ಖಮರುದ್ದೀನ್ ರಾಜೀನಾಮೆ ಆಗ್ರಹಿಸಿ ಬಿಜೆಪಿ ಉಪ್ಪಳ ತಾಲೂಕು ಕಚೇರಿಗೆ ನಡೆಸಿದ ಮಾರ್ಚ್‌ನಲ್ಲಿ ಲಾಠಿಚಾರ್ಜ್

0
35

ಉಪ್ಪಳ: ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಆರೋಪ ಮೂಡಿಬಂದ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಡೆಸುವ ಹೋರಾಟದಂಗವಾಗಿ ಇಂದು ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ತಾಲೂಕು ಕಚೇರಿಗೆ ಮಾರ್ಚ್‌ನಲ್ಲಿ  ವ್ಯಾಪಕ ಆಕ್ರಮಣ ನಡೆದಿದೆ. ತಾಲೂಕು ಕಚೇರಿ ಬಳಿ ತಲುಪಿದ ಮಾರ್ಚನ್ನು ಪೊಲೀಸರು ಬಾರಿಕೇಡ್ ಸ್ಥಾಪಿಸಿ ತಡೆದರು. ಈ ವೇಳೆ ಕಾರ್ಯಕರ್ತರು ಬಾರಿಕೇಡ್ ಮಗುಚಿ ಹಾಕಲು ಯತ್ನಿಸಿದರು. ಕೂಡಲೇ ಪೊಲೀಸರು ಜಲಪಿರಂಗಿ ಪ್ರಯೋಗಿಸಿದರು. ಆದರೆ ಅದಕ್ಕೂ ಜಗ್ಗದ ಕಾರ್ಯಕರ್ತರು ಮತ್ತೂ ಮುಂದುವರಿದಾಗ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು.ಪ್ರತಿಭಟನೆಯಲ್ಲಿ ವಿವಿಧೆಡೆಗಳ ಕಾರ್ಯಕರ್ತರು  ಭಾಗವಹಿಸಿದರು. ಉಪ್ಪಳ ಅಂಚೆಕಚೇರಿ ಪರಿಸರದಿಂದ ಆರಂಭಗೊಂಡ ಮಾರ್ಚ್ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎ.ಎ. ಅಬ್ದುಲ್ಲ ಕುಟ್ಟಿ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ  ಮಣಿಕಂಠ ರೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಅಧ್ಯಕ್ಷ ಕೆ. ಶ್ರೀಕಾಂತ್, ಮುಖಂಡರಾದ ಸತೀಶ್ಚಂದ್ರ ಭಂಡಾರಿ, ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ, ಸತ್ಯಶಂಕರ್ ಭಟ್, ಎ.ಕೆ. ಕಯ್ಯಾರ್, ಮುರಳೀಧರ ಯಾದವ್, ಆದರ್ಶ್ ಬಿ.ಎಂ. ಮೊದಲಾದವರು ನೇತೃತ್ವ ನೀಡಿದರು. ಜಿಲ್ಲಾ, ಮಂಡಲ, ಪಂಚಾಯತ್ ಮಟ್ಟದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದರು. ಸ್ಥಳದಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

NO COMMENTS

LEAVE A REPLY