ಕೆರಯಲ್ಲಿದ್ದ ಪೈಪ್ ಹೆಕ್ಕಲು ಯತ್ನಿಸಿದ ಬಾಲಕ ಬಿದ್ದು ದಾರುಣ ಮೃತ್ಯು

0
93

ಮುಳ್ಳೇರಿಯ: ಕೆರೆಯಲ್ಲಿ ಬಿದ್ದ ಪೈಪನ್ನು ಹೆಕ್ಕಲು ಯತ್ನಿಸಿದ ಬಾಲಕನೋರ್ವ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಬೆಳ್ಳೂರು ಬಳಿಯ ಕುಳದಪಾರೆ ನಿವಾಸಿ ಬೆನ್ನಿ ಮೊಟ್ಟತ್ತಕುನ್ನಿಲ್ ಎಂಬವರ ಪುತ್ರ ಜೀವೋ ಬೆನ್ನಿ (೧೬) ಎಂಬಾತ ಮೃತಪಟ್ಟ ದುರ್ದೈವಿ ಯಾಗಿದ್ದಾನೆ. ಮಂಞಂಪಾರೆ ಮಜ್ಲಿಸ್ ಶಾಲೆಯ ಸಿಬಿಎಸ್‌ಇ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ ಜೀವೋ ಬೆನ್ನಿ ನಾಲ್ಕು ದಿನಗಳ ಹಿಂದೆ ಜಾಲ್ಸೂರಿನ ಲ್ಲಿರುವ ಅಜ್ಜಿ ಮನೆಗೆ ತೆರಳಿದ್ದನು. ನಿನ್ನೆ ಸಂಜೆ ಅಲ್ಲಿನ ಹಿತ್ತಿಲಿನಲ್ಲಿರುವ ಕೆರೆಯೊಂದಕ್ಕೆ ಬಿದ್ದ ಪೈಪನ್ನು ಹೆಕ್ಕಲೆಂದು ಈತ ಇಳಿದಿದ್ದನೆನ್ನಲಾಗಿದೆ.

ಈ ವೇಳೆ ಕಾಲುಜಾರಿ ಕೆರೆಗೆ ಬಿದ್ದ ಜೀವೋ ಬೆನ್ನಿಯ ತಲೆಗೆ ಕಲ್ಲುತಾಗಿ ಗಂಭೀರ ಗಾಯಗೊಂಡಿದ್ದನು. ಕೂಡಲೇ ಸುಳ್ಯದ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ಆತ ಮೃತಪಟ್ಟಿದ್ದಾನೆ. ಮೃತದೇಹವನ್ನು ಸುಳ್ಯದ  ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇಂದು  ದೇಲಂಪಾಡಿಯ ಇಗರ್ಜಿ ಬಳಿ ಅಂತ್ಯ ಸಂಸ್ಕಾರ ನಡೆಸಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.  ಸಿಬಿಎಸ್‌ಇ ಹತ್ತನೇ ತರಗತಿ ಫಲಿತಾಂಶ ಇಂದು ಪ್ರಕಟಗೊಳ್ಳಲಿದ್ದು, ಫಲಿತಾಂಶಕ್ಕೆ    ಕಾಯುತ್ತಿದ್ದಂತೆ   ಜೀವೋ ಬೆನ್ನಿಯ  ಆಕಸ್ಮಿಕ ನಿಧನ ಸಂಭವಿಸಿದೆ.

ಮೃತನು ತಂದೆ, ತಾಯಿ ಸುನಿ ಬೆನ್ನಿ, ಸಹೋದರ ಲಿವೋ ಮೊದಲಾದವರನ್ನು ಅಗಲಿದ್ದಾನೆ.

NO COMMENTS

LEAVE A REPLY