ವಿಷ್ಣು ಸ್ಮಾರಕ ನಿರ್ಮಾಣ ಮೈಸೂರಿನಲ್ಲೇ-ಭಾರತಿ

0
64

– ಗಣೇಶ್ ಕಾಸರಗೋಡು

 

ಯಾರು ಎಷ್ಟೇ ಒತ್ತಡ ತಂದರೂ ನನ್ನ ನಿರ್ಧಾರ ಬದಲಾಗುವ ಪ್ರಶ್ನೆಯೇ ಇಲ್ಲ. ಅದು ಅಚಲ. ನಮ್ಮೆಜಮಾನ್ರ ಸ್ಮಾರಕ ನಿರ್ಮಾಣವಾಗುವುದು ಮೈಸೂರಿನಲ್ಲೇ. ಇದರಲ್ಲಿ ಯಾವ ಅನುಮಾನವೂ ಬೇಡ. ಸರ್ಕಾರ ಈ ಬಗ್ಗೆ ಈಗಾಗಲೇ ಸೂಚನೆ ನೀಡಿದ್ದಾಗಿದೆ. ನಾನು ಕೂಡಾ ಒಪ್ಪಿಕೊಂ ಡಿದ್ದೇನೆ. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಜಾಯಮಾನದವಳು ನಾನಲ್ಲ. ಇದು ನನ್ನ ಪ್ರತಿಷ್ಠೆಯ ಪ್ರಶ್ನೆಯ ನಮ್ಮೆಜಮಾನ್ರ ಇಷ್ಟದ ಪ್ರಶ್ನೆಯೂ ಹೌದು…” ಎಂದು ಹೇಳುತ್ತಾ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಆವೇಶಕ್ಕೊಳಗಾದರವರಂತೆ ಒಮ್ಮೆ ಸುದೀರ್ಘ ನಿಟ್ಟುಸಿರು ಬಿಟ್ಟರು.

ಅದು ಸಾಹಸಸಿಂಹ ವಿಷ್ಣುವರ್ಧನ್ ಅವರು ಪ್ರೀತಿಯಿಂದ ಕಟ್ಟಿಸಿದ ಬಂಗಲೆ. ಜಯನಗರದಲ್ಲಿರುವ ಸೊಗಸಾದ ಬಂಗಲೆಗೆ ಈ ಹಿಂದೆ  ‘ವಲ್ಮೀಕ’ ಎಂದು ಹೆಸರಿಡ ಲಾಗಿತ್ತು. ‘ವಲ್ಮೀಕ’ ಅಂದರೆ ಹುತ್ತ ಎಂದರ್ಥ. ನಾಗರ ಹಾವು ಹುತ್ತದಲ್ಲಲ್ಲದೇ ಬೇರೆಲ್ಲಿ ವಾಸಿಸುತ್ತವೆ ಹೇಳಿ? ‘ನಾಗರ ಹಾವು’ ಚಿತ್ರ ದೊಡ್ಡ ಹೆಸರು ಮಾಡಿದಾಗ ಕಟ್ಟಿಸಿದ ಈ ಮನೆಗೆ ‘ವಲ್ಮೀಕ’ ಎಂದು ‘ರಾಮಾಚಾರಿ’ ನಾಮಕರಣ ಮಾಡಿದ್ದು ಸಹಜವೇ ಆಗಿತ್ತು. ಆದರೆ ಈಗ ‘ವಲ್ಮೀಕ’ದ ಬದಲು ಆ ಜಾಗದಲ್ಲಿ ವಿಷ್ಣು ಅವರ ತಂದೆಯ (ನಾರಾಯಣ ರಾವ್) ಹೆಸರು ರಾರಾಜಿಸುತ್ತಿದೆ.

ಇಂಥಾ ಸೊಗಸಾದ ಮನೆಯ ವರಂಡಾದಲ್ಲಿ ಕುಳಿತು ಭಾರತಿಯವರು ಮಾತಾಡುತ್ತಿದ್ದರು. ಅಚ್ಚ ಬಿಳಿಯ ಡ್ರೆಸ್‌ನಲ್ಲಿದ್ದ ಭಾರತಿಯವರು ಮಾತಾಡುತ್ತ ಆಡುತ್ತಾ ನಿಗಿನಿಗಿ ಕೆಂಪಗಾಗಿದ್ದರು! ಎರಡೇ ಎರಡು ಪ್ಲಾಸ್ಟಿಕ್ ಕುರ್ಚಿ. ಇಬ್ಬರ ನಡುವೆ ಬಿಸಿ ಬಿಸಿ ಮಾತುಕತೆ. ಭಾವನೆಗಳನ್ನು ತಡೆದು ಕಟ್ಟಿ ಹಾಕಲು ಅಲ್ಲಿ ಬೇರೆ ಯಾರೂ ಇರಲಿಲ್ಲ. ಇಷ್ಟಾಗಿ ಭಾರತೀಯವರು ಈ ಬಗ್ಗೆ ಬೇರೆಲ್ಲೂ ಕಾಮೆಂಟ್ ಮಾಡಿದ ದಾಖಲೆಯಿಲ್ಲ. ವಿಷ್ಣುವರ್ಧನ್ ಸ್ಮಾರಕ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್ ಆಗಿರುವ ಬಗ್ಗೆ ಕೆಲವೊಂದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತಷ್ಟೇ. ಮತ್ತೆ ಕೆಲವು ಚಾನಲ್‌ಗಳಲ್ಲಿ ಚರ್ಚೆ ನಡೆಸಿತ್ತು. ಆದರೆ ಯಾವ ಪತ್ರಿಕೆಗಳಲ್ಲೂ, ಯಾವ ಟಿ.ವಿ. ಚಾನಲ್‌ಗಳಲ್ಲೂ ಭಾರತಿಯವರ ಅಭಿಪ್ರಾಯ ವ್ಯಕ್ತವಾಗಿರಲಿಲ್ಲ. ನಿಜ, ನಮ್ಮ ಪತ್ರಿಕೆಯ ಶೀರ್ಷಿಕೆಯಂತೆ ಭಾರತಿಯವರು ‘ಹಿಮ’ವೂ ಆಗಿದ್ದರು, ‘ಅಗ್ನಿ’ಯೂ ಆಗಿದ್ದರು! ಹೀಗಾಗಿ ಅಂದು ಅವರೊಳಗಿನ ಹಿಮಾಗ್ನಿ ಜತೆಯಾಗಿಯೇ ಸ್ಫೋಟಗೊಂ ಡಿತ್ತು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಜ್ವಾಲಾಮುಖಿಯಷ್ಟು! ಹೌದು, ಭಾರತಿ ಜ್ವಾಲಾಮುಖಿಯಾಗಿದ್ದರು. ಒಳಗೆ ಕಟ್ಟಿಟ್ಟ ಲಾವಾರಸ ಹೊರಗಿನ ತೀವ್ರ ಒತ್ತಡಕ್ಕೆ ಮಣಿದು ಹೊರಹೊಮ್ಮಲ್ಪಟ್ಟಿತ್ತು. ಮುಂಜಾನೆಯ ಆ ಬೆಳಗಲ್ಲೂ ಭಾರತಿಯವರು ಬೆವರುತ್ತಿದ್ದರು. ಇದು ಕಳೆದ ಆರು ವರ್ಷಗಳ ನಿರಂತರ ಹಗ್ಗ ಜಗ್ಗಾಟ. ಒಮ್ಮೆ ಬೆಂಗಳೂರು, ಮತ್ತೊಮ್ಮೆ ಮೈಸೂರು. ಮತ್ತೆ ಮತ್ತೆ ಬೆಂಗಳೂರು, ಮತ್ತೆ ಮತ್ತೆ ಮೈಸೂರು. ಅವ್ಯಾಹತವಾಗಿ ಸಾಗಿದ ಈ ಹಗ್ಗ ಜಗ್ಗಾಟದಿಂದಾಗಿ ಮಾನಸಿಕವಾಗಿ ನೊಂದು ಹೋಗಿರುವ ಭಾರತಿಯವರು ಸಹಜವಾಗಿ ಸಿಟ್ಟುಗೊಂಡಿದ್ದರು. ಕೆಂಗೇರಿಯ ಅಭಿಮಾನ್ ಸ್ಟುಡಿಯೋದ ಅಂಗಳದಲ್ಲಿ ವಿಷ್ಣು ಪಾರ್ಥೀವ ಶರೀರವನ್ನು ಮಣ್ಣು ಮಾಡಿ ಅಲ್ಲೇ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ಹೇಳಿತು. ಎಲ್ಲವೂ ಸಿದ್ಧವಾಯಿತು ಎನ್ನುವಷ್ಟರಲ್ಲಿ ಬಾಲಕೃಷ್ಣ ಅವರ ಮಕ್ಕಳ ನಡುವಿನ ಜಮೀನು ವ್ಯಾಜ್ಯ ಕೋರ್ಟ್ ಮೆಟ್ಟಲೇರಿತು. ರಾಜಿ ಸಂಧಾನ ಉಪಯೋಗಕ್ಕೆ  ಬರಲಿಲ್ಲ. ಬೇರೆ ದಾರಿ ಕಾಣದ ಸರ್ಕಾರ ಅಲ್ಲೇ ಪಕ್ಕದಲ್ಲೇ ಬೇರೊಂದು ಜಾಗವನ್ನು ಗುರುತಿಸಿತು. ಚಕಾರವೆತ್ತದ ಭಾರತಿಯವರು ಅಲ್ಲೇ ಗುದ್ದಲಿಪೂಜೆ ಮಾಡಿದರು. ಕೆಲಸ ಆರಂಭಿಸಬೇಕು ಎನ್ನುವಷ್ಟರಲ್ಲಿ ಅರಣ್ಯ ಇಲಾಖೆ ತಕರಾರೆತ್ತಿತು. ಮತ್ತೆ ಅಭಿಮಾನ್ ಅಂಗಳಕ್ಕೇ ಶಿಫ್ಟ್ ಆಯಿತು ಸ್ಮಾರಕದ ನಿರ್ಮಾಣ. ಮತ್ತೆ ವ್ಯಾಜ್ಯ. ಬಾಲಣ್ಣನ ಮಕ್ಕಳಲ್ಲೇ ಒಮ್ಮತವಿರಲಿಲ್ಲ. ಹೀಗಾಗಿ ಸ್ಮಾರಕ ನಿರ್ಮಾಣದ ಯೋಜನೆಯನ್ನು ಮೈಸೂರಿಗೆ ಶಿಫ್ಟ್ ಮಾಡಲಾಯಿತು. ವಿಷ್ಣು ಅಭಿಮಾನಿಗಳು ತಕರಾರೆತ್ತಿದರು. ಇದು ತೀವ್ರ ಸ್ವರೂಪ ಪಡೆಯುತ್ತಿರುವಂತೆಯೇ ಸ್ವಲ್ಪ ಮೃದು ಧೋರಣೆಯನ್ನು ತಳೆದ ಬಾಲಣ್ಣನ ಮಕ್ಕಳು ಜಮೀನು ನೀಡಲು ಒಪ್ಪಿದರು. ಆದರೆ ಕೋರ್ಟಿನ ವ್ಯಾಜ್ಯವನ್ನು ಬಗೆಹರಿಸಿರಲಿಲ್ಲ. ಮತ್ತೆ ಮೈಸೂರಿನಿಂದ ಬೆಂಗಳೂರಿಗೆ ಸ್ಮಾರಕ ಯೋಜನೆ ಶಿಫ್ಟ್ ಆಯಿತು ಅಂತಂದುಕೊಳ್ಳುವಷ್ಟರಲ್ಲಿ ಬಾಲಣ್ಣನ ಮಕ್ಕಳ ವ್ಯಾಜ್ಯ ತೀವ್ರ ಸ್ವರೂಪ ಪಡೆದುಕೊಂಡಿತು. ದುರಂತವೆಂದರೆ ಈ ಹಗ್ಗಜಗ್ಗಾಟದಿಂದಾಗಿ ಅಮೂಲ್ಯ ಆರು ವರ್ಷಗಳು ನಷ್ಟವಾದುವು. ಹೀಗಿದ್ದರೆ ಹಗ್ಗಜಗ್ಗಾಟ ಮುಂದುವರಿಯುತ್ತಲೇ ಇರುತ್ತದೆ ಎಂದು ಲೆಕ್ಕಾಚಾರ ಹಾಕಿದ ಭಾರತಿಯವರ ಮುಂದೆ ಮತ್ತೆ ಸರ್ಕಾರ ಮೈಸೂರಿನ ಪ್ರಸ್ತಾಪವನ್ನಿಟ್ಟಿತು. ಇನ್ನು ತಡಮಾಡುವುದರಲ್ಲಿ ಅರ್ಥವಿಲ್ಲ. ಅಂತಂದುಕೊಂಡ ಭಾರತಿಯವರು ಒಂದು ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಅದು ‘ಮೈಸೂರಿನಲ್ಲೇ ವಿಷ್ಣು ಸ್ಮಾರಕವನ್ನು ನಿರ್ಮಿಸುವುದು’ ಎಂಬ ದೃಢ ನಿರ್ಧಾರ.

ಈ ನಡುವೆ ವಿಷ್ಣು ಅಭಿಮಾನಿಗಳ ಒಕ್ಕೊರಳ ಬೇಡಿಕೆ ಮತ್ತು ಒತ್ತಾಯವೆಂದರೆ ‘ರಾಜ್ ಕುಮಾರ್ ಅವರ ಸ್ಮಾರಕಕ್ಕೆ ಕಂಠೀರವಾ ಸ್ಟುಡಿಯೋದ ಜಮೀನನ್ನು ನೀಡಿದ್ದೀರಿ. ಈಗ ನಮ್ಮ ಅಭಿಮಾನದ ವಿಷ್ಣುಜೀಯವರ ಸ್ಮಾರಕಕ್ಕೆ ಅಭಿಮಾನ್ ಸ್ಟುಡಿಯೋದ ಅಂಗಳ ನೀಡಿ. ಮೈಸೂರಿಗೆ ಶಿಫ್ಟ್ ಆಗುವುದನ್ನು ನಾವು ಒಪ್ಪಿಕೊಳ್ಳೋದಿಲ್ಲ. ಬೆಂಗಳೂರಲ್ಲೇ ವಿಷ್ಣು ಸ್ಮಾರಕ ನಿರ್ಮಾಣವಾಗಲೇ ಬೇಕು…’ ಹೀಗೆಂದು ಆರ್ಭಟಿಸಿದ್ದು ಮಾತ್ರಲ್ಲ ದೊಡ್ಡದೊಂದು ರ‍್ಯಾಲಿ ನಡೆಸಿ ತನ್ನ ಪ್ರತಿಭಟನೆಯನ್ನು ಹೊರ ಹಾಕಿದ್ದಾರೆ ವಿಷ್ಣು ಅಭಿಮಾನಿಗಳು. ಜತೆಗೆ ಒಂದಷ್ಟು ಕನ್ನಡ ಸಂಘಟನೆಗಳ ಬೆಂಬಲವೂ ಇದಕ್ಕಿದೆ. ಒತ್ತಡ, ಒತ್ತಾಯ ಹೆಚ್ಚಾಗುತ್ತಿರುವಂತೆಯೇ ವಿಚಲಿತರಾದ ಭಾರತಿಯವರು ತಮ್ಮ ಒಳಗನ್ನು ಹೊರ ಹಾಕಿದ್ದು ಹೀಗೆ: “ಯಾರು ಏನೇ ಹೇಳಲಿ, ಈ ಸಾರಿ ಯಾರ ಮಾತನ್ನೂ, ಉಪದೇಶವನ್ನೂ ಕೇಳುವಂಥಾ ಸ್ಥಿತಿಯಲ್ಲಿ ನಾನಿಲ್ಲ. ವಿಷ್ಣು ಸ್ಮಾರಕಕ್ಕಾಗಿ ಯಾರು ಏನು ಮಾಡಿದರು ಹೇಳಿ. ಒಂದೊಳ್ಳೇ ಕೆಲ್ಸಕ್ಕೆ ಹೊರಟಾಗ ಕಾಲೆಳೆದವರು ಯಾರು? ಯಾಕೆ ಹೀಗೆ? ನಾನೇನು ತಪ್ಪು ಮಾಡಿದ್ದೇನೆ ಅಂತ ಈ ಶಿಕ್ಷೆ? ಹೀಗಾಗಬಾರದಿತ್ತು ಅಲ್ವಾ? ನಿಜ ಹೇಳಬೇಕಂದ್ರೆ ಸ್ಮಾರಕ ನಿರ್ಮಾಣಕ್ಕೆ  ಸೂಕ್ತವಾದ ಸ್ಥಳ ಮೈಸೂರೇ ಆಗಿತ್ತು. ಇದು ನನ್ನ ಆಯ್ಕೆಯೂ ಹೌದು. ಮೈಸೂರೆಂದರೆ ನಮ್ಮೆಜಮಾನ್ರಿಗೆ ಪ್ರಾಣ. ಅವರು ಪ್ರಾಣ ಬಿಟ್ಟಿದ್ದು ಅಲ್ಲೇ ಅಲ್ವಾ? ಬೆಂಗಳೂರು ಅವರಿಗೆ ಇಷ್ಟವಿರಲಿಲ್ಲ. ನೊಂದರು, ಬೆಂದರು. ಆದರೂ ಕರ್ತವ್ಯದ ಅನಿವಾರ್ಯತೆಗಾಗಿ ಬೆಂಗಳೂರಿನಲ್ಲೇ ನೆಲೆಸಿದರು. ಆದರೆ ಅವರ ಜೀವ ಸದಾ ಮೈಸೂರಿಗಾಗಿಯೇ ತುಡಿಯುತ್ತಿತ್ತು…..

“ಈ ವಿಚಾರವನ್ನು ಹೇಳಬಾರದು, ಆದರೆ ಅನಿವಾರ್ಯವಾಗಿ ಹೇಳುತ್ತಿದ್ದೇನೆ: ಅಭಿಮಾನ್ ಸ್ಟುಡಿಯೋದ ಅಂಗಳದಲ್ಲಿ ಹಾಕಿಸಿದ ತಾತ್ಕಾಲಿಕ ಸ್ಮಾರಕವನ್ನು ಕಟ್ಟಿಸಿದವರು ಯಾರು? ನಾನೇ ಕೈಯಾರೆ ಕಟ್ಟಿಸಿದೆ. ಇದಕ್ಕಾಗಿ ಆರೇಳು ಲಕ್ಷ ಖರ್ಚು ಮಾಡಿದೆ. ಆಗ ಇವರೆಲ್ಲಾ ಎಲ್ಲಿಹೋಗಿದ್ದರು? ಅವರಾಗಿಯೇ ಕಟ್ಟೋದಿಲ್ಲ; ಕಟ್ಟುವವರನ್ನು ಬಿಡೋದಿಲ್ಲ. ಇದು ಯಾವ ನ್ಯಾಯ ನೀವೇ ಹೇಳಿ? ಕೊನೆಗೂ ಸರ್ಕಾರ ದೃಢ ನಿರ್ಧಾರಕ್ಕೆ ಬಂದಿದೆ.  ವಿಷ್ಣು ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡೋದು ಅಂತ. ನಾನು ಕೂಡಾ ಮನಸಾರೆ ಒಪ್ಪಿಗೆ  ಸೂಚಿಸಿದ್ದೇನೆ. ಸ್ಮಾರಕಕ್ಕೆ ಸಂಬಂಧಿಸಿದ ಎಲ್ಲಾ ನೀಲ ನಕ್ಷೆಯೂ ರೆಡಿಯಿದೆ. ನಾನು ಕೈಯಾರೆ ಖರ್ಚು ಮಾಡಿ ಒಂದು ಅದ್ಭುತವಾದ ಸ್ಮಾರಕ ನಿರ್ಮಾಣದ ಬ್ಲೂ ಪ್ರಿಂಟ್ ರೆಡಿಮಾಡಿಟ್ಟು ಕೊಂಡಿದ್ದೇನೆ. ಇದು ಎಷ್ಟೊಂದು ಚೆನ್ನಾಗಿದೆ ಅಂದ್ರೆ ಇಂಥಾ ಮತ್ತೊಂದು ಸ್ಮಾರಕ ಬೇರೆಲ್ಲೂ ಇರಲ್ಲ. ಇದು ನನ್ನ ಕನಸು. ಈ ಕನಸನ್ನು ನನಸು ಮಾಡುವ ದಿನ ಹತ್ತಿರವಾಗುತ್ತಿದೆ. ಅಲ್ಲಿ ಎಲ್ಲವೂ ಇರಬೇಕು; ಲೈಬ್ರೆರಿ, ಮ್ಯೂಸಿಯಂ, ಕಾಂಪೇಕ್ಟ್  ಚಿತ್ರ ಮಂದಿರ…. ಹೀಗೆ. ಇವೆಲ್ಲಾ ನನ್ನ ಕನಸು. ಸರ್ಕಾರ ಹತ್ತುಕೋಟಿ ಘೋಷಿಸಿದೆ.  ಇದು ಸಾಕಾಗುವುದಿಲ್ಲ. ಹೇಗೆ ವ್ಯವಸ್ಥೆ ಮಾಡುತ್ತೇನೋ ಗೊತ್ತಿಲ್ಲ; ಗಟ್ಟಿ ಮನಸ್ಸುಮಾಡಿದ್ದೇನೆ. ಇನ್ನು ನನ್ನನ್ನು ತಡೆಯಲು ಯಾರಿಂದಾನೂ  ಸಾಧ್ಯವಿಲ್ಲ.  ಇವೆಲ್ಲಾ ನಾನು ಬದುಕಿರುವಾಗಲೇ ಆಗಬೇಕಾಗಿದೆ. ಸತ್ತ ಮೇಲೆ ಯಾರು ಉಸಾಬರಿ ತೆಗದುಕೊಳ್ಳುತ್ತಾರೆ ಹೇಳಿ? ಬದುಕಿರುವಾಗಲೇ ಈ ಮಟ್ಟದ ತಕರಾರು ಮಾಡುವವರು ನಾನು ಸತ್ತಮೇಲೆ ಸುಮ್ಮನಿರುತ್ತಾರೆಯೇ? ಹೀಗಾಗಿ ಎಷ್ಟುಬೇಗ ಸಾಧ್ಯವೋ ಅಷ್ಟು ಬೇಗ ಈ ಸ್ಮಾರಕದ  ನಿರ್ಮಾಣವಾಗಬೇಕಾಗಿದೆ. ನನ್ನ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶಯೇ ಇಲ್ಲ. ತಡೆಯಲು ಪ್ರಯತ್ನಿಸು ವವರು ಪ್ರಯತ್ನಿಸುತ್ತಲೇ ಇರುತ್ತಾರೆ.

ಆದರೆ ನನ್ನನ್ನು ತಡೆಯಲು ಯಾರಿಂದಲೂ  ಸಾಧ್ಯವಿಲ್ಲ. ಎಲ್ಲವನ್ನೂ ಆ ಮೇಲಿನವನು ನೋಡಿಕೊಳ್ಳುತ್ತಾನೆ. ನಾವೆಲ್ಲಾ ನಿಮಿತ್ತ ಮಾತ್ರ. ಮೇಲಿನಿಂದ ಅಪ್ಪಣೆ ಸಿಕ್ಕಿದೆ. ವಿಷ್ಣು ಸ್ಮಾರಕಕ್ಕೆ ಮೈಸೂರೇ ಅಂತಿಮ ಜಾಗ. ನನ್ನ ಬದುಕಿನ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂದು ನಿರ್ಧರಿಸಿದ್ದೇನೆ. ಇದಕ್ಕೆ ಮೇಲಿನವನ ಒಪ್ಪಿಗೆಯೂ ಸಿಕ್ಕಿದೆ. ನಮ್ಮೆಜಮಾನ್ರು ಸದಾ ನನ್ನ ಜತೆಗೇ ಇರುತ್ತಾರೆ. ಹೀಗಿರುವಾಗ ನಾನೇಕೆ ಭಯಬೀಳಲಿ?”-ಎಂದು ಪ್ರಶ್ನಿಸುತ್ತಾ ಭಾರತಿಯವರು ಮೌನವಾದರು. ಒಳಗಡೆಯಿಂದ ವಿಷ್ಣು ಫೋಟೋದ ಮೇಲಿದ್ದ ಹೂವು  ಬಿದ್ದ ಸದ್ದಾಯಿತಾ? ಗೊತ್ತಿಲ್ಲ! 

NO COMMENTS

LEAVE A REPLY