ಪೆಟ್ರೋಲ್ಬಂಕ್ ಮಾಲಕನ ಮೇಲೆ ಹಲ್ಲೆ ನಡೆಸಿ ಹಣ ದರೋಡೆ ಸಹೋದರರ ಸಹಿತ ಐವರ ಸೆರೆ

0
89

ಕಾಸರಗೋಡು: ತೃಕರಿಪುರ ಬೈಪಾಸ್ ರಸ್ತೆ ಬಳಿ ಈತಿಂಗಳ ೧ರಂದು ರಾತ್ರಿ ಪೆಟ್ರೋಲ್ ಬಂಕ್ ಮಾಲಕ ಕೆ. ರಾಮಕೃಷ್ಣನ್‌ರ ಮೇಲೆ ಹಲ್ಲೆ ನಡೆಸಿ  ಅವರ ಕೈಯಲ್ಲಿದ್ದ ೩,೧೬,೦೦೦ ರೂ. ದರೋಡೆಗೈದು ವಾಹನವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಹೋದರರೂ ಸೇರಿದಂತೆ ಐದು ಮಂದಿಯನ್ನು ನೀಲೇಶ್ವರ ಸಿಐ ಉಣ್ಣಿಕೃಷ್ಣನ್ ನೇತೃತ್ವದ ಪೊಲೀಸರತಂಡ ಹೊಸದುರ್ಗ ರೈಲು ನಿಲ್ದಾಣ ಪರಿಸರದಿಂದ ಬಂಧಿಸಿದೆ.

ಪಯ್ಯನ್ನೂರು  ತಾಯನೆರಿಯ ಮುಹಮ್ಮದ್ ಶಫಾದ್‌ಖಾನ್ (೧೯), ಕರ್ನಾಟಕ ಬಂಟ್ವಾಳ  ಬಿಸಿರೋಡ್‌ನ ಉಬೈದ್ (೨೦), ರಾಮಂತಳಿಯ ತುರುತ್ತಮ್ಮಲ್ ಕಾಲನಿಯ ಯದುಕೃಷ್ಣನ್ (೨೮), ಈತನ ಸಹೋದರ ಮಿಥುನ್‌ಕೃಷ್ಣನ್ (೨೪) ಮತ್ತು ಇಳಂಬಚ್ಚಿ ಪೊರೋಪಾಟ್ಟಿನ ಮುಬಾರಕ್ (೧೯) ಬಂಧಿತರಾದ ಆರೋಪಿಗಳಾಗಿದ್ದಾರೆ.  ಇವರು ದರೋಡೆಗೈದ ಹಣದಲ್ಲಿ ೧,೪೪,೩೩೦  ಹಾಗೂ ದರೋಡೆ ಬಳಿಕ ಇವರು ಪರಾರಿಯಾಗಲು ಬಳಸಿದ್ದ ಬೈಕ್ ಪೊಲೀಸರು ಪತ್ತೆಹಚ್ಚಿದ್ದಾರೆ.  ದರೋಡೆಗೈದ ಹಣ ಒಳಗೊಂಡ ಬ್ಯಾಗ್‌ನಲ್ಲಿದ್ದ ರಾಮಕೃಷ್ಣನ್‌ರ ಎಟಿಎಂ ಕಾರ್ಡ್ ಬಳಸಿ ಆರೋಪಿಗಳು ಚೆರ್ವತ್ತೂರು ಮತ್ತು ನೀಲೇಶ್ವರದ ಎಟಿಎಂ ಕೌಂಟರ್‌ನಿಂದ   ಹಣ ಹಿಂಪಡೆಯಲು ಯತ್ನಿಸಿದ್ದರು. ಆ ದೃಶ್ಯವನ್ನು  ಆ ಪರಿಸರದ ಶಿಕ್ಷಣಸಂಸ್ಥೆಯೊಂದರ ಸಿಸಿಟಿವಿ ಕ್ಯಾಮರಾ ಸೆರೆಹಿಡಿದಿರುವುದರಿಂದ  ಆರೋಪಿಗಳನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿತ್ತು.  ಅದರ ಜಾಡುಹಿಡಿದು ನಡೆಸಿದ ಶೋಧದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಸಾಧ್ಯವಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಪೈಕಿ ಶಫಾದ್‌ಖಾನ್, ಉಬೈದ್ ಮತ್ತು ಮಿಥುನ್‌ಕೃಷ್ಣನ್ ಮಾತ್ರವೇ ದರೋಡೆಯಲ್ಲಿ ನೇರವಾಗಿ ಶಾಮೀಲಾಗಿದ್ದರು. ಉಳಿದವರು ದರೋಡೆಗಾಗಿ ಸ್ಕೆಚ್ ಹಾಕಿಕೊಂಡವರಲ್ಲಿ ಒಳಗೊಂಡವರಾಗಿದ್ದಾರೆಂದೂ ಪೊಲೀಸರು ತಿಳಿಸಿದ್ದಾರೆ. ದರೋಡೆ ನಡೆಸಿದ ಬಳಿಕ ಆರೋಪಿಗಳು ಮಂಗಳೂರಿಗೆ ಹೋಗಿ ಆ ಹಣದ ಒಂದು ಪಾಲನ್ನು ಉಪಯೋಗಿಸಿ ಮಜಾ ಉಡಾಯಿಸಿ ಬಳಿಕ ರೈಲಿನಲ್ಲಿ ಹೊಸದುರ್ಗಕ್ಕೆ ಬಂದ ವೇಳೆ ಸೆರೆಹಿಡಿದರು.

NO COMMENTS

LEAVE A REPLY