ಬಾರ್ ಲಂಚ ಪ್ರಕರಣ: ರಮೇಶ್ ಚೆನ್ನಿತ್ತಲ, ಮಾಜಿ ಸಚಿವರ ವಿರುದ್ಧ ತನಿಖೆಗೆ ಸರಕಾರ ನಿರ್ದೇಶ

0
64

ತಿರುವನಂತಪುರ: ರಾಜ್ಯದಲ್ಲಿ ಒಂದೊಮ್ಮೆ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದ ಬಾರ್ ಲಂಚ ಪ್ರಕರಣ ಇದೀಗ ಮತ್ತೆ ಸುದ್ದಿಯಾಗುತ್ತಿದೆ.

ಬಾರ್ ಲಂಚ ಪ್ರಕರಣದಲ್ಲಿ ವಿರೋಧಪಕ್ಷ ನೇತಾರ ರಮೇಶ್ ಚೆನ್ನಿತ್ತಲ ಸಹಿತ ಕಾಂಗ್ರೆಸ್ ನೇತಾರರ ವಿರುದ್ಧ ವಿಜಿಲೆನ್ಸ್ ತನಿಖೆಗೆ ಸರಕಾರ ನಿರ್ಧಾರ ಕೈಗೊಂಡಿರುತ್ತದೆ. ಬಾರ್ ಮಾಲಕ ಬಿಜು ರಮೇಶ್ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.

ರಮೇಶ್ ಚೆನ್ನಿತ್ತಲರ ಹೊರತು ಮಾಜಿ ಸಚಿವರಾದ ವಿ.ಎಸ್. ಶಿವಕುಮಾರ್, ಕೆ. ಬಾಬು ಎಂಬಿವರ ವಿರುದ್ಧವೂ ತನಿಖೆ ನಡೆಸುವಂತೆ ತಿಳಿಸಲಾಗಿದೆ. ಬಾರ್ ಲೈಸನ್ಸ್ ಫೀಸ್ ಕಡಿಮೆ ಮಾಡಲು ಬಾರ್ ಮಾಲಕರು ಸಂಗ್ರಹಿಸಿದ ಹಣವನ್ನು ಕೆಪಿಸಿಸಿ ಅಧ್ಯಕ್ಷರಾಗಿದ್ದ ರಮೇಶ್ ಚೆನ್ನಿತ್ತಲ, ಮಾಜಿ ಅಬಕಾರಿ ಸಚಿವ ಕೆ. ಬಾಬು, ಮಾಜಿ ಆರೋಗ್ಯ ಸಚಿವ ವಿ.ಎಸ್. ಶಿವಕುಮಾರ್ ಎಂಬಿವರಿಗೆ ನೀಡಲಾಗಿತ್ತು ಎಂಬುದಾಗಿ ಬಿಜು ರಮೇಶ್ ಬಹಿರಂಗಪಡಿಸಿದ್ದರು.

ಕೆ.ಎಂ. ಮಾಣಿ ವಿರುದ್ಧದ ಬಾರ್ ಲಂಚ ಪ್ರಕರಣದ ಹಿಂದೆ ಕಾಂಗ್ರೆಸ್ ನೇತಾರರು ಸೇರಿ ಗೂಢಾಲೋಚನೆ ನಡೆಸಿದ್ದಾರೆಂದು ಕೇರಳ ಕಾಂಗ್ರೆಸ್‌ನ ತನಿಖಾ ವರದಿ ಬಹಿರಂಗಗೊಂಡ ಬೆನ್ನಲ್ಲೇ ಬಿಜು ರಮೇಶ್ ಈ ಹಿಂದೆ ಹೇಳಿದ ಹೇಳಿಕೆಯನ್ನು ಪುನರಾವರ್ತಿಸಿದ್ದರು. ಕೆ.ಎಂ. ಮಾಣಿ ವಿರುದ್ಧ ನ್ಯಾಯಾಲಯದಲ್ಲಿ ಗುಪ್ತ ಹೇಳಿಕೆ ನೀಡಿದ ಬಿಜುರಮೇಶ್ ಬಾರ್ ಲೈಸನ್ಸ್ ಫೀಸ್ ಕಡಿಮೆ ಮಾಡಲು ಹಣ ಪಡೆದ ವಿಷಯವನ್ನು ಬಹಿರಂಗಪಡಿ ಸಿದ್ದರು. ಆದರೆ ಗುಪ್ತ ಹೇಳಿಕೆಯನ್ನು ರಮೇಶ್ ಚೆನ್ನಿತ್ತಲ ಸಹಿತ ಇತರ ನೇತಾರರ ವಿರುದ್ಧ ತಿಳಿಸಿರಲಿಲ್ಲ.

ಬಾರ್ ಲಂಚಕ್ಕೆ ಸಂಬಂಧಿಸಿ ಕೆ.ಎಂ. ಮಾಣಿ ಹಾಗೂ ಬಾಬು ವಿರುದ್ಧ ಮಾತ್ರವೇ ವಿಜಿಲೆನ್ಸ್ ತನಿಖೆ ನಡೆದಿತ್ತು. ಆದರೆ ಬಿಜು ರಮೇಶ್‌ರ ಹೊಸ ಹೇಳಿಕೆಯ ಆಧಾರದಲ್ಲಿ ಪ್ರಾಥಮಿಕ ತನಿಖೆ ನಡೆಸಿದ ವಿಜಿಲೆನ್ಸ್ ಕೇಸು ದಾಖಲಿಸಿ ತನಿಖೆ ನಡೆಸಬೇಕೆಂಬ ಬಗ್ಗೆ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.  ಮುಖ್ಯಮಂತ್ರಿ ತನಿಖೆಗೆ ಅನುಮತಿ ನೀಡಿದರೂ ವಿರೋಧಪಕ್ಷ ನೇತಾರ ಹಾಗೂ ಮಾಜಿ ಸಚಿವರ ವಿರುದ್ಧ ತನಿಖೆ ನಡೆಸುವಂತೆ ಆದೇಶ ಹೊರಡಿಸಲು ರಾಜ್ಯಪಾಲ ಹಾಗೂ ಸ್ಪೀಕರ್‌ರ ಅನುಮತಿಯೂ ಅಗತ್ಯವಿದೆ.

ಪಾಲಾರಿವಟ್ಟಂ ಸೇತುವೆ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಚಿವ ಇಬ್ರಾಹಿಂ ಕುಂಞಿಯವರ ಬಂಧನದ ಬೆನ್ನಲ್ಲೇ ಯುಡಿಎಫ್ ನೇತಾರರು ಒಳಗೊಂಡ ಇನ್ನಷ್ಟು ಪ್ರಕರಣವನ್ನು ಸಕ್ರಿಯಗೊಳಿಸಲು ಸರಕಾರ ನಿರ್ಧರಿಸಿದೆ.

NO COMMENTS

LEAVE A REPLY