ಕಣ್ಣೂರು: ರಾಜ್ಯದಲ್ಲಿಯೇ ಬೃಹತ್ ಪ್ರಮಾಣವೆನ್ನಲಾದ ಮಾದಕ ವಸ್ತು ಎಂ.ಡಿ.ಎಂ.ಎಯನ್ನು ಕಣ್ಣೂರು ನಗರ ಠಾಣಾ ಪೊಲೀಸರು ವಶಪಡಿಸಿದ್ದಾರೆ. ೨ ಕಿಲೋ ತೂಕ ಬರುವ ಎಂಡಿಎಂಎ ಸಹಿತ ಮುಯಪ್ಪಿಲಂಗಾಡಿ ನಿವಾಸಿಗಳಾದ ಅಫ್ಸಲ್ (೩೩) ಹಾಗೂ ಪತ್ನಿ ಬಲ್ಕೀಸ್ (೩೧) ಎಂಬಿವರನ್ನು ತೆಕ್ಕೆಬಜಾರ್‌ನ ಪಾರ್ಸೆಲ್ ಆಫೀಸಿನಿಂದ ಬಂಧಿಸಲಾ ಯಿತು. ಆರೋಪಿಗಳಿಂದ ೨ ಕಿಲೋ ಎಂಡಿಎಂಎ ಮತ್ತು ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಯಿತು. ಬೆಂಗಳೂರು ಬಸ್ ಕೇಂದ್ರೀಕರಿಸಿ ಇವರು ಮಾದಕವಸ್ತು ಸಾಗಿಸುತ್ತಿದ್ದರೆಂದು ಸಿಟಿ ಪೊಲೀಸ್ ಕಮಿಷನರ್ ಆರ್. ಇಳಂಗೋವ್ ತಿಳಿಸಿದ್ದಾರೆ. ವಶಪಡಿಸಲಾದ ಮಾದಕ ವಸ್ತುವಿನ ಮೌಲ್ಯ ಒಂದು ಕೋಟಿ ರೂ. ಗಳಾಗಬಹುದೆಂದು ಅಂದಾಜಿಸಲಾಗಿದೆ.
ಕಣ್ಣೂರು ಸಿಟಿ ಪೊಲೀಸ್ ಕಮೀಷನರ್ ಆರ್. ಇಳಂಗೋವ್ ಅವರಿಗೆ ಲಭಿಸಿದ ಗುಪ್ತ ಮಾಹಿತಿಯನ್ವಯ ಕಣ್ಣೂರು ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಜಿತ್ ಕೊಡೇರಿಯವರ ನೇತೃತ್ವದ ತಂಡವು ಪತಿ- ಪತ್ನಿಯರಿಬ್ಬರನ್ನು ಬಂಧಿಸಿತು.
ಬಸ್ಸಿನಲ್ಲಿ ಬಂದ ಪಾರ್ಸೆಲ್ ಪಡೆಯಲು ಈ ಅಫ್ಸಲ್ ಮತ್ತು ಬಲ್ಕೀಸ್ ದಂಪತಿ ಪಾರ್ಸೆಲ್ ಕಚೇರಿಗೆ ಬಂದಿದ್ದರು. ಈ ಹಿಂದೆ ಮುಯಪ್ಪಿಲಂಗಾಡಿಯಿಂದ ಇವರನ್ನು ವಶಕ್ಕೆ ಪಡೆಯಲಾಯಿತಾದರೂ ಪಾರ್ಸೆಲ್ ಉಪೇಕ್ಷಿಸಿ ಅವರು ಪರಾರಿಯಾಗಿದ್ದರು.
ಕೇರಳ ರಾಜ್ಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ಬೃಹತ್ ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಲಾಗಿದೆ ಎಂದು ಕಣ್ಣೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಬೆಂಗಳೂರಿನಿಂದ ಟೂರಿಸ್ಟ್ ಬಸ್‌ಗಳ ಮೂಲಕ ಪಾರ್ಸೆಲ್ ಎಂಬ ಹೆಸರಿನಲ್ಲಿ ಇವರು ಮಾದಕ ವಸ್ತುವನ್ನು ಸಾಗಿಸುತ್ತಿದ್ದರು. ಇದನ್ನು ತೆಗೆದುಕೊಳ್ಳಲು ಕಣ್ಣೂರು ನಗರದ ಪಾರ್ಸೆಲ್ ಕಚೇರಿಗೆ ತಲುಪಿದ್ದರು. ಬಲ್ಕೀಸ್ ಈ ಹಿಂ ದೆಯೂ ಪೊಲೀಸರ ಮತ್ತು ಅಬಕಾರಿ ದಳದವರ ನಿಗಾದಲ್ಲಿದ್ದಳು. ಇವರ ಮಾದಕ ವಸ್ತು ವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಲಾಗುವುದೆಂದು ಕಮಿಷನರ್ ತಿಳಿಸಿದ್ದಾರೆ.