‘ಹಮಾರಾ ತಿರಂಗಾ’ಕ್ಕೆ ಗಡಿನಾಡ ಸಂಗೀತ ನಿರ್ದೇಶಕನ ಸಂಗೀತ

0
92

ರೂಪ ಮುಳ್ಳೇರಿಯ

ನಮ್ಮ ದೇಶದ ರಾಷ್ಟ್ರಧ್ವಜದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ದೇಶದ ಬಾನುಲಿ ಕೇಂದ್ರಗಳಿಂದ ಕಳೆದ ಸೋಮವಾರದಿಂದ ಪ್ರಸಾರವಾಗುತ್ತಿದೆ. ‘ಹಮಾರಾ ತಿರಂಗಾ’ ಎಂಬ ಕಾರ್ಯಕ್ರಮವನ್ನು ಕನ್ನಡಿಗ ನಿರ್ದೇಶಿಸಿದ್ದಾರೆ. ಮಂಗಳೂರು ನಿವಾಸಿ ಸುಧೀರ್ ಅತ್ತಾವರರವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮದಲ್ಲಿ ‘ವಿಜಯಿ ವಿಶ್ವ ತಿರಂಗಾ ಪ್ಯಾರಾ’ ಎಂಬ ಗೀತೆಗೆ ಗಡಿನಾಡಿನ ಯುವ ಸಂಗೀತ ನಿರ್ದೇಶಕ ಸಂಗೀತ ಸಂಯೋಜಿಸಿದ್ದಾರೆ. ಕೊಡ್ಲಮೊಗರು ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕರಾಗಿದ್ದ ಎ. ಬಿ. ರಾಧಾಕೃಷ್ಣ ಬಲ್ಲಾಳ್‌ರವರ ಪುತ್ರ ಚಿತ್ರ ಕಲಾಧ್ಯಾಪಕ  ಸಂದೀಪ್ ಆರ್. ಬಲ್ಲಾಳ್ ಈ ಹಾಡಿಗೆ ವಿನೂತನ ಸಂಗೀತ ನೀಡಿದ್ದು, ಇದನ್ನು ಬಾನುಲಿ ಕೇಂದ್ರಗಳಿಂದ ಅಗೋಸ್ತು ೧೫ರವರೆಗೆ ಸಂಜೆ ೪.೫೦ರಿಂದ ಆಲಿಸಬಹುದಾಗಿದೆ.

ರಾಷ್ಟ್ರಧ್ವಜದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮದಲ್ಲಿ ರಾಕೇಶ್ ಭಕ್ಷಿ, ಧರ್ಮೇಂದ್ರ, ಎಂ.ಎಸ್. ಸತ್ಯು, ಜಾಕಿಶ್ರಾಫ್, ಶಂಕರ್ ಮಹದೇವನ್, ದಲೇರ್ ಮೆಹಂದಿ ಸೇರಿದಂತೆ ಅನೇಕರು ಧ್ವಜ ನಡೆದು ಬಂದ ದಾರಿ ಬಗ್ಗೆ ಮಾತನಾಡುವರು. ಈ ಕಾರ್ಯಕ್ರಮದ ವೀಡಿಯೋ ದೂರದರ್ಶನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಸಾರವಾಗಲಿದೆ.

‘ವಿಜಯೀ ವಿಶ್ವ ತಿರಂಗಾ ಪ್ಯಾರಾ’ ಎಂಬ ಗೀತೆಯನ್ನು ಖ್ಯಾತ ಗಾಯಕರಾದ  ಆಶಾ ಬೋಸ್ಲೆ ಮತ್ತು ಅವರ ಮೊಮ್ಮಗಳು ಝೈನಾ, ಲತಾ ಮಂಗೇಶ್ಕರ್ ಅವರ ಸಹೋದರಿ ಉಷಾ ಮಂಗೇಶ್ಕರ್ ಹಾಡಿದ್ದಾರೆ. ಅಪ್ರತಿಮ ಗಾಯಕರಾದ ಆಶಾ ಬೋಸ್ಲೆಯವರು ಹಾಡುವ ಹಾಡಿಗೆ ಸಂಗೀತ ನಿರ್ದೇಶಿಸುವುದು ಎಂದರೆ ಅದಕ್ಕಿಂತ ಮಿಗಿಲಾದ ಸಂತೋಷ ಇನ್ನಿಲ್ಲ ಎಂದು ಸಂಗೀತ ನಿರ್ದೇಶಕ ಸಂದೀಪ್ ಆರ್. ಬಲ್ಲಾಳ್ ನುಡಿದರು. ಇದೊಂದು ಅಭಿಮಾನದ ಘಳಿಗೆಯಾಗಿದ್ದು ತನಗೆ ಒದಗಿಬಂದ ಸೌಭಾಗ್ಯವೆಂದು ತಿಳಿದಿರುವುದಾಗಿಯೂ ಸಂದೀಪ್ ಹೇಳಿಕೊಂಡಿದ್ದಾರೆ. ಆಶಾ ಬೋಸ್ಲೆಯ ಮೊಮ್ಮಗಳು ಪ್ರಥಮವಾಗಿ ಸಂದೀಪ್ ನಿರ್ದೇಶನದಲ್ಲಿ ಗಾಯನ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಚಿತ್ರಕಲಾ ಅಧ್ಯಾಪಕನಾಗಿ ವೃತ್ತಿ ನಿರ್ವಹಿಸುತ್ತಿರುವ ಸಂದೀಪ್ ಸಂಗೀತದಲ್ಲಿ ಮಿಂಚಿದ ಪ್ರತಿಭೆ. ಚಿಕ್ಕಂದಿನಲ್ಲೇ ಶಾಲಾ, ಕಾಲೇಜುಗಳಲ್ಲಿ ವಿವಿಧ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುತ್ತಿದ್ದಾಗ ಮುಂದೊಂದು ದಿನ ಓರ್ವ ಉತ್ತಮ ಸಂಗೀತ ನಿರ್ದೇಶಕನಾಗಿ  ಮೂಡಿ ಬರಬೇಕೆಂಬ ಆಶಯವನ್ನು ಹೊಂದಿದ್ದರು. ಈಗಾಗಲೇ ಹಲವಾರು ಭಕ್ತಿ ಧ್ವನಿ ಮುದ್ರಿಕೆಗಳಿಗೆ ಸಂಗೀತ ನೀಡಿದ ಸಂದೀಪ್ ಸ್ವಂತವಾಗಿ ‘ಸಂಗೀತಾರ್ಚನೆ’ ಎಂಬ ಸಿ.ಡಿಯನ್ನು ಹೊರ ತಂದಿದ್ದಾರೆ. ಅಲ್ಲದೆ ಎಲ್ಲೂರ ಉಳ್ಳಾಯ, ಇಂಚರ ಮೊದಲಾದ ಭಕ್ತಿ ಹಾಡುಗಳಿಗೆ ಸಂಗೀತ ನೀಡಿದ್ದು ಸ್ವರಸಾಧನ, ಸ್ತ್ರೀ, ರಾಣಿ ಅಬ್ಬಕ್ಕ ಎಂಬ ಡ್ಯಾನ್ಸ್ ಕಾರ್ಯಕ್ರಮ, ಸಾಕ್ಷ್ಯಚಿತ್ರ, ಥೀಮ್ ಸಾಂಗ್, ಆಲ್ಬಂಗಳಲ್ಲಿ ಸಂಗೀತ ನಿರ್ದೇಶಿಸಿ ಹಾಡಿದ್ದಾರೆ.

ಕಿರುಚಿತ್ರ ‘ಮಡಿ’, ‘ಪ್ರೀತಿ ಹೆಜ್ಜೆ’, ನಿನಾದ ಮೊದಲಾದ ಸಿನಿಮಾಗಳಿಗೆ ಸಂಗೀತ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ಮರಾಠಿ ಸಿನಿಮಾವೊಂದರ ಸಂಗೀತ ನಿರ್ದೇಶಿಸುವ ಸಿದ್ಧತೆಯಲ್ಲಿದ್ದಾರೆ.

ಇದೀಗ ಕೊಡ್ಲಮೊಗರು ದೈಗೋಳಿಯಲ್ಲಿ ವಾಸವಾಗಿರುವ ಸಂದೀಪ್‌ನ  ತಾಯಿ ಜಯಶ್ರೀ ಆರ್. ಬಲ್ಲಾಳ್, ಪತ್ನಿ ಸ್ವಾತಿ, ಸಹೋದರಿ ಸೌಮ್ಯ. ಸಂದೀಪ್‌ನ ಸಂಗೀತ ಪಯಣ ಇನ್ನಷ್ಟು ಬೆಳಗಲಿ ಎಂದು ಆಶಿಸೋಣ.

 

NO COMMENTS

LEAVE A REPLY