ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಿಂದ ಉತ್ಸವಮೂರ್ತಿ ಸಹಿತ ಬೆಳ್ಳಿ ಆಭರಣ ಕಳವು

0
90

ಮಂಜೇಶ್ವರ: ಮಳೆಗಾಲ ತೀವ್ರಗೊಳ್ಳುತ್ತಿರುವಂತೆಯೇ ಜಿಲ್ಲೆಯಲ್ಲಿ ಕಳವು ಪ್ರಕರಣಗಳು ವ್ಯಾಪಕಗೊಂಡಿದೆ. ಮೀಂಜ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನಿನ್ನೆ ರಾತ್ರಿ ಕಳ್ಳರು ನುಗ್ಗಿ ಕ್ಷೇತ್ರದ ಪಂಚಲೋಹದ ಉತ್ಸವಮೂರ್ತಿ ಸಹಿತ ಬೆಳ್ಳಿಯ ಆಭರಣಗಳನ್ನು ಕಳವು ನಡೆಸಿದ್ದಾರೆ. ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಭಟ್ ಇಂದು ಬೆಳಿಗ್ಗೆ ಎಂದಿನಂತೆ ಪೂಜೆಗೆ ತಲುಪಿದಾಗ ಕಳವು ಕೃತ್ಯ ಕಂಡು ಬಂದಿದೆ.

ಕ್ಷೇತ್ರದ ಗೋಪುರದ ಮರದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಅರ್ಚಕರ ಕೊಠಡಿಯಲ್ಲಿದ್ದ ಗರ್ಭಗುಡಿಯ ಕೀಲಿಕೈ ತೆಗೆದು ಗರ್ಭಗುಡಿಯ ಬಾಗಿಲು ತೆರೆದು ಕಳವು ನಡೆಸಿರುವುದು ಪತ್ತೆಯಾಗಿದೆ. ಗರ್ಭಗುಡಿಯಲ್ಲಿನ ಶಿವಲಿಂಗದಲ್ಲಿದ್ದ ೨ ಜತೆ ಬೆಳ್ಳಿಯ ಮುಕ್ಕಣ್ಣು, ಬೆಳ್ಳಿಯ ಹರಿವಾಣ, ಧಾರೆಯ ಬಟ್ಟಲು ಕಳವುಹೋಗಿದೆ. ಇದರ ಜೊತೆಗೆ ಇತರ ಕೆಲವು ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಕಳವು ನಡೆಸಲಾಗಿದೆ. ಆ ಬಳಿಕ ಕ್ಷೇತ್ರದ ಎರಡು ಕಚೇರಿಗಳಲ್ಲೂ ಕಳವು ಯತ್ನ ನಡೆಸಲಾಗಿದೆ. ಆದರೆ ಅಲ್ಲಿ ಏನು ಇರಲಿಲ್ಲ ಎನ್ನಲಾಗಿದೆ. ಕಾಣಿಕೆ ಹುಂಡಿಗಳೆರಡನ್ನು ಕಳ್ಳರು ಮುರಿದಿದ್ದಾರೆ. ಆದರೆ ಕಳೆದ ಆದಿತ್ಯವಾರ ಇದನ್ನು ತೆರೆದು ಅಧಿಕಾರಿಗಳು ಹಣ ತೆಗೆದ ಕಾರಣ ಕಳ್ಳರಿಗೆ ವಿಶೇಷವಾಗಿ ಏನೂ ಲಭಿಸಿರಲಿಕ್ಕಿಲ್ಲ ಎಂದು ಶಂಕಿಸಲಾಗಿದೆ.

ಕಳವು ನಡೆದ ಮಾಹಿತಿ ತಿಳಿದು ಸ್ಥಳಕ್ಕೆ ಕ್ಷೇತ್ರ ಸಮಿತಿಯ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ತಲುಪಿ ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಎಸ್.ಐ. ರಾಘವನ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆಗೆ ಚಾಲನೆ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳೀಯರು ಕ್ಷೇತ್ರಕ್ಕೆ ತಲುಪಿದ್ದಾರೆ.

ಇದೇ ವೇಳೆ ಜಿಲ್ಲೆಯ ವಿವಿಧೆಡೆ ಕಳವು ಪ್ರಕರಣಗಳು ವ್ಯಾಪಕಗೊಳ್ಳುತ್ತಿರುವುದು ನಾಗರಿಕರಲ್ಲಿ ಭೀತಿ ಹುಟ್ಟಿಸಿದೆ. ಕುಂಬಳೆ ಪೇಟೆಯಲ್ಲೂ ಆರು ಅಂಗಡಿಗಳಿಂದ ಮೊನ್ನೆ ರಾತ್ರಿ ಕಳವು ನಡೆದಿತ್ತು. ಅದರ ಬೆನ್ನಲ್ಲೇ ಚಿಗುರುಪಾದೆ ಕ್ಷೇತ್ರದಿಂದ ಕಳವು ನಡೆದಿದೆ.

NO COMMENTS

LEAVE A REPLY