ಶಸ್ತ್ರಾಸ್ತ್ರ ದಾಸ್ತಾನು ಕೇಂದ್ರದಲ್ಲಿ ಸ್ಫೋಟ: ಇಬ್ಬರು ಅಧಿಕಾರಿಗಳ ಸಹಿತ ೧೭ ಮಂದಿ ಯೋಧರು ಮೃತ್ಯು

0
39

ಮಹಾರಾಷ್ಟ್ರ: ಮಹಾರಾಷ್ಟ್ರದ ವಾಗ್ದ ಜಿಲ್ಲೆಯ ಪುಲ್‌ಗಾವ್ ಭಾರತೀಯ ಸೇನಾ ವಿಭಾಗದ ಭಾರತದಲ್ಲೇ ಅತೀ ದೊಡ್ಡ ಶಸ್ತ್ರಾಸ್ತ್ರ ನಿರ್ಮಾಣ ಮತ್ತು ದಾಸ್ತಾನು ಕೇಂದ್ರಕ್ಕೆ ಇಂದು ಮುಂಜಾನೆ ದಿಢೀರ್ ಬೆಂಕಿ ತಗಲಿ ೧೭ ಮಂದಿ ಸೈನಿಕರು ಅಸುನೀಗಿದ್ದಾರೆ.

ಮಡಿದವರಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು ೧೫ ಜವಾನರು ಒಳಗೊಂಡಿದ್ದಾರೆ. ೧೯ಕ್ಕೂ ಅಧಿಕಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಮುಂಜಾನೆ ಸುಮಾರು ಒಂದು ಗಂಟೆ ವೇಳೆಗೆ ಈ ದಾಸ್ತಾನು ಕೇಂದ್ರಕ್ಕೆ ಬೆಂಕಿ ತಗಲಿ ಭಾರೀ ಸ್ಫೋಟವುಂಟಾಗಿದೆ. ಬೆಂಕಿ ಹೇಗೆ ತಗಲಿತೆಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಈ ದಾಸ್ತಾನು ಕೇಂದ್ರ ಅತೀವ ಸುರಕ್ಷಾ ವಲಯದಲ್ಲಿದ್ದು, ಆ ಹಿನ್ನೆಲೆಯಲ್ಲಿ ಬೆಂಕಿ ತಗಲಿರುವುದು ನಿಗೂಢತೆಗೂ ದಾರಿಮಾಡಿಕೊಟ್ಟಿದೆ.

ಬೆಂಕಿ ತಗಲಿ ಸ್ಫೋಟ ಉಂಟಾದ  ಪ್ರದೇಶದ ಗ್ರಾಮದ ಸಹಸ್ರಾರು ಮಂದಿಯನ್ನು ತಕ್ಷಣ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕದಳದ ಗಂಟೆಗಟ್ಟಲೆ   ಸತತ ಕಾರ್ಯಾಚರಣೆಯಲ್ಲಿ ಬೆಂಕಿ ಹೆಚ್ಚು ಪ್ರದೇಶಗಳಿಗೆ ವ್ಯಾಪಿಸುವುದನ್ನು ತಡೆಯಲಾಗಿದೆ. ಸ್ಥಿತಿ ಈಗ ನಿಯಂತ್ರಣದಲ್ಲಿದೆಯೆಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಶಸ್ತ್ರಾಸ್ತ್ರ ದಾಸ್ತಾನು ಕೇಂದ್ರದಲ್ಲಿ ಕೆಲವು ರಾಸಾಯನಿಕ ವಸ್ತುಗಳನ್ನು ಇರಿಸಲಾಗಿತ್ತೆಂದು ಮೊದಲು ರಾಸಾಯನಿಕ ವಸ್ತುಗಳಿಗೆ ಬೆಂಕಿ ತಗಲಿ  ಸ್ಫೋಟಗೊಂಡು ಬೆಂಕಿ ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಿತ್ತೆಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ದಾಸ್ತಾನು ಕೇಂದ್ರ ೨೦೦ ಎಕ್ರೆಯಷ್ಟಿರುವ ಅತೀವ ಸುರಕ್ಷಾ ಕೇಂದ್ರದಲ್ಲಿ ನೆಲೆಗೊಂಡಿದೆ. ಭಾರತೀಯ ಸೇನಾ ಪಡೆಗೆ ಅಗತ್ಯವಿರುವ ಬಂದೂಕುಗಳು ಮತ್ತು ಗುಂಡುಗಳು ಸೇರಿದಂತೆ ಇತರ ಆಯುಧಗಳನ್ನು ಇದೇ ಕೇಂದ್ರದಲ್ಲಿ ನಿರ್ಮಿಸಿ ಅಲ್ಲೇ ಅವುಗಳನ್ನು ದಾಸ್ತಾನು ಇರಿಸಲಾಗುತ್ತಿದೆ.

NO COMMENTS

LEAVE A REPLY