ಪಿಗ್ಮಿ ಸಂಗ್ರಾಹಕನನ್ನು ಆಕ್ರಮಿಸಿ ಹಣ ದರೋಡೆಗೆ ಯತ್ನ

0
138

ಮಂಜೇಶ್ವರ: ಪಿಗ್ಮಿ ಸಂಗ್ರಾಹಕನನ್ನು ಆಕ್ರಮಿಸಿ ಹಣ ದರೋಡೆಗೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ಪೊಸೋಟುನಲ್ಲಿ ನಡೆದಿದೆ. ಹೆಲ್ಮೆಟ್ ಧರಿಸಿ ತಲುಪಿದ ಇಬ್ಬರು ಈ ಕೃತ್ಯ ನಡೆಸಿದ್ದಾರೆ. ಆಕ್ರಮಣದಲ್ಲಿ ಗಾಯಗೊಂಡ ಮಂಜೇಶ್ವರ ಗೋವಿಂದ ಪೈ ಕಾಲೇಜು ಬಳಿಯ ನಿವಾಸಿ ವೇಣು ಗೋಪಾಲ (೩೬)ರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಬಡಾಜೆ ಶಾಖೆಯ ಪಿಗ್ಮಿ ಹಣ ಸಂಗ್ರಾಹಕನಾದ ವೇಣುಗೋಪಾಲ ನಿನ್ನೆ ರಾತ್ರಿ ೯ ಗಂಟೆ ವೇಳೆ ಪೊಸೋಟ್‌ನ ರಾಷ್ಟ್ರೀಯ ಹೆದ್ದಾರಿ ಬದಿ ಬೈಕ್ ನಿಲ್ಲಿಸಿ ರಸ್ತೆ ದಾಟುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ತಲುಪಿದ್ದಾರೆ. ಈ ತಂಡ ವೇಣುಗೋಪಾಲರಲ್ಲಿ ಮಂಗಳೂರಿಗೆ ತೆರಳುವ ರಸ್ತೆ ಯಾವುದೆಂದು ಕೇಳಿದ್ದು, ರಸ್ತೆ ಬಗ್ಗೆ ತಿಳಿಸುತ್ತಿದ್ದಂತೆ ತಂಡ ವೇಣುಗೋಪಾಲರನ್ನು ದೂಡಿಹಾಕಿ ಹಣದ ಬ್ಯಾಗ್ ಅಪಹರಿಸಲು ಯತ್ನಿಸಿದೆ. ಈ ವೇಳೆ ರಸ್ತೆಗೆ ಬಿದ್ದ ವೇಣುಗೋಪಾಲ ಬ್ಯಾಗ್‌ನ್ನು ಬಿಗಿಯಾಗಿ ಹಿಡಿದಾಗ ದುಷ್ಕರ್ಮಿಗಳು ತಲವಾರಿನಿಂದ ಅವರ ಕೈಗೆ ಕಡಿದಿದೆ. ಈ ವೇಳೆ ಬೊಬ್ಬೆ ಕೇಳಿ ಪರಿಸರ ನಿವಾಸಿಗಳು ತಲುಪುತ್ತಿದ್ದಂತೆ  ಆಕ್ರಮಣಕಾರಿ ತಂಡ ಪರಾರಿಯಾಗಿದೆ. ತಂಡದ ಆಕ್ರಮಣದಿಂದ ವೇಣುಗೋಪಾಲರ ಎಡಕೈಯ ನರ ಕತ್ತರಿಸಲ್ಪಟ್ಟಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ. ನಿನ್ನೆ ಸಂಜೆ ವಿವಿಧೆಡೆ ಹಣ ಸಂಗ್ರಹಿಸಿ ವೇಣುಗೋಪಾಲ ಪೊಸೋಟುಗೆ ತಲುಪಿದ್ದರು. ಈ ವೇಳೆ ಅವರ ಬ್ಯಾಗ್‌ನಲ್ಲಿ ೪೦,೦೦೦ ರೂ. ಗಳಿದ್ದು ಆದರೆ ಪರಿಸರ ನಿವಾಸಿಗಳು ತಕ್ಷಣ ತಲುಪಿದುದರಿಂದ ಹಣ ದರೋಡೆ ತಪ್ಪಿಹೋಗಿದೆ.  ಪಿಗ್ಮಿಸಂಗ್ರಾಹಕ ವೇಣುಗೋಪಾಲರಿಗೆ ಆಕ್ರಮಣಗೈದು ಹಣದರೋಡೆಗೈಯ್ಯಲೆತ್ನಿಸಿದ ದುಷ್ಕರ್ಮಿಗಳ ಕೃತ್ಯವನ್ನು ಕೇರಳ ಕೋ-ಓಪರೇಟಿವ್ ಬ್ಯಾಂಕ್ ಎಂಪ್ಲೋಯೀಸ್ ಯೂನಿಯನ್, ಸಿಐಟಿಯು ಮಂಜೇಶ್ವರ ವಲಯ ಕಮಿಟಿ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಸಿಬ್ಬಂದಿಗಳು ಹಾಗೂ ಸಿಪಿಎಂ ಲೋಕಲ್ ಸಮಿತಿ ತೀವ್ರವಾಗಿ ಖಂಡಿಸಿದ್ದು, ಆಕ್ರಮಣಕಾರಿಗಳನ್ನು  ಕೂಡಲೇ ಪತ್ತೆಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿದೆ.

NO COMMENTS

LEAVE A REPLY