ನಾಶದ ಹಂತದಲ್ಲಿದ್ದ ಬಾವಿಗೆ ಕಾಸರಗೋಡು ರೋಟರಿ ಕ್ಲಬ್‌ನಿಂದ ಮರುಜೀವ

0
77

ಕಾಸರಗೋಡು: ಕಾಡು ಆವರಿಸಿ ಕೊಂಡು, ತ್ಯಾಜ್ಯಗಳನ್ನು ಎಸೆದು ನಾಮಾ ವಶೇಷಗೊಳ್ಳುತ್ತಿದ್ದ ಜಲಸಮೃದ್ಧವಾದ ಬಾವಿಯನ್ನು ಕಾಸರಗೋಡು ರೋಟರಿ ಕ್ಲಬ್   ಸಂರಕ್ಷಿಸಿ ಮಾದರಿಯಾಗಿದೆ.

ಕಾಸರಗೋಡು ನಗರಸಭೆಯ ಕರಂದಕ್ಕಾಡ್ ಜಂಕ್ಷನ್‌ನಲ್ಲಿ ದಶಕ ಗಳಿಂದ ಧಾರಾಳ ನೀರು ಲಭಿಸುತ್ತಿರುವ ಬಾವಿಯನ್ನು ಸಮಾಜದ್ರೋಹಿಗಳು ನಾಶಗೊಳಿಸುತ್ತಿದ್ದರು. ಕುಡಿಯುವ ನೀರಿನ ಕ್ಷಾಮ ತೀವ್ರಗೊಂಡಿದ್ದ ಕಾಸರ ಗೋಡಿನಲ್ಲಿ  ಈ ಬಾವಿಯ ಸಂರಕ್ಷಣೆ ಹಾಗೂ ಶುದ್ಧ ನೀರು ಖಚಿತಪಡಿಸಲು ಡಾ| ಜನಾರ್ದನ ನಾಯ್ಕ್‌ರ ನೇತೃತ್ವದಲ್ಲಿರುವ ಕಾಸರಗೋಡು ರೋಟರಿಕ್ಲಬ್ ಕಾರ್ಯಕರ್ತರು ರಂಗಕ್ಕಿಳಿದಿದ್ದಾರೆ. ಸುಮಾರು ಮೂರು ಲಕ್ಷ ರೂಪಾಯಿ ಮೊತ್ತ ವ್ಯಯಿಸಿ ಬಾವಿ ಹಾಗೂ ಬಾವಿಯ ಪರಿಸರವನ್ನು ರೋಟರಿ ಕ್ಲಬ್  ಪುನರ್ ನಿರ್ಮಿಸಿ  ಬಾವಿಯಿಂದ ಪರಿಸರದ ೨೦ರಷ್ಟು ಮನೆಗಳಿಗೆ ಕುಡಿಯುವ ನೀರು ಖಚಿತಪಡಿಸಲಾಗಿದೆ.

ಬಾವಿಯ ಸುತ್ತು ಸುಂದರ ಆಸನ, ವಿಶ್ರಾಂತಿ ಕೇಂದ್ರ, ವ್ಯಾಯಾಮಕ್ಕಿರುವ ಸೌಕರ್ಯಗಳನ್ನು ಸಜ್ಜುಗೊಳಿಸಲಾಗಿದೆ. ನವೀಕರಿಸಿದ ಬಾವಿ ಹಾಗೂ ಪರಿಸರವನ್ನು ರೋಟರಿ ಕ್ಲಬ್ ಇಂದು ನಾಡಿಗೆ ಸಮರ್ಪಿಸಿದೆ.

ನಗರಸಭಾ ಚೆಯರ್‌ಮೆನ್ ವಿ.ಎಂ. ಮುನೀರ್ ಉದ್ಘಾಟಿಸಿದರು. ಡಾ| ಜನಾರ್ದನ ನಾಯ್ಕ್ ಅಧ್ಯಕ್ಷತೆ ವಹಿಸಿದರು.  ರೋಟರಿ ಗವರ್ನರ್ ಹರಿಕೃಷ್ಣನ್ ನಂಬ್ಯಾರ್, ಡಾ| ಸ್ಮಿತಾ ಹರಿಕೃಷ್ಣನ್, ಅಬ್ಬಾಸ್ ಬೀಗಂ, ದಿನಕರ ರೈ, ಎಂ.ಕೆ. ರಾಧಾಕೃಷ್ಣನ್, ಪಿ.ಪಿ. ಯೂಸಫ್, ಡಾ|  ನಾರಾಯಣ ನಾಯ್ಕ್, ಎಂ.ಟಿ. ದಿನೇಶನ್, ಗೌತಂ ಭಕ್ತ, ಡಾ| ಎಂ.ಎಸ್. ರಾವ್, ಸರ್ವಮಂಗಳ, ನಾಗೇಶ್, ಹಮೀದ್, ಜ್ಯೋತಿ ಮೊದಲಾದವರು ಮಾತನಾಡಿದರು.

NO COMMENTS

LEAVE A REPLY