣ ಪರಿಸರದ ಜವುಳಿ ವ್ಯಾಪಾರ ನಡೆಸುತ್ತಿರುವ ಮೊಗ್ರಾಲ್ ಪುತ್ತೂರು ಬಳ್ಳೂರು ನಿವಾಸಿ ಅಬ್ದುಲ್ ಶರೀಫ್ ಎಂಬವರು ನೀಡಿದ ದೂರಿನಂತೆ ಅದಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿ ಬಳಿಕ ನಡೆಸಿದ ನಾಟಕೀಯ ಕಾರ್ಯಾಚರಣೆಯಲ್ಲಿ ಈ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ದೂರುಗಾರ ಅಬ್ದುಲ್ ಶರೀಫ್‌ರ ಜವುಳಿ ಅಂಗಡಿಗೆ ಬಾಲಕನೋರ್ವ ಜವುಳಿ ಖರೀದಿಗಾಗಿ ಇತ್ತೀಚೆಗೆ ಬಂದಿದ್ದನೆಂ ದೂ, ಆ ವೇಳೆ ಬಾಲಕನಿಗೆ ಕಿರುಕುಳ ನೀಡಲೆತ್ನಿಸಿರುವುದಾಗಿ ಹೇಳಿ ಅದರ ಹೆಸರಲ್ಲಿ ಪೋಕ್ಸೋ ಕೇಸಿನಲ್ಲಿ ಸಿಲುಕಿಸುವುದಾಗಿ ಬೆದರಿಸಿ ಆರೋಪಿಗಳು ದೂರುಗಾರ ಅಬ್ದುಲ್ ಶರೀಫ್ ನಿಂದ ಎರಡು ಬಾರಿಯಾಗಿ ತಲಾ ೨೫೦೦೦ ರೂ.ನಂತೆ ಒಟ್ಟು ೫೦೦೦೦ ರೂ. ಪಡೆದಿದ್ದರು. ಮಾತ್ರವಲ್ಲದೆ, ಅವರ ಬ್ಯಾಂಕ್ ಎಟಿಎಂ ಕಾರ್ಡ್‌ನ್ನು  ವಶಪಡಿಸಿದ ಬಳಿಕ ಹೆಚ್ಚುವರಿಯಾಗಿ ಇನ್ನೂ ಐದು ಲಕ್ಷ ರೂ. ನೀಡಬೇಕೆಂದು ಬೆದರಿಕೆ ಒಡ್ಡಿದರೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಆ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ, ಆರೋಪಿಗಳನ್ನು ಬಲೆಗೆ ಬೀಳಿಸಲು ಪೊಲೀಸರು ಹೂಡಿದ ನಾಟಕದಂತೆ ಹಣ ನೀಡುವುದಾಗಿ ತಿಳಿಸಿ ಹೊಸ ಬಸ್ ನಿಲ್ದಾಣ ಪರಿಸರಕ್ಕೆ ಬರುವಂತೆ ಆರೋಪಿಗಳಿಗೆ ದೂರುಗಾರ ತಿಳಿಸಿದ್ದರು.  ಅದರಂತೆ ಆರೋಪಿಗಳು  ನಿನ್ನೆ ಕಾರಿನಲ್ಲಿ ಅಲ್ಲಿಗೆ ಬಂದಾಗ, ಆ ಪರಿಸರದಲ್ಲೇ  ಹೊಂಚು ಹಾಕಿ ನಿಂತಿದ್ದ ಪೊಲೀಸರು ಅವ ರನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.

ಕಾರಿನ ಗುರುತು ಪತ್ತೆಯಾಗದಿರಲು ಆರೋಪಿಗಳು ತಾವು ಬಳಸಿದ ಹಸಿರು ಬಣ್ಣದ ಕಾರಿನ ಮೇಲೆ ಕಪ್ಪು ಹಣ್ಣದ ಸ್ಟಿಕ್ಕರ್‌ಗಳನ್ನು ಬಳಸಿ ಇಡೀ ಕಾರನ್ನೇ ಕಪ್ಪು ಬಣ್ಣಕ್ಕೆ ತಿರುಗಿಸಿದ್ದರು. ಆ ಕಾರು ಮತ್ತು ಒಂದು ಚಾಕುವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY