ಶಾಸಕ ಎಂ.ಸಿ. ಖಮರುದ್ದೀನ್ ಮನೆಗೆ ಬಿಜೆಪಿ ಮಾರ್ಚ್

0
65

ಕಾಸರಗೋಡು:  ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಚಳವಳಿ ತೀವ್ರಗೊಳಿಸಿದೆ. ಇದರಂಗವಾಗಿ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪಡನ್ನ ಎಡಚ್ಚಾಕೈಯಲ್ಲಿರುವ  ಶಾಸಕನ ಮನೆಗೆ ಇಂದು ಬೆಳಿಗ್ಗೆ ಬೃಹತ್ ಮಾರ್ಚ್ ನಡೆಸಲಾಯಿತು.

ತೃಕ್ಕರಿಪುರ ಪೇಟೆಯಿಂದ ಬೃಹತ್ ಮೆರವಣಿಗೆ ಹೊರಟಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ಕಾರ್ಯದರ್ಶಿ ವೇಲಾಯುಧನ್, ಬಲ್‌ರಾಜ್ ಮೊದಲಾದವರು ನೇತೃತ್ವ ನೀಡುತ್ತಿದ್ದಾರೆ.

ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ತೃಕ್ಕರಿಪುರ ಪೇಟೆಯಿಂದ ೫ ಕಿಲೋ ಮೀಟರ್ ದೂರದಲ್ಲಿರುವ ಶಾಸಕನ ಮನೆಗೆ ಮಾರ್ಚ್ ನಡೆಯುತ್ತಿದೆ. ಮನೆಯಿಂದ ಸುಮಾರು ೧೫೦ ಮೀಟರ್ ದೂರದಲ್ಲಿ ಪೊಲೀಸರು ಬಾರಿಕೇಡ್ ಇರಿಸಿ ಮಾರ್ಚ್‌ಗೆ ತಡೆಯೊಡ್ಡಿದ್ದಾರೆ.

ಜ್ಯುವೆಲ್ಲರಿ ಹೆಸರಲ್ಲಿ  ಹಲವರಿಂದ ಠೇವಣಿ ಸಂಗ್ರಹಿಸಿ ವಂಚಿಸಿದ  ಶಾಸಕ ಎಂ.ಸಿ. ಖಮರುದ್ದೀನ್ ರಾಜೀನಾಮೆ  ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಈಗಾಗಲೇ ಹಲವು ಪ್ರತಿಭಟನೆ ನಡೆದಿರುತ್ತದೆ.

NO COMMENTS

LEAVE A REPLY