ಕಣ್ಣೂರಿನಲ್ಲಿ ಮತ್ತೆ ಸಿಪಿಎಂ-ಬಿಜೆಪಿ ಘರ್ಷಣೆ: ಇಬ್ಬರಿಗೆ ಗಾಯ

0
27

ಕಣ್ಣೂರು: ಇಲ್ಲಿನ ಧರ್ಮಡಂನಲ್ಲಿ ಸಿಪಿಎಂ-ಬಿಜೆಪಿ ಕಾರ್ಯಕರ್ತರ ಮಧ್ಯೆ ಸಂಘರ್ಷ ಉಂಟಾಗಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಧರ್ಮಡಂ ಮೇಲೂರು ನಿವಾಸಿ ಬಿಜೆಪಿ ಕಾರ್ಯಕರ್ತ ಧನರಾಜ್ (೩೩) ಗಾಯಗೊಂಡವರಾಗಿದ್ದು, ಇವರನ್ನು ಕಲ್ಲಿಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಒಂದು ಕೈ ತುಂಡಾದ ಸ್ಥಿತಿಯಲ್ಲಿದ್ದು, ತುರ್ತು ಶಸ್ತ್ರಕ್ರಿಯೆ ನಡೆಸಲಾಗಿದೆ. ಸಿಪಿಎಂ ಕಾರ್ಯಕರ್ತ  ವೇಲೂರು ಮನೀಶ್ (೪೧)ರಿಗೆ ಸಹ ಇರಿತವುಂಟಾಗಿದ್ದು, ಇವರನ್ನು ತಲಶ್ಶೇರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯರಾತ್ರಿ ಧರ್ಮಡಂ ವೇಲೂರು ಬಳಿಯಲ್ಲಿ ಇತ್ತಂಡಗಳೊಳಗೆ ಘರ್ಷಣೆ ನಡೆದಿದೆ.

ಎರಡೂ ತಂಡಗಳು ಗುಂಪುಗೂಡಿ ಪರಸ್ಪರ ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಹಲವು  ವರ್ಷಗಳ ಹಿಂದೆ ಕಣ್ಣೂರಿನಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೇರಿತ್ತು. ಇದರಿಂದಾಗಿ ಹಲವರು ಪ್ರಾಣ ಕಳೆದುಕೊಂಡು, ಹಲವರು ಗಾಯಗೊಂಡಿದ್ದರು. ಅನಂತರ ಎರಡೂ ಬಾಗದ ನೇತಾರರು ಪರಸ್ಪರ ಮಾತುಕತೆ ನಡೆಸಿದ್ದು, ಹಿಂಸಾಚಾರ ಕೊನೆಗೊಂಡಿತ್ತು.

ಇದೀಗ ಮತ್ತೆ ಸಿಪಿಎಂ-ಬಿಜೆಪಿ ರಾಜಕೀಯ ಸಂಘರ್ಷ ಉಂಟಾಗಿದ್ದು, ವ್ಯಾಪಕ ಆತಂಕಕ್ಕೂ ಕಾರಣವಾಗಿದೆ. ಹಿಂಸಾಚಾರ ವಿವಿಧ ಕಡೆಗಳಿಗೆ ವ್ಯಾಪಿಸದಂತೆ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ವಿವಿಧೆಡೆ ಪೊಲೀಸರು ಸರ್ಪಗಾವಲು ಏರ್ಪಡಿಸಿದ್ದಾರೆ. ಕಣ್ಣೂರಿನಲ್ಲಿ ವರ್ಷಗಳ ಹಿಂದೆ ನಡೆದ ಸಿಪಿಎಂ ಹಿಂಸಾಚಾರದ ವಿರುದ್ದ ಬಿಜೆಪಿ ಆರ್‌ಎಸ್‌ಎಸ್ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನಡೆದಿತ್ತು. ಅನಂತರ ಕಣ್ಣೂರಿ ನಲ್ಲಿ ಹಿಂಸಾಚಾರ ಕೊನೆಗೊಂಡಿತ್ತು. ಸಂಘರ್ಷದಿಂದಾಗಿ ಈ ಹಿಂದೆ ಎರಡೂ ಭಾಗಗಳ ಹಲವು ನೇತಾರರು, ಕಾರ್ಯಕರ್ತರು ಕೊಲೆಗೀಡಾಗಿದ್ದರು.

NO COMMENTS

LEAVE A REPLY