ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಾಳೆ: ತಲಪಾಡಿ ಗಡಿಯಲ್ಲಿ ಸಿದ್ಧತೆ ಪೂರ್ಣ

0
12

ಮಂಜೇಶ್ವರ: ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಾಳೆಯಿಂದ ಜುಲೈ ೩ರ ವರೆಗೆ ನಡೆಯಲಿದೆ. ಇದರಲ್ಲಿ ಜಿಲ್ಲೆಯ ೩೫೬ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಇವರನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಗಡಿ ಪ್ರದೇಶಗಳಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ.

ತಲಪಾಡಿ ಮೂಲಕ ೧೪೨ ಮಂದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಮಂಗಳೂರಿಗೆ ತೆರಳುತ್ತಿದ್ದು, ಇವರನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಲು ತಲಪಾಡಿ ಗಡಿವರೆಗೆ ಕರ್ನಾಟಕದ ೯ ಬಸ್‌ಗಳು ತಲುಪಲಿದೆ. ನಾಳೆ ಬೆಳಿಗ್ಗೆ ೭ರಿಂದ ವಿದ್ಯಾರ್ಥಿಗಳನ್ನು ತಲಪಾಡಿಯಿಂದ ಮಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಗುವುದು. ಈ ಬಗ್ಗೆ ಕೈಗೊಳ್ಳಬೇಕಾದ ಸಿದ್ಧತೆ ಬಗ್ಗ ನಿನ್ನೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ತಲಪಾಡಿಯಲ್ಲಿ ವಿದ್ಯಾರ್ಥಿಗಳು ನಿಂತುಕೊಳ್ಳಲು, ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದೇಹದ ಉಷ್ಣತೆಯನ್ನು ಪರೀಕ್ಷಿಸಿ  ಸಾಮಾಜಿಕ ಅಂತರ ಪಾಲಿಸಿ ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಕೊಂಡು ಹೋಗಲಾಗುವುದು. ಪರೀಕ್ಷೆ ಮುಗಿದ ಬಳಿಕ ಅವರನ್ನು ಅದೇ ರೀತಿ ಗಡಿ ಪ್ರದೇಶಕ್ಕೆ ತಂದು ಬಿಡಲಾಗುವುದು.

ಇದೇ ವೇಳೆ ಕೇರಳದ ರಾಜ್ಯ ಸಾರಿಗೆ ಬಸ್‌ಗಳು ಪರೀಕ್ಷಾ ದಿನಗಳಲ್ಲಿ ತಲಪಾಡಿ ಗಡಿವರೆಗೆ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈಗ ಬಸ್‌ಗಳು ಮಂಜೇಶ್ವರದಲ್ಲಿ ಸಂಚಾರ ಕೊನೆಗೊಳಿಸುತ್ತದೆ.

NO COMMENTS

LEAVE A REPLY