ಪಿ. ಜಯರಾಜನ್ ಮತ್ತೆ ಕಣ್ಣೂರು ಸೆಂಟ್ರಲ್ ಜೈಲಿಗೆ: ಹೇಳಿಕೆ ದಾಖಲಿಸಲು ಸಿ.ಬಿ.ಐ ಸಿದ್ಧತೆ

0
48

ತಲಶ್ಶೇರಿ: ಆರ್‌ಎಸ್‌ಎಸ್  ನೇತಾರ ಕದಿರೂರು ಮನೋಜ್ ಕೊಲೆ ಪ್ರಕರಣಕ್ಕೆ  ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ  ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಪಿ. ಜಯರಾಜನ್ ರನ್ನು ಸಿಬಿಐ ತಂಡ ಇಂದು ವಿಚಾರಿಸಿ ಹೇಳಿಕೆ ದಾಖಲಿಸಿಕೊಳ್ಳಲಿದೆ.

ಕದಿರೂರು ಮನೋಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನಿಸಲು ಜಯರಾಜನ್‌ರನ್ನು ತಮ್ಮ ಕಸ್ಟಡಿಗೆ ಬಿಟ್ಟುಕೊಡಬೇಕೆಂದು ಸಿಬಿಐ ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜಯರಾಜನ್‌ರನ್ನು ಕಸ್ಟಡಿಗೆ ಬಿಡುವ ಬದಲು ಅವರನ್ನು ಪ್ರಶ್ನಿಸಿ ಹೇಳಿಕೆ ದಾಖಲಿಸಲಷ್ಟೇ ನಿನ್ನೆ ಅನುಮತಿ ನೀಡಿದೆ. ಇದರಂತೆ ಇಂದು, ನಾಳೆ ಮತ್ತು ೧೧ರಂದು ಜಯರಾಜನ್‌ರನ್ನು ಪ್ರಶ್ನಿಸಲು ನ್ಯಾಯಾಲಯ ಅನುಮತಿ ನೀಡಿದೆ. ನ್ಯಾಯಾಂಗ ಬಂಧನಕ್ಕೊಳಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಪಿ. ಜಯರಾಜನ್‌ರನ್ನು ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಂತರ ಅವರನ್ನು  ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮತ್ತೆ ಕಣ್ಣೂರು ಸೆಂಟ್ರಲ್ ಜೈಲ್‌ಗೆ ತರಲಾಯಿತು.

ಅದನ್ನು ತಿಳಿದ ಸಿಬಿಐ ತಂಡ ಕಣ್ಣೂರು ಸೆಂಟ್ರಲ್ ಜೈಲ್ ಗೆ ತೆರಳಿ ಜಯರಾಜನ್‌ರಿಂದ ಪ್ರಶ್ನಿಸಿ   ಹೇಳಿಕೆ ದಾಖಲಿಸುವ ಸಿದ್ಧತೆಯಲ್ಲಿ ತೊಡಗಿದೆ. ಹೇಳಿಕೆ ದಾಖಲಿಸುವ ವೇಳೆ    ಕೊಠಡಿಯಲ್ಲಿ ಸಿಬಿಐಯ ಸಂಬಂಧಪಟ್ಟ ಅಧಿಕಾರಿಗಳ ಹೊರತಾಗಿ  ಬೇರೆ ಯಾರಿಗೂ   ಪ್ರವೇಶಿಸಲು ಅನುಮತಿ ನೀಡಬಾರದೆಂದೂ ನ್ಯಾಯಾಲಯ  ತಿಳಿಸಿದೆ.

ಇದೇ ಸಂದರ್ಭದಲ್ಲಿ ಪಿ. ಜಯರಾಜನ್‌ರ ನ್ಯಾಯಾಂಗ ಬಂಧನ ಅವಧಿ ನಾಳೆ ಕೊನೆಗೊಳ್ಳಲಿದೆ. ಯುಎಪಿಎ ಕಾನೂನು ಪ್ರಕಾರ ಕೇಸು ದಾಖಲಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಜಯರಾಜನ್‌ರಿಗೆ ನ್ಯಾಯಾಲಯ ಒಂದು ತಿಂಗಳ ತನಕ ನ್ಯಾಯಾಂಗ ಬಂಧನ ವಿಧಿಸಿತ್ತು. ಆ ಅವಧಿ ನಾಳೆ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಅವರ ನ್ಯಾಯಾಂಗ ಬಂಧನ ವಿಸ್ತರಿಸಬಹುದೇ ಯಾ ಜಾಮೀನು ನೀಡಬಹುದೇ ಎಂಬುವುದು ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಅವಲಂಬಿತವಾಗಿದೆ.

NO COMMENTS

LEAVE A REPLY