ನಾಡಿನೆಲ್ಲೆಡೆ ನಾಗರಪಂಚಮಿ

0
129

ಕೇಳು ಮಾಸ್ತರ್ ಅಗಲ್ಪಾಡಿ

ದೇವರನ್ನು ‘ಸರ್ವಭೂತಾಂತರಾತ್ಮ’ ಎಂದು ಭಾವಿಸಿ ಪ್ರಕೃತಿಯಲ್ಲಿರುವ ಪ್ರಾಣಿ, ಪಕ್ಷಿ, ವೃಕ್ಷಗಳನ್ನು ದೇವತಾ ಶಕ್ತಿಯೆಂದು ಪೂಜಿಸುವುದು ಭಾರತೀಯ ಸಂಸ್ಕೃತಿಯಾಗಿದೆ. ಆನೆ ಮೊಗದ ಗಣಪತಿ, ಕುದುರೆ ಮುಖದ ಹಯಗ್ರೀವ, ಹಂದಿ ಮುಖದ ವರಾಹವತಾರ (ಪಂಜುರ್ಲಿ), ವಾರಾಹಿ, ಹುಲಿ ಮುಖದ ಪಿಲಿಚಾಮುಂಡಿ, ಸಿಂಹ ತಲೆಯ ನರಸಿಂಹ (ವಿಷ್ಣುಮೂರ್ತಿ) ಇವೆಲ್ಲಾ ಆರಾಧನಾ ಶಕ್ತಿಗಳು. ಆನೆ, ಸಿಂಹ, ಹುಲಿ, ಕುದುರೆ, ಎತ್ತು, ಆಮೆ, ಇಲಿ, ನಾಗ ಇತ್ಯಾದಿ ಪ್ರಾಣಿಗಳು ನವಿಲು, ಗರುಡ, ಹಂಸ, ಗಿಳಿ ಮೊದ ಲಾದ ಹಕ್ಕಿಗಳೂ ದೇವತಾ ಸಾನ್ನಿಧ್ಯದಲ್ಲಿ ಸೇವೆ ಸಲ್ಲಿಸುವುದರಿಂದಲೂ ಅಶ್ವತ್ಥ, ಬಿಲ್ವ, ತುಳಸಿ ಮೊದಲಾದ ವೃಕ್ಷ ಸಂಕುಲಕ್ಕೂ ದೇವ ಸಂಪರ್ಕವಿದ್ದುದರಿಂದ ಇವೆಲ್ಲ ವನ್ನು ನಾವು ದೇವರೆಂದು ಪೂಜಿಸುತ್ತೇವೆ.

ಅನಾದಿ ಕಾಲದಿಂದಲೂ ಭಾರತದಲ್ಲಿ ಬೌದ್ಧ, ಜೈನ, ಹಿಂದೂ ಹೀಗೆ ಎಲ್ಲರೂ ಆರಾಧಿಸುವ ಒಂದು ಶಕ್ತಿ ನಾಗ. ವೇದ, ಪುರಾಣ, ಕಾವ್ಯ, ಜನಪದ ಸಾಹಿತ್ಯ ಇತ್ಯಾದಿಗಳೆಲ್ಲದರಲ್ಲಿ ಯೂ ಒಂದಲ್ಲ ಒಂದು ತರದ ನಾಗ ಮಹಿಮೆಯ ಕಥೆಗಳಿವೆ. ಅಂತೆಯೇ ನಾಗಗಳ ಕುರಿತು ಜನರಲ್ಲಿ ಹಲವಾರು ನಂಬಿಕೆಗಳಿವೆ. ಒಂದೇ ಹೆಡೆಯ ನಾಗರ ಹಾವಲ್ಲದೆ ಐದು, ಏಳು, ಇನ್ನೂ ಹೆಚ್ಚು ಹೆಡೆಗಳಿರುವ ಹಾವುಗಳಿವೆಯೆಂದೂ, ಹಾವುಗಳು ಪಾತಾಳವಾಸಿಗಳೆಂದೂ ಇವುಗಳ ದ್ವೇಷ ಹನ್ನೆರಡು ವರ್ಷಗಳೆಂದೂ, ಭೂಮಿಯಲ್ಲಿ ಅಶ್ವತ್ಥ ಮರದ ಕಟ್ಟೆ, ಹುತ್ತದಲ್ಲಿ ವಾಸವಾಗುವುದೆಂದೂ ಇವುಗಳ ಬಳಿ ಮುಟ್ಟಾದವರು, ಸೂತಕದವರು ಸುಳಿದರೆ ಅವರ ಮನೆಯಲ್ಲಿ ಕಾಣಿಸಿಕೊಳ್ಳುವುದೆಂದೂ, ನಾಗನ ಹೆಡೆಯಲ್ಲಿ ಪವಾಡವೆನಿಸುವ ಮಣಿಯಿರುವುದೆಂದೂ, ನಾಗ ವಾಸವಿರುವಲ್ಲಿ ನಿಧಿಯಿದ್ದು ಅದರ ರಕ್ಷಕನೆಂದೂ, ನಾಗನು ಪುಂಗಿಯ ನಾದಕ್ಕೆ ತಲೆದೂಗುವನೆಂದೂ, ಹಾಲು ಕುಡುಕನೆಂದೂ, ನಾಗದೋಷವಿದ್ದವರಿಗೆ ಸಂತಾನ ಪ್ರಾಪ್ತಿ ಇಲ್ಲ, ಪಾಂಡು ರೋಗ, ಸರ್ಪಸುತ್ತು, ಷಂಡತ್ವ ಉಂಟಾಗುತ್ತದೆ ಎಂಬಿ ನಂಬಿಕೆಗಳು.

ಹಾವಿನ ಬಗ್ಗೆ ಮನುಷ್ಯರಲ್ಲಿ ಚಿಕ್ಕಂದಿನಲ್ಲೇ ಭಯ ಮತ್ತು ಭಕ್ತಿ ಮೂಡಿರುತ್ತದೆ. ಹಾವು ವಿಷ ಪ್ರಾಣಿಯಾರೂ ದೈವ ಸನ್ನಿಧಿಯಲ್ಲಿ ಅಮೃತಪ್ರಾಯ ವಾಗಿರುತ್ತದೆ. ಕಶ್ಯಪ ಮುನಿಯ ಪತ್ನಿಯರಲ್ಲಿ ಕದ್ರುವು ಮತ್ತು ವಿನತೆಯೆಂಬವರು ಸವತಿಯರು. ಕದ್ರುವಿನ ಮಕ್ಕಳು ನಾಗರು. ವಿನತೆಯ ಮಕ್ಕಳು ಗರುಡರು. ತಮ್ಮ ಮಾತೆಯರು ಒಡ್ಡಿದ ಪಣದಿಂ ದಾಗಿ ಬದ್ಧವೈರಿಗಳಾದರು. ನಾಗರಲ್ಲಿ ಆದಿಶೇಷ, ವಾಸುಕಿ, ಕಾರ್ಕೋಟಕ, ತಕ್ಷಕ ಅನಂತ ಮೊದಲಾ ದವರು ಪ್ರಸಿದ್ಧರು. ಯುದ್ಧದಲ್ಲಿ ಇಂದ್ರಜಿತುವು ಹೂಡಿದ ನಾಗಾಸ್ತ್ರಕ್ಕೆ ಶ್ರೀರಾಮ, ಲಕ್ಷ್ಮಣ, ಕಪಿ ಸೇನೆಯಿಡೀ ಮೂರ್ಛೆಗೊಂಡಿದ್ದು ಗರುಡನ ಆಗಮನವಾದಾಗ ಅವರೆಲ್ಲರೂ ವಿಮೋಚನೆಗೊಂ ಡರು. ಕರ್ಣನು ಅರ್ಜುನನ ಮೇಲೆ ಪ್ರಯೋಗಿಸಿದ ಸರ್ಪಾಸ್ತ್ರವು ಶ್ರೀಕೃಷ್ಣನಿಂದಾಗಿ ಸೋಲನ್ನುಂಡಿತು. ನಾಗನು ಮಹಾವಿಷ್ಣುವಿಗೆ ಹಾಸಿಗೆ, ಶಿವನಿಗೆ ಕಂಠಾಭರಣ, ಗಣಪತಿಯ ಹೊಟ್ಟೆಯ ಪಟ್ಟಿ-ಹೀಗೆ ಪ್ರಾಚೀನ ಕಾಲದಿಂದಲೂ ಪೂಜಿಸಲ್ಪ ಡುತ್ತದೆ. ಆಹಾರವಿಲ್ಲದೆ ದೀರ್ಘಕಾಲ ಬದುಕುವ, ಹಳೆಯ ಮೈಪೊರೆಯನ್ನು ಕಳಚಿ ಪುನರ್ಜನ್ಮ ಪಡೆಯುವ ಶಕ್ತಿ, ಪ್ರಾಣ ಬಿಡುವಾಗ ನೆಲಕ್ಕೆ ಹೆಡೆ ಬಡಿಯುವ ರೀತಿ ಇವುಗಳು ಜನರಲ್ಲಿ ಭಯದೊಂದಿಗೆ ಭಕ್ತಿಯನ್ನೂ ಹುಟ್ಟಿಸುವುದು.

ಭಾರತದ ಇತಿಹಾಸದಲ್ಲಿ ಹಿಂದಿನಿಂದಲೂ ಅನೇಕ ನಾಗವಂಶಗಳಿ ದ್ದವು. ಭಾರತದಲ್ಲಿ ಜೀಮೂತ ವಾಹನನ ವಂಶದವರೆಂದು ಕರೆಸಿಕೊಳ್ಳುವ ಶಿಲಾಹಾರರು ಮತ್ತು ಚೂಟರು ಎಂಬವರು ಅಧಿಕ ಸಂಖ್ಯೆಯಲ್ಲಿದ್ದು ಹಿಂದುಳಿದ ವರ್ಗದವರಾಗಿದ್ದಾರೆ. ನಾಗಾಲ್ಯಾಂಡ್ ಪ್ರಾಂತ್ಯವು ನಾಗವಂಶಿಯರದೇ ಆಗಿದೆ. ನಾಗವಂಶಿಯರು ಅಸ್ಸಾಂ ರಾಜ್ಯದಲ್ಲಿಯೂ, ಅಲ್ಪಸಂಖ್ಯೆಯಲ್ಲಿ ಕೇರಳದಲ್ಲಿಯೂ ಇದ್ದಾರೆ. ಕೇರಳವು ವಿಷ ಚಿಕಿತ್ಸೆಗೆ ಖ್ಯಾತಿ ಗಳಿಸಿದೆ. ದಕ್ಷಿಣ ಕೇರಳದ ಪ್ರತೀ ಮನೆಯ ಹತ್ತಿರ ನಾಗಗುಡಿಗಳಿದ್ದು ಪ್ರಸಿದ್ಧರಾದ ವಿಷ ವೈದ್ಯರಿರುವರು. ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯ ‘ಓಚಿರ’ ಎಂಬ ಪೇಟೆಯು ನಾಗವಂಶಿಯರು ವಾಸಿಸುವ ಸ್ಥಳವಾಗಿದೆ. ಇಲ್ಲಿಯ ಸುಮಾರು ೪೦ ಎಕ್ರೆ ಸ್ಥಳದಲ್ಲಿರುವ ನಾಗಬನಗಳು ವಿಶ್ವವಿಖ್ಯಾತವಾಗಿದ್ದು ಪುರಾತನವಾದ ಬನಗಳಲ್ಲಿ ಅಲ್ಲಲ್ಲಿ ಅಷ್ಟ ನಾಗಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ನಾಗಬ್ರಹ್ಮನು ಅನ್ನ ಬ್ರಹ್ಮನಾಗಿಯೇ ಪೂಜೆಗೊ ಳ್ಳುತ್ತಾನೆ. ಪ್ರತೀ ದಿನ ಸಾವಿರಾರು ಮಂದಿ ಅನ್ನ ಸಂತರ್ಪಣೆ ಯುಣ್ಣುತ್ತಾರೆ. ಅನ್ನದಾನವನ್ನು ಭಕ್ತಾದಿಗಳು ಹರಕೆಯಾಗಿ ಸಲ್ಲಿಸುತ್ತಾರೆ. ಹರಕೆ ಹೊತ್ತವರು ಆಹಾರವನ್ನು ತಯಾರಿಸಿ ವಾಹನಗ ಳಲ್ಲಿ ತಂದು ಹಂಚುತ್ತಾರೆ. ಇನ್ನು ಕೆಲವರು ಹೋಟೆಲ್‌ಗಳಲ್ಲಿ ಊಟದ ಕೂಪನ್‌ಗಳನ್ನು ನೀಡುತ್ತಾರೆ. ಇಲ್ಲವೇ ದೇವಸ್ವಂ ಬೋರ್ಡ್‌ಗೆ ದೇಣಿಗೆಯಾಗಿ ನೀಡುತ್ತಾರೆ.

ನಾಗರಪಂಚಮಿ

ಭಾರತದಾದ್ಯಂತ ಕೊಂಡಾಡುವ ನಾಗರಾಧನೆ ಯಲ್ಲಿ ವೈವಿಧ್ಯತೆಗಳಿವೆ. ಬಂಗಾಳದಲ್ಲಿ ‘ನಾಗಿಣಿ ದೇವಿ’ಗೆ ‘ಮಾನಸ ಪೂಜೆ’ ಎಂಬ ವಿಶೇಷ ಸೇವೆ ಯನ್ನು ಜರಗಿಸುತ್ತಾರೆ. ಪಾರ್ವತಿಯ ಮಾನಸ ಪುತ್ರಿಯಾದ ಮಾನಸಾ ಎಂಬನಾಗ ಕನ್ನಿಕೆಯು ಎಲ್ಲರೂ ತನ್ನನ್ನೇ ಪೂಜೆ ಮಾಡಬೇಕೆಂದು ದುರಾಗ್ರಹದಿಂದ ಶಿವಭಕ್ತನೊಬ್ಬನನ್ನು ಪರಪರಿಯಿಂದ ಕಾಡಿ, ಪರಾಜಿತಳಾಗಿ ಕೊನೆಗೆ ಶಕ್ತಿ ದೇವತೆಯಾದ ವಿವರವನ್ನು ಈ ಕಥೆ ಸಾರುತ್ತದೆ. ಇಲ್ಲಿ ಸತ್ತ ಸಪ್ತ ನಾಗಗಳನ್ನು ಶಾಸ್ತ್ರೋಕ್ತವಾಗಿ ಚಿತೆಯೇರಿಸಿ ಸುಟ್ಟು ಅಂತ್ಯ ಕ್ರಿಯೆಗಳನ್ನು ನೆರವೇರಿ ಸುತ್ತಾರೆ. ಮಹಾರಾಷ್ಟ್ರದ ಕೆಲವೆಡೆಗಳಲ್ಲಿ ನಾಗರ ಪಂಚಮಿಯ ದಿನ ಜೀವಂತ ಹಾವುಗಳನ್ನು ಹಿಡಿದು ಪೂಜಿಸುತ್ತಾರೆ. ಅಂದು ಎತ್ತಿನ ಗಾಡಿಯನ್ನು ಶೃಂಗರಿಸಿ ಅದರಲ್ಲಿ ಹೆಡೆ ಎತ್ತುವ ನಾಗರ ಹಾವು ಗಳನ್ನು ಮಡಕೆಗಳಲ್ಲಿಟ್ಟು ಅವುಗಳಿಗೆ  ಹಾಲೆರೆದು, ಹೂ, ಗಂಧ, ಅಕ್ಷತೆಗಳಿಂದ ಪೂಜೆ ಸಲ್ಲಿಸಿ ಬೀದಿ ಯಲ್ಲೆಲ್ಲಾ ಸಂಭ್ರಮದ ಮೆರವಣಿಗೆ ಮಾಡುತ್ತಾರೆ. ನೂರಾರು ಹಾವುಗಳನ್ನು ಹಿಡಿದು ಅವುಗಳ ವಿಷಚೀಲವನ್ನು ಕಿತ್ತು ಕೊರಳಿಗೆ ಹಾಕಿಕೊಳ್ಳುತ್ತಾರೆ. ಮಕ್ಕಳ ಕೊರಳಿಗೂ ತೊಡಿಸುತ್ತಾರೆ. ನೋಡುವವರ ಮೈ ರೋಮಾಂಚನೆಗೊಳ್ಳುವ ಈ ಜಾತ್ರೆ ಸುಮಾರು ೫೦೦ ವರ್ಷಗಳಿಂದ ಜರಗುತ್ತಾ ಬರುತ್ತಿದೆಯೆಂದು ತಿಳಿಯಲಾಗಿದೆ. ಕೇರಳದ ಹೆಚ್ಚಿನ ದೇವಾಲಯ ಗಳಲ್ಲಿ ನಾಗಪ್ರತಿಷ್ಠೆಗಳಿದ್ದು ಸುಬ್ರಹ್ಮಣ್ಯ ದೇವರ ಪೂಜೆ ಮಾಡಿ ಹಾಲಾಭಿಷೇಕ ಮಾಡುತ್ತಾರೆ. ತಿಂಗಳ ಷಷ್ಠಿ ದಿನಗಳಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಶಬರಿಮಲೆ ಮತ್ತು ಪಂಪಾ ಸನ್ನಿಧಾನಗಳಲ್ಲಿ ನಾಗರಾಜ-ನಾಗಕನ್ನಿಕೆ ಎಂಬ ಪ್ರತಿಷ್ಠೆಗಳಿ ಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೇರಳದ ಕ್ಷೇತ್ರಗಳಲ್ಲಿ ಸರ್ಪಪಾಟು ಹಾಡುವವರು ನಾಗವಂಶಿಯರಾಗಿರುತ್ತಾರೆ.

ಕರ್ನಾಟಕ ರಾಜ್ಯದಲ್ಲಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯನ್ನು ನಾಗರಪಂಚಮಿ ಯಾಗಿ ಆಚರಿಸುತ್ತಾರೆ. ಈ  ಹಬ್ಬಾಚರಣೆಯಲ್ಲಿ ಸ್ತ್ರೀಯರಿಗೆ ಪ್ರಾಧಾನ್ಯ. ಈ ದಿನ ಗೋಮಯದಿಂದ ಮನೆಯನ್ನು ಶುಚೀಕರಿಸಿ, ನಾಗನ ಚಿತ್ರವನ್ನು ಬರೆದು ಅವನಿಗೆ ಪ್ರಿಯವಾದ ಕೇದಗೆ ಹೂ, ಹಿಂಗಾರ, ಸೀಯಾಳ, ಬಾಳೆಹಣ್ಣು, ದನದ ಹಾಲನ್ನು ಭಕ್ತಿಯಿಂದ ಅರ್ಪಿಸಿ, ಎಳ್ಳಿನ ಚಿಗಳಿಯ ನೈವೇದ್ಯ ಹಾಗೂ ವಿವಿಧ ಸಿಹಿತಿಂಡಿಗಳು, ಉಂಡೆಗಳನ್ನು ಇಟ್ಟು ಪೂಜಿಸುತ್ತಾರೆ. ಈ ದಿನ ಹೆಣ್ಣು ಮಕ್ಕಳೆಲ್ಲಾ ನಕ್ಕು ನಲಿದಾಡಿ ತಮ್ಮ ತಮ್ಮ ನೋವುಗಳನ್ನು ಮರೆತು ಸಂತೋಷಿಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಆಚರಿಸಲೇಬೇಕಾದ ವ್ರತಗಳಲ್ಲಿ ನಾಗರಪಂಚಮಿ ಪ್ರಮುಖವಾಗಿದೆ.

ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಪ್ರದೇಶದಲ್ಲಿ ನಾಗಾರಾಧನೆಯ ಪರಿಕಲ್ಪನೆ ತೀರ ವಿಶಿಷ್ಟವಾದುದು. ಇಲ್ಲಿ ಸಿಂಹಮಾಸದ ಅಮವಾಸ್ಯೆಯ ನಂತರದ ಪಂಚಮಿಯನ್ನು ನಾಗರಪಂಚಮಿಯೆಂದು ಕೊಂಡಾಡಲಾಗುತ್ತದೆ. ಪರಶುರಾಮ ಕ್ಷೇತ್ರವೆಂದು ಕರೆಯಲ್ಪಡುವ ಈ ಭೂಭಾಗವು ಈ ಹಿಂದೆ ಸಮುದ್ರದಿಂದಾವೃತ ವಾಗಿರುವಾಗ ಇಲ್ಲಿ ನಾಗಗಳು ವಾಸವಾಗಿದ್ದವು. ಬ್ರಾಹ್ಮಣರಿಗೆ ದಾನ ಕೊಡಲು ಪರಶುರಾಮನು ಈ ಭಾಗವನ್ನು ಬಿಟ್ಟು ಕೊಡುವಂತೆ ಸಮುದ್ರ ರಾಜನಿಗೆ ಆಜ್ಞಾಪಿಸಿದಾಗ ಇಲ್ಲಿರುವ ನಾಗಾದಿಗಳು ಇಲ್ಲಿಯೇ ಉಳಿದವು. ಆದುದರಿಂದ ಇಲ್ಲಿ ನಂತರ ವಾಸಿಸಿದ ಬ್ರಾಹ್ಮಣರು ನಾಗರ ಪ್ರೀತಿ ಹಾಗೂ ಅನುಗ್ರಹಕ್ಕೋಸ್ಕರ ನಾಗಪೂಜೆಗಳನ್ನು ಆರಂಭಿಸಿದರು. ಸ್ಕಂದನೆಂಬ ಕಾರ್ತಿಕೇಯನನ್ನು ನಾಗರೂಪದಿಂದ ಸುಬ್ರಹ್ಮಣ್ಯನೆಂಬ ಹೆಸರಿನಲ್ಲಿ ಆರಾಧಿಸುವುದು ಇಲ್ಲಿಯ ವಿಶೇಷತೆಯಾಗಿದೆ. ಪ್ರಸಿದ್ಧ ಕ್ಷೇತ್ರಗಳಾದ ಸುಬ್ರಹ್ಮಣ್ಯ ಮಂಜೇಶ್ವರ, ಮಂಗಳೂರಿನ ಕುಡುಪು ಮೊದಲಾದೆಡೆಗಳಲ್ಲಿ ಪೂಜೆಗೊಳ್ಳುವುದು ನಾಗ ವಿಗ್ರಹಗಳೇ ಆಗಿದೆ. ಕುಂಬಳೆ ಸೀಮೆಯ ಕುಮಾರ ಮಂಗಲ, ಕಾಟುಕುಕ್ಕೆ, ಮುಳಿಯಾರು, ಚೇರ್ಕಬೆ ಹಾಗೂ ಇನ್ನಿತರ ಸುಬ್ರಹ್ಮಣ್ಯ ದೇವಾಲಯಗಳಲ್ಲಿ ವೃಶ್ಚಿಕಮಾಸ ಸಂಕ್ರಮಣದ ನಂತರದ ಷಷ್ಠಿ ದಿನವನ್ನು ಉತ್ಸವವನ್ನಾಗಿ ಜರಗಿಸಲಾಗುತ್ತದೆ.

ಹೀಗೆ ನಾಗಾರಾಧನೆಯ ಹಿಂದಿರುವ ಉದ್ದೇಶದ ಮಹತ್ವವನ್ನು ಮನಗಂಡಾಗ ಸಾಂಪ್ರ ದಾಯಿಕ ಆಚರಣೆಗಳ ಅನನ್ಯತೆ ಅರಿವಾಗುತ್ತದೆ.

NO COMMENTS

LEAVE A REPLY