ಹಿರಿಯ ಕವಿ ಡಾ. ಸಿದ್ದಲಿಂಗಯ್ಯರ ನಿಧನಕ್ಕೆ ಕಾಸರಗೋಡಿನ ಕಂಬನಿ

0
72

ಕಾಸರಗೋಡು: ಹಿರಿಯ ಕವಿ ಡಾ. ಸಿದ್ಧಲಿಂಗಯ್ಯ (೬೭) ಅವರ ನಿಧನಕ್ಕೆ ಕಾಸರಗೋಡಿನ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು ಸರಕಾರಿ ಕಾಲೇಜು ಕನ್ನಡ ವಿಭಾಗದ ಉಪನ್ಯಾಸಕ ಡಾ. ರತ್ನಾಕರ ಮಲ್ಲಮೂಲೆ, ಪಿ. ಶಂಕರನಾರಾಯಣ ಭಟ್, ಉಮೇಶ್ ಸಾಲಿಯಾನ್ ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಕಾಸರಗೋಡು, ಮಂಜೇಶ್ವರ ಸರಕಾರಿ ಕಾಲೇಜುಗಳ ಕನ್ನಡ ವಿಭಾಗ, ಅಪೂರ್ವ ಕಲಾವಿದರು ಸಂಘಟನೆ,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾಸರಗೋಡು ಘಟಕ ಸಂತಾಪ ವ್ಯಕ್ತಪಡಿಸಿದೆ.

ಅಗಲಿದ ಕವಿ ಡಾ. ಸಿದ್ಧಲಿಂಗಯ್ಯರು ಕಾಸರಗೋಡಿನೊಂದಿಗೆ ಹತ್ತಿರದ ಸಂಬಂಧವಿಟ್ಟುಕೊಂಡಿದ್ದರು. ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಕಾಸರಗೋಡಿನ ಕನ್ನಡ ಶಾಲೆಗಳಿಗೆ, ಗ್ರಂಥಾಲಯಗಳಿಗೆ ಉಚಿತವಾಗಿ ಪುಸ್ತಕ ದೊರಕಿಸಿದ್ದರು. ಅದೇ ರೀತಿ ಗಡಿನಾಡು ಹಾಗೂ ಹೊರನಾಡಿನಲ್ಲಿ ಕಲಿಯುತ್ತಿರುವ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ  ದೊರಕಿಸಿದ್ದರು. ಕಾಸರಗೋಡಿನ ಕನ್ನಡಿಗರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದ ಅವರು ಇಲ್ಲಿ ನಡೆಯುತ್ತಿದ್ದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಅಲ್ಲದೆ ಕಾಸರಗೋಡಿನಲ್ಲಿ  ನಡೆದ ಹಲವು ಕನ್ನಡ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು.

ಡಾ. ಸಿದ್ದಲಿಂಗಯ್ಯ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಂತರ ಮೇ ೪ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಣಿ ಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕ ದಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅಪರಾಹ್ನ ಅವರು ಇಹಲೋಕ ತ್ಯಜಿಸಿದ್ದಾರೆ.

NO COMMENTS

LEAVE A REPLY