ಎನ್.ಡಿ.ಎ ತೊರೆದ ಶಿವಸೇನೆ

0
59

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ಇಚ್ಛೆಯನ್ನು ಬಿಜೆಪಿ ಕೈಬಿಟ್ಟ ಬೆನ್ನಲ್ಲೇ ಎನ್‌ಸಿಪಿ ಬೆಂಬಲದೊಂದಿಗೆ ಸರಕಾರ ರಚಿಸಲು ಶಿವಸೇನೆ ಮುಂದಾಗಿದ್ದು, ಅದಕ್ಕಿರುವ ಪೂರ್ವ ಕ್ರಮವೆಂಬಂತೆ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಶಿವಸೇನೆ ಹೊರಬಂದಿದೆ.

ಮಾತ್ರವಲ್ಲ ನರೇಂದ್ರಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ಶಿವಸೇನೆಯ ಘನ ಮತ್ತು ಸಾರ್ವಜನಿಕ ಉದ್ದಿಮೆಖಾತೆ ಸಚಿವ ಅರವಿಂದ್ ಸಾವಂತ್ ಇಂದು ಬೆಳಿಗ್ಗೆ ತನ್ನ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಸರಕಾರ ರಚಿಸುವ ಅಹವಾಲನ್ನು  ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರನ್ನು ಇಂದು ಅಪರಾಹ್ನ ೨.೩೦ಕ್ಕೆ ಭೇಟಿಯಾಗಿ ಅವರಿಗೆ ಸಲ್ಲಿಸಲು ಶಿವಸೇನೆ  ತೀರ್ಮಾನಿಸಿದೆ. ಅದರ ಮೊದಲು ಎನ್‌ಸಿಪಿ  ಇಂದು ಬೆಳಿಗ್ಗೆ ತುರ್ತು ಸಭೆ ನಡೆಸಿ, ಶಿವಸೇನೆ ನೇತೃತ್ವದ ಸಚಿವಸಂಪುಟದಲ್ಲಿ  ಸೇರ್ಪಡೆಗೊಳ್ಳಬೇಕೆ  ಅಥವಾ ಕೇವಲ  ಬಾಹ್ಯ ಬೆಂಬಲ ನೀಡಿದರೆ ಸಾಕೇ ಎಂಬ ಬಗ್ಗೆ ಚರ್ಚಿಸಿ  ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ  ಅವರೊಂದಿಗೆ ಈಬಗ್ಗೆ ಚರ್ಚಿಸಿ  ಅಂತಿಮ ತೀರ್ಮಾನ ಕೈಗೊಳ್ಳಲಾಗುವುದೆಂದು  ಎನ್‌ಸಿಪಿ ಮುಖಂಡ ಶರದ್ ಪವಾರ್ ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ತೊರೆದಲ್ಲಿ ಮಾತ್ರವೇ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಬೆಂಬಲ ನೀಡಲು ಸಿದ್ಧ ಎಂಬ ಷರತ್ತನ್ನು ಎನ್‌ಸಿಪಿ ಶಿವಸೇನೆ ಮುಂದಿರಿಸಿದೆ. ಅದರಂತೆ ಎನ್‌ಡಿಎ ತೊರೆಯುವ ಪೂರ್ವ ಕ್ರಮದಂತೆ ಕೇಂದ್ರ ಸಚಿವ ಅರವಿಂದ್ ಸಾವಂತ್ ಕೇಂದ್ರಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

ಇನ್ನೊಂದೆಡೆ ಸೋನಿಯಾ ಗಾಂಧಿ ಇಂದು ಕಾಂಗ್ರೆಸ್‌ನ ತುರ್ತು ಸಭೆ ಕರೆದಿದ್ದು, ಅದರಲ್ಲಿ ಶಿವಸೇನೆ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡುವ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಶಿವಸೇನೆ ಮೊದಲು ಅಲ್ಪ  ಮತ ಸರಕಾರವಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ವೇಳೆ ಅದಕ್ಕೆ ಬೆಂಬಲ ನೀಡಲು ಎನ್‌ಸಿಪಿ  ಮತ್ತು ಕಾಂಗ್ರೆಸ್ ಚಿಂತನೆ ನಡೆಸಿದೆ.

NO COMMENTS

LEAVE A REPLY