ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು ಆಸ್ಪತ್ರೆಯಲ್ಲಿ ಮೃತ್ಯು

0
97

ಹೊಸದುರ್ಗ: ಪಯ್ಯನ್ನೂರು ನಗರದ ಬಾಡಿಗೆ ಮನೆಯಲ್ಲಿ ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ವೆಸ್ಟ್ ಎಳೇರಿ, ಎಳೇರಿ ತಟ್ಟ್‌ನ ಟಿ. ರವಿಯವರ ಪುತ್ರ ಶಿವಪ್ರಸಾದ್ (೨೮), ಏಯಿಲೋಟ್ ಮರಂಜೀರಿ ರಾಜನ್‌ರ ಪುತ್ರಿ ಆರ್ಯ (೨೧) ಸಾವನ್ನಪ್ಪಿದ ಪ್ರೇಮಿಗಳು. ಈ ತಿಂಗಳ ೧೯ರಂದು ಸಂಜೆ ನಾಲ್ಕು  ಗಂಟೆ ವೇಳೆಗೆ ಇವರೀರ್ವರು ಪರಸ್ಪರ ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು.  ಗಂಭೀರ ಗಾಯಗೊಂಡ ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊ ಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಆರ್ಯ ನಿನ್ನೆ ರಾತ್ರಿ, ಶಿವಪ್ರಸಾದ್ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.

ಪಯ್ಯನ್ನೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಶಿವಪ್ರಸಾದ್ ಹಾಗೂ ಹಿಂದಿ ಪದವಿ ವಿದ್ಯಾರ್ಥಿನಿ ಯಾದ ಆರ್ಯ ಪರಸ್ಪರ ಪ್ರೀತಿಸುತ್ತಿದ್ದರು. ಇನ್ನೋರ್ವ ಯುವಕನ ಜತೆ ಆರ್ಯಳ ವಿವಾಹ ನಡೆಸಲು ಮನೆಯವರು ಸಿದ್ಧತೆ ನಡೆಸಿದ್ದು, ಈ ತಿಂಗಳ ೨೧ರಂದು ಮದುವೆ ನಿಶ್ಚಿತಾರ್ಥ ನಡೆಸಲು ಯೋಜನೆ ಹಾಕಿದ್ದರು. ಆದರೆ ೧೯ರಂದು ಹಿಂದಿ ಪರೀಕ್ಷೆ ಅರ್ಧದಲ್ಲಿ ಮುಗಿಸಿ ತರಗತಿಯಿಂದ ಆರ್ಯ ಹೊರಗೆ ಬಂದಳು. ಅನಂತರ ಶಿವಪ್ರಸಾದ್ ಜತೆ   ಆತನ ಬಾಡಿಗೆ ಮನೆಗೆ ಬಂದಳೆನ್ನಲಾಗಿದೆ. ಮನೆಗೆ ತಲುಪಿದ ಇಬ್ಬರೂ ಸೀಮೆ ಎಣ್ಣೆ ಮೈಗೆ ಸುರಿದು ಬೆಂಕಿ ಹಚ್ಚಿದ್ದಾರೆನ್ನಲಾಗಿದೆ. ಮಾಹಿತಿ ತಿಳಿದು ಓಡಿ ಬಂದ ಪರಿಸರ ನಿವಾಸಿಗಳು ಬೆಂಕಿ ನಂದಿಸಿ ಇಬ್ಬರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದರು. ನಾವಿಬ್ಬರೂ ಆತ್ಮಹತ್ಯೆ ಮಾಡುತ್ತಿದ್ದೇವೆ ಎಂದು ಶಿವಪ್ರಸಾದ್ ಬರೆದ ಪತ್ರ ಪೊಲೀಸರಿಗೆ ಲಭಿಸಿತ್ತು. ಪಯ್ಯನ್ನೂರಿನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂದು  ಮರಣೋತ್ತರ ಪರೀಕ್ಷೆ ನಡೆಸಲಾಗುವುದು.

ಮೃತ ಶಿವಪ್ರಸಾದ್ ತಾಯಿ ಶ್ಯಾಮಲಾ, ಸಹೋದರಿ ಶ್ಯಾಮಲಾ, ಮೃತ ಆರ್ಯಾ ತಾಯಿ ಶೀನಾ, ಸಹೋದರ ಅರ್ಜುನ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY