ಕುಂಬಳೆ : ಹೊಯ್ಗೆ ಲಾರಿ ಚಾಲಕನ ಸಾವು ಪ್ರಕರಣ ಆರೋಪಿಗೆ ೬ ವರ್ಷ ಕಠಿಣ ಸಜೆ, ದಂಡ

0
149

ಕಾಸರಗೋಡು: ಹೊಯ್ಗೆ ಸಾಗಿಸಲು ಬಂದ ಲಾರಿ ಚಾಲಕನನ್ನು ತಲೆಗೆ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ತೃತೀಯ) ಆರು ವರ್ಷ ಕಠಿಣ ಸಜೆ ಮತ್ತು ೨೦,೦೦೦ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಕಣ್ಣೂರು ಕುಟ್ಟಿಕ್ಕೋಲ್ ವಿಳಿಯ ನ್ನೂರು ನಿವಾಸಿ ಸುಕುಮಾರನ್(೩೪) ಎಂಬವರು ಸಾವನ್ನಪ್ಪಿದ  ಪ್ರಕರಣದ ಆರೋಪಿ ಲಾರಿ ಕ್ಲೀನರ್ ವಿಳಿಯನ್ನೂರಿನ ಕೆ.ಡಿ. ಶಿಜೋ ಅಲಿಯಾಸ್ ಶಿಜೊ(೨೮)ನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಹೊಡೆತಕ್ಕೊಳಗಾಗಿ ಸಾವನ್ನಪ್ಪಿದ ಲಾರಿ ಚಾಲಕ ಸುಕುಮಾರನ್ ಮತ್ತು ಕ್ಲೀನರ್ ಶಿಜೋ ಹೊಯ್ಗೆ ಸಾಗಿಸಲೆಂದು ೨೦೧೧ ಡಿಸೆಂಬರ್ ೧೩ರಂದು ಕಣ್ಣೂರಿನಿಂದ ಕುಂಬಳೆಗೆ ಸಮೀಪದ ಬಜಪೆ ಕಡವಿಗೆ ಲಾರಿಯೊಂದಿಗೆ ಬಂದಿದ್ದರು.  ಅಂದು ರಾತ್ರಿ ಅವರು ಲಾರಿಯಲ್ಲೇ ಮಲಗಿದ್ದರು. ಮರುದಿನ  ಬೆಳಿಗ್ಗೆ ಸುಕುಮಾರನ್ ತಲೆಗೆ ಏಟು ಬಿದ್ದು ಗಂಭೀರಾವಸ್ಥೆಯಲ್ಲಿ ಲಾರಿ ಬಳಿ ಪತ್ತೆಯಾಗಿದ್ದರು. ಆ ಬಗ್ಗೆ ಕ್ಲೀನರ್ ಶಿಜೋ ಬೆಳಿಗ್ಗೆ ಸ್ವತಃ ಊರಿನವರನ್ನು ಕರೆದು ಮಾಹಿತಿ ನೀಡಿದ್ದನು. ಬಳಿಕ ಕುಂಬಳೆ ಪೊಲೀಸರ ಸಹಾಯ ದೊಂದಿಗೆ ಸುಕುಮಾರನ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ೨೦೧೧ ಡಿಸೆಂಬರ್ ೧೫ರಂದು ರಾತ್ರಿ ಅವರು ಸಾವನ್ನಪ್ಪಿದ್ದರು. ಸುಕುಮಾರನ್ ಲಾರಿಯ ಮೇಲಿನಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರೆಂದು ಶಿಜೋ ಮೊದಲು ಪೊಲೀಸರಲ್ಲಿ ಹೇಳಿಕೆ ನೀಡಿದ್ದನು. ಆ ಬಗ್ಗೆ ಅಂದು ಕುಂಬಳೆ ಸಿ.ಐ ಆಗಿದ್ದ ಟಿ.ಪಿ. ರಂಜಿತ್‌ರ ನೇತೃತ್ವದ ಪೊಲೀಸರು ಶಿಜೋನನ್ನು ಸಮಗ್ರವಾಗಿ ವಿಚಾರಿಸಿದಾಗ ಹಾರೆಯ  ಹಿಡಿಯಿಂದ ತಾನು ಸುಕುಮಾರನ್‌ರ ತಲೆಗೆ ಹೊಡೆದಿದ್ದೆನೆಂದು ಆತ ಕೊನೆಗೆ  ತಪ್ಪೊಪ್ಪಿಕೊಂಡಿದ್ದನು. ಆ ಬಗ್ಗೆ ಪೊಲೀಸರು ಶಿಜೋನ ವಿರುದ್ಧ ಉದ್ದೇಶಪೂರ್ವಕವಲ್ಲದ ನರಹತ್ಯಾ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದರು.

ಹೊಯ್ಗೆ ತೆಗೆಯಲು ಕುಂಬಳೆ ಬಜಪೆ ಕಡವಿಗೆ ಲಾರಿಯಲ್ಲಿ ಬಂದಿದ್ದ ಸುಕುಮಾರನ್ ಮತ್ತು ಶಿಜೋ ಅಂದು ರಾತ್ರಿ ಬಜಪೆಯಲ್ಲಿ ಜತೆಗೆ ಮದ್ಯಪಾನ ಗೈದಿದ್ದರೆಂದೂ ಅದರ ಅಮಲಿನಲ್ಲಿ ಆರೋಪಿ ಶಿಜೋ ಸುಕುಮಾರನ್ ಕುಟುಂಬದವರನ್ನು ಹೀಯಾಳಿಸಿ ಮಾತನಾಡಿದ್ದನೆಂದೂ, ಆ ವಿಷಯದಲ್ಲಿ ಅವರ ಮಧ್ಯೆ ಜಗಳ ಉಂಟಾಗಿ ಆ ದ್ವೇಷದಿಂದ ಶಿಜೋ ಹಾರೆ ಹಿಡಿಯಿಂದ ಸುಕುಮಾರನ್ ತಲೆಗೆ ಹೊಡೆದಿದ್ದನೆಂದೂ ಅದು ಆತನ ಸಾವಿಗೆ ಕಾರಣವಾಗಿತ್ತೆಂದು   ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದರು. 

NO COMMENTS

LEAVE A REPLY