ಜಯಂತಿ ಸೊಸೆಯ ಮದುವೆ!

0
887

ಗಣೇಶ್ ಕಾಸರಗೋಡು

ಅಭಿನಯ ಶಾರದೆ ಜಯಂತಿ ಸುತ್ತು ಹೊಡೆದಿದ್ದಾರೆ. ವಯಸ್ಸು, ಕಾಯಿಲೆ ಮತ್ತು ಮಾನಸಿಕ ಹಿಂಸೆ ಅವರನ್ನು ಹಿಂಡಿ ಹಿಪ್ಪೆ ಮಾಡಿವೆ. ಕಳೆದ ಅರವತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ಎಂದೂ, ಯಾರಲ್ಲೂ ತಮ್ಮ ಆಂತರಿಕ  ಅಳಲನ್ನು ಹೇಳಿಕೊಳ್ಳದ ಜಯಂತಿ ಇತ್ತೀಚೆಗೆ ಸಭೆ, ಸಮಾರಂಭಗಳಿಂದಲೂ ದೂರವಾಗಿದ್ದಾರೆ. ಅವರದ್ದು ಒಂದು ರೀತಿಯ  ಮೌನ ಬದುಕು ಏಕಾಂಗಿ ಪಯಣ.

‘ಹೀಗಾಗಬಾರದಿತ್ತು’ ಎಂದು ಯೋಚಿಸುತ್ತಾ ಅಭಿನಯ ಶಾರದೆಗೆ ಫೋನ್ ಮಾಡಿದರೆ  ರಿಸೀವರ್ ಎತ್ತಿಕೊಂಡದ್ದು ಅವರ ಮಗ ಕೃಷ್ಣ ಕುಮಾರ್. ನಾನಂದೆ “ಅಮ್ಮ ಹೇಗಿದ್ದಾರೆ? ತುಂಬಾ ದಿನಗಳಾದುವು ನೋಡದೇ ಮಾತಾಡಿಸದೇ. ಒಮ್ಮೆ ಮನೆಗೆ ಬಂದು ಭೇಟಿಯಾಗಿ ನಾಲ್ಕು ಮಾತಾಡವೇ?”-ಕೃಷ್ಣ ಕುಮಾರ್ ನಯವಾಗಿಯೇ ವಿಚಾರಿಸಿದರು. “ಏನ್ ವಿಷಯ ಸಾರ್? ಅವ್ರು ರೆಸ್ಟ್ ನಲ್ಲಿದ್ದಾರೆ. ಏನಾದ್ರು ಹೇಳ್ಬೇಕಾಗಿತ್ತಾ?”ನಾನಂದೆ.

ಹಾಗೇನಿಲ್ಲ. ಆಗಾಗ ಭೇಟಿಯಾಗುತ್ತಿ ದ್ದವರು ಇದ್ದಕ್ಕಿದ್ದ ಹಾಗೆಯೇ ಮರೆಗೆ ಸರಿದಾಗ ಯಾತನೆ ಸಹಜ. ಅವರಿಗೆ ನೋವಾಗುವಂಥಾ ಯಾವ ವಿಚಾರ ವನ್ನೂ ಮಾತಾಡುವುದಿಲ್ಲ. ಪ್ರಾಮಿಸ್ ಕೃಷ್ಣ ಕುಮಾರ್ ಅವರೇ… ತಕ್ಷಣವೇ ಅವರು ಪ್ರತಿಕ್ರಿಯಿಸಿದರು ‘ಸಾರಿ ಸರ್, ನಿಮ್ಗೆ  ನೋವಾಯ್ತೆನೋ? ಯಾಕೋ ಅಮ್ಮನ ಆರೋಗ್ಯ ಸರಿಯಿಲ್ಲ. ಯಾತಕ್ಕೋ ಬೇಜಾರ್ ಮಾಡ್ಕೊಂಡಿದ್ದಾರೆ. ನೀವು ಬರುವುದಿದ್ರೆ ಅಡ್ಡಿ ಇಲ್ಲ. ನಾಳೆ ನಾನೇ ಫೋನ್ ಮಾಡಿ ಭೇಟಿ ಟೈಮನ್ನು ಫಿಕ್ಸ್ ಮಾಡ್ತೇನೆ. ಆಗದೇ?’ ಎಂದರು ಕೃಷ್ಣ ಕುಮಾರ್. ‘ಸರಿ’ ಎಂದು ಫೋನಿಟ್ಟೆ.

ಮಾರನೇ ದಿನ ಕರೆಕ್ಟಾಗಿ ಜಯಂತಿಯವರ ಮಗ ಕೃಷ್ಣ ಕುಮಾರನ ಹೆಂಡತಿ ಅನುಪ್ರಭಾಕರ್ ಅವರ ಎರಡನೇ ಮದುವೆಯ ಸುದ್ದಿ ಬಂತು. ಪೇಪರ್, ಟಿ.ವಿ., ಸಾಮಾಜಿಕ ಜಾಲತಾಣಗಳಲ್ಲಿ ಜಗಜ್ಜಾಹೀರಾಯಿತು. ಅವರು ಕೈ ಹಿಡಿದ ಗಂಡನ ಹೆಸರು ರಘು ಮುಖರ್ಜಿ. ‘ಸವಾರಿ’ ಚಿತ್ರದ ಮೂಲಕ ದೊಡ್ಡ ಹೆಸರು ಮಾಡಿದ  ಸ್ಯಾಂಡಲ್‌ವುಡ್ ನಟ. ಇದು ಇವರ ಮೂರನೇ ಮದುವೆಯಂತೆ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿರುವುದಾಗಿ ಸುದ್ದಿ. ಹಾಗಿದ್ದರೆ ಈಯಮ್ಮ ಅನು ಪ್ರಭಾಕರ್ ಈ ಮೊದಲು ಮದುವೆಯಾದ ಕೃಷ್ಣ ಕುಮಾರ್ ಅವರನ್ನು ಪ್ರೀತಿಸಿಯೇ ಮದುವೆಯಾದದ್ದಲ್ಲವೇ?

ಇರಲಿ, ಬಿಡಿ. ಸದ್ಯಕ್ಕೆ ಜಯಂತಿಯಮ್ಮನನ್ನು ಭೇಟಿಯಾಗುವ ಪ್ರೋಗ್ರಾಂನ್ನು ಅನಿವಾರ್ಯವಾಗಿ ಮುಂದೂಡಿದೆ. ನನಗಿದ್ದ ಕುತೂಹಲ ವೆಂದರೆ ಅವರು ಕೂಡಾ ಇಬ್ಬರು ಗಂಡಂದಿರಿಂದ ಬೇರೆಯಾದವರು. ಪಡಬಾರದ ಪಾಡುಪಟ್ಟವರು. ತಾವು ಸಂಪಾದಿಸಿದ ಎಲ್ಲವನ್ನೂ ನಂಬಿದ ಗಂಡಂದಿರಿಗಾಗಿ ಕಳಕೊಂಡವರು.

ಪೇಕೇಟಿ ಶಿವರಾಂ ಅವರಾಗಲಿ, ವಿಜಯ್ ಎಂಬ ನವ ತರುಣನಾಗಲೀ ಸ್ವತಃ ಸಂಪಾದಿಸದೇ ಪರಾವಲಂಬಿ ಜೀವಿಗಳಾಗಿ ಜಿಗಣೆಯಂತೆ ಜಯಂತಿ ಯಮ್ಮನ ರಕ್ತ ಹೀರಿ ಬದುಕಿದವರು. ಈ ಪಂಚಭಾಷ ತಾರೆ ಗಳಿಸಿದ್ದನ್ನೆಲ್ಲಾ ಜಮೀನಿಗೆ ಹಾಕಿರುತ್ತಿದ್ದರೆ ಅರ್ಧ ಜಯನಗರವನ್ನೇ ಖರೀದಿಸಬಹುದಿತ್ತು. ಆದರೆ ತಿಂದು ತೇಗಿದವರೇ ಅಧಿಕ. ಈ ವೃದ್ಧಾಪ್ಯದಲ್ಲಿ ಅವೆಲ್ಲಾ ಬರಿಯ ನೆನಪುಗಳು ಮಾತ್ರ, ಇಂಥಾ ಹೊತ್ತಿನಲ್ಲೇ ಸೊಸೆ ಅನುಪ್ರಭಾಕರ್ ಹೀಗೆ ಕೈಕೊಡಬಾರದಿತ್ತು. ಹಾಗೆ ನೋಡಿದರೆ ಅನು ನಿಜವಾದ ಅಥದಲ್ಲಿ ಜಯಂತಿಯಮ್ಮನ  ‘ಸೊಸೆ’ ಅಲ್ಲವೇ ಅಲ್ಲ. ಹೆಣ್ಣು ದಿಕ್ಕಿಲ್ಲದ ಅವರಿಗೆ ಸಾಕ್ಷಾತ್ ಮಗಳಂತೆಯೇ ಇದ್ದವಳು…

‘ಮಗಳಂತೆಯೇ ಇದ್ದವಳು’ ಎಂದಾಗ ವಿದುಳು ಫ್ಲಾಶ್ ಬ್ಯಾಕ್‌ಗೆ ಹೊರಳಿಕೊಂಡಿತು. ಅದು ೨೦೦೧ರ ಸಮಯ. ಆಗ ನಾನು ವಿಜಯ ಕರ್ನಾಟಕ ಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥನಾಗಿದ್ದೆ. ಅನುಪ್ರಭಾಕರ್ ಮತ್ತು ಕೃಷ್ಣ ಕುಮಾರ್ ನಡುವಿನ ಪ್ರೇಮ ವ್ಯವಹಾರ ಗುಸುಗುಸು ಸುದ್ದಿಯಾಗಿ ಗಾಂಧಿನಗರ ತುಂಬಾ ಹರಿದಾಡುತ್ತಿರುವಂತೆಯೇ ನಾಲ್ಕು ಮಂದಿ (ಅನು, ಕೃಷ್ಣ ಕುಮಾರ್, ಜಯಂತಿ ಮತ್ತು ಅನು ತಾಯಿ ಗಾಯತ್ರಿ ಪ್ರಭಾಕರ್) ಯನ್ನು ಭೇಟಿಯಾಗಿ ಒಂದು ಅಪ ರೂಪದ ಬರಹವನ್ನು ಸಿದ್ಧಪಡಿಸಿದೆ. ಅದರ ಟೈಟಲ್ ಅನುರಾಗ ಸಂಗಮ! ೨೦೦೧ನೇ ಇಸವಿಯ ಜುಲೈ ೧೩ನೇ ತಾರೀಕಿನ ‘ಸಿನಿವಿಜಯ’ದ ಮುಖಪುಟ ದಲ್ಲಿ  ಪ್ರಕಟವಾದ ಆ ಬರಹ ಈಗ ಫ್ಲಾಶ್ ಬ್ಯಾಕಾಗಿ ಕಾಡುತ್ತಿರುವುದು ಸುಳ್ಳಲ್ಲ. ಜಯಂತಿ, ಅವರ ಮಗ ಕೃಷ್ಣ ಕುಮಾರ್, ಗಾಯತ್ರಿ ಪ್ರಭಾಕರ್ ಮತ್ತು ಅವರ ಮಗಳು ಅನು ಪ್ರಭಾಕರ್ ಜತೆ ಖುದ್ದು ಮಾತಾಡಿಸಿ ಪ್ರಕಟಿಸಿದ ಆ ಬರಹ ವನ್ನೊಮ್ಮೆ ನೀವೂ ಓದಬೇಕೆಂಬುದು ನನ್ನ ಆಸೆ. ಹೀಗಾಗಿ ಅದನ್ನು ಇಲ್ಲಿ ಮರು ಬಳಕೆ ಮಾಡಿಕೊಳ್ಳುತ್ತಿದ್ದೇನೆ.

                ……….

ತಿಂಗಳುಗಳ ಹಿಂದೆ (ಈಗ ೧೫ ವರ್ಷಗಳೇ ಕಳೆದು ಹೋಗಿವೆ) ಸವದತ್ತಿಯಲ್ಲಿ ‘ನೀಲಾ’ ಚಿತ್ರದ ಚಿತ್ರೀಕರಣ ನಡೆದಿದ್ದಾಗ ಜಯಂತಿ ತಮ್ಮಲ್ಲೇ ಎಂಬಂತೆ  ಗೊಣಗಿಕೊಂಡಿ ದ್ದರು. “ನನಗೊಬ್ಬ ಮಗನಿದ್ದಾನೆ. ಹೆಣ್ಣು ಸಂತಾನವಿಲ್ಲ. ಈ ಮಗ ಮದುವೆಯಾಗಿ ಮನೆ ಹೊಸ್ತಿಲು ತುಳಿಸುವ ಹೆಣ್ಣನ್ನು ನಾನು ಸೊಸೆ ಎಂದು ಕರೆಯಲಾರೆ. ಆಕೆಯನ್ನು ಹೆತ್ತ ಮಗಳಂತೆಯೇ ನೋಡಿಕೊಳ್ಳುತ್ತೇನೆ. ಒಳ್ಳೆಯ ಅತ್ತೆ ಒಳ್ಳೆಯ ಅಮ್ಮನಾಗಿ ಆದರ್ಶ ಕಾಪಾಡಿಕೊಳ್ಳುತ್ತೇನೆ…” ಜಯಂತಿ ಯವರ  ಈ ಮಾತಿಗೆ ಅರ್ಥಪೂರ್ಣ ಆರಂಭ ಸಿಕ್ಕಿದೆ. ಇದನ್ನು ಬೇಕಿದ್ದರೆ ಲವ್ ಮ್ಯಾರೇಜ್ ಅನ್ನಿ. ಅಥವಾ ಅರೇಂಜ್ಡ್ ಮ್ಯಾರೇಜ್ ಅನ್ನಿ, ಅಥವಾ ಅರೇಂಜ್ಡ್ ಲವ್ ಮ್ಯಾರೇಜ್ ಅನ್ನಿ. ಏಕೆಂದರೆ ಇದು ಲವ್ವಿನ ನಂತರ ನಡೆಯುವ ಮದುವೆ.

ಹಾಗಿದ್ದರೆ ಲವ್ವಾದದ್ದಾದರೂ ಹೇಗೆ? ಅನು ಪ್ರಭಾಕರ್ ಮತ್ತು ಕೃಷ್ಣ ಕುಮಾರ್ ಅವರ ಹೆತ್ತವರು ಚಿತ್ರರಂಗದಲ್ಲಿ ದೊಡ್ಡ ಹೆಸರಾದವರೇ. ಒಬ್ಬರು ಭಾರತೀಯ ಚಿತ್ರರಂಗದಲ್ಲೇ ಖ್ಯಾತಿವೆತ್ತವರಾದರೆ ಮತ್ತೊಬ್ಬರು ಕಂಠದಾನ ಮತ್ತು ಕಿರು ತೆರೆಯ ನಟನೆಯಲ್ಲಿ ಹೆಸರು ಮಾಡಿದವರು. ಹಾಗಾಗಿ ಪರಸ್ಪರ ಒಡನಾಟದಲ್ಲಿದ್ದವರೆ ಅದು ಸಹಜವೇ. ಆದರೆ ಮೊನ್ನೆ ಮೊನ್ನೆ ತನಕ ಈ ಭೇಟಿ ಮತ್ತು ಒಡನಾಟಕ್ಕೆ ಬೇರೆಯದ್ದೇ ಆದ ಅರ್ಥವಿರಲಿಲ್ಲ. ಅದೇನಾಯಿತೋ ನೋಡಿ: ಆ ಮುಹೂರ್ತ ಕೂಡಿ ಬಂದದ್ದು ಬಿಜಾಪುರದಲ್ಲಿ. ಅಲ್ಲಿ ಕವಿತಾ ಲಂಕೇಶ್ ಅವರ ‘ಅಲೆಮಾರಿ’ ಚಿತ್ರದ ಚಿತ್ರೀಕರಣ ನಡೆದಿದ್ದಾಗ ಇದು ಘಟಿಸಿ ಹೋಯಿತು. ಈ ಚಿತ್ರದಲ್ಲಿ ನಟಿಸುತ್ತಿದ್ದ ಅನುಪ್ರಭಾಕರ್ ಅವರನ್ನು ಹುಡುಕಿಕೊಂಡು ಈ ಹುಡುಗ ಕೃಷ್ಣ ಕುಮಾರ್ ಅದೇಕೆ ಹೋದನೋ ಗೊತ್ತಿಲ್ಲ. ಒಳಮನಸ್ಸಿನಲ್ಲಿ ಅವ್ಯಕ್ತ ಸೆಳೆತ ಇದ್ದಿರಲೂ ಬಹುದು. ಆ ವರೆಗೆ ಪರಸ್ಪರ ಭೇಟಿಯಾಗಿ ಹಾಯ್, ಹಲೋ ಎನ್ನುವುದಿತ್ತಾದರೂ ಈ ಭೇಟಿ ಮಾತ್ರ ಅಷ್ಟಕ್ಕೇ ಸೀಮಿತವಾಗಲಿಲ್ಲ. ಪರಸ್ಪರ ಇಷ್ಟಪಟ್ಟರು. ಅನುರಕ್ತರಾದರು. ಹಾಗೆಂದು ಪರಸ್ಪರ ಹೇಳಿಕೊಂಡರು. ಸಿನಿಮಾ ಮಂದಿ ಥೇಟ್ ಸಿನಿಮಾದಂತೆಯೇ ಪ್ರೀತಿ ಮಾಡಿದರು. ಅಮ್ಮಂದಿರನ್ನು ಒಪ್ಪಿಸಿದರು ಎನ್ನುವುದಕ್ಕಿಂತಲೂ ಅಮ್ಮಂದಿರು ಒಪ್ಪಿದರು ಎನ್ನುವುದೇ ಮೇಲು. ಅಂತೂ ‘ಗಟ್ಟಿ ಮೇಳ’ ಊದುವುದಂತೂ ಪಕ್ಕಾ ಆಗಿದೆ.

ಈ ಬಗ್ಗೆ ಮದುವಣಗಿತ್ತಿ ಅನು ಪ್ರಭಾಕರ್ ಹೇಳುವುದೆಂದರೆ-ನಾವು ಚಿಕ್ಕಂದಿನಿಂದಲೇ ಪರಸ್ಪರ ಭೇಟಿಯಾಗುತಿತ್ತು. ಆದರೆ ಆಗ ಅದಕ್ಕೆ ವಿಶೇಷವಾದ ಅರ್ಥವೇನೂ ಇರಲಿಲ್ಲ. ಎಲ್ಲರಂತೆ ನಾವೂ ಹಲೋ, ಹಾಯ್ ಅನ್ನುತ್ತಿದ್ದೆವು. ಆದರೆ ಅವರು ‘ಅಲೆಮಾರಿ’ ಚಿತ್ರೀ ಕರಣದ ಲೊಕೇಷನ್‌ಗೆ ಯಾವತ್ತು ಬಂದರೋ ನಾನು ಅವರ ಬಗ್ಗೆ  ಯೋಚಿ ಸುವ ರೀತಿಯೇ ಬದಲಾಗಿ ಹೋ ಯಿತು. ಅದೆಂಥದ್ದೋ ಆಕರ್ಷಣೆ. ಅದೇನೋ ಕಚಗುಳಿ, ನಡುಕ, ಪ್ರಾಯಶಃ ಅವರಿಗೂ ಇಂಥಾದ್ದೇ ಅನುಭವವಾಗಿರ ಬೇಕು. ನಾವು ಈ ಅನುಭವವನ್ನು ಪರಸ್ಪರ ಹಂಚಿಕೊಂಡೆವು. ನಮಗೆ ನಾವು ಇಷ್ಟ ವಾದೆವು. ಅದನ್ನು ಪರಸ್ಪರ ಹೇಳಿ ಕೊಂಡೆವು. ಅಮ್ಮಂದಿರಿಗೂ ವಿಷಯ ತಿಳಿಸಿದೆವು. ಅವರೂ ಒಪ್ಪಿಕೊಂಡರು…

ವರ್ಷಾಂತ್ಯದಲ್ಲಿ (೨೦೦೧ ಕೊನೆಯಲ್ಲಿ!) ಅತ್ತೆಯಾಗಲಿರುವ ಜಯಂತಿ ಹೇಳುತ್ತಾರೆ “ನಾನು ಅತ್ತೆ ಯಾಗಲಾರೆ. ಅನುವಿಗೆ ಅಮ್ಮನಾಗುವೆ. ನನಗೆ ಹೆಣ್ಣು ಮಕ್ಕಳಿಲ್ಲಾ ಎನ್ನುವ ಕೊರಗಿತ್ತಲ್ಲಾ? ಈಗ ಈ ಹೆಣ್ಣು ಮಗುವಿನ ತಾಯಿಯಾಗುತ್ತಿದ್ದೇನೆ. ಇವರಿಬ್ಬರೂ ನನ್ನ ಎರಡು ಕಣ್ಣುಗಳಿದ್ದಂತೆ. ವಿಷಯ ತಿಳಿದಾಗ ಒಂದು ಕ್ಷಣ ಶೂನ್ಯ ಆವರಿಸಿತು. ನಂತರ ಅಲ್ಲಿ ಸ್ವರ್ಗ ಸೃಷ್ಟಿಯಾಯಿತು. ಕೃಷ್ಣ ನನಗೆ ಮಗ ಮಾತ್ರವಲ್ಲ, ಫ್ರೆಂಡ್ ಫಿಲಾಸಫರ್, ಗೈಡ್ ಎಲ್ಲಾ….ನನಗೆ ನೆಗಡಿ ಬಂದರೂ ಸಾಕು ಆತ ಕಂಗಾಲಾಗಿ ಬಿಡುತ್ತಾನೆ. ಗಂಡು ದಿಕ್ಕಿಲ್ಲದ ನನಗೆ ಆತ ಗಾಡ್‌ಫಾದರ್ ಹೌದು. ನಾನು ಬದುಕಿರುವುದೇ ಆತನಿಗಾಗಿ. ನನಗೆ ವರದಕ್ಷಿಣೆ ಬೇಕಾಗಿಲ್ಲ. ವಧು ಸಿಕ್ಕಿದರೆ ಸಾಕು, ನಾನು ಯಾವತ್ತೂ ಕಂಡೋರ ದುಡ್ಡಿಗೆ ಆಸೆ ಪಟ್ಟವಳಲ್ಲ. ಬೆಂಗಳೂರಿನಲ್ಲೇ ಮದುವೆ. ಈ ವರ್ಷಾಂತ್ಯದಲ್ಲಿ (೨೦೦೧) ಅಥವಾ ಮುಂದಿನ ವರ್ಷದ (೨೦೦೨) ಆರಂಭದಲ್ಲಿ ಮದುವೆ ನಡೆಯಲಿದೆ. ನಿಮ್ಮೆಲ್ಲರ ಆಶೀರ್ವಾದಬೇಕು. ಆ ಮಕ್ಕಳು ಹಾಯಾಗಿರಬೇಕು….”

ಅನುಪ್ರಭಾಕರ್ ತಾಯಿ ಗಾಯತ್ರೀ ಪ್ರಭಾಕರ್ ಅವರ ಮಗಳು ನಟಿಯಾದ ಮೇಲೆ ತಮ್ಮ ಕಂಠದಾನ ಮತ್ತು ಕಿರುತೆರೆಯ ಅಭಿನಯಕ್ಕೆ ಗುಡ್ ಬೈ ಹೇಳಿದವರು. ಮಗಳ ಜತೆಯಲ್ಲೇ ನಿಂತು ಚಿತ್ರರಂಗದ ವ್ಯವಹಾರಗಳಿಗೆ ಕೈಯೊಡ್ಡಿದವರು. ಹೆತ್ತ ಕರುಳಿಗಾಗಿ ವೈಯಕ್ತಿಕವಾದ ಆಸೆ, ಆಕಾಂಕ್ಷೆಗಳನ್ನೇ ಬಲಿಗೊಟ್ಟವರು…ಸದ್ಯದ ಆಸೆ, ಆಕಾಂಕ್ಷೆಗಳೆಲ್ಲಾ  ಹೆತ್ತ ಮಗಳ ಭವಿಷ್ಯದ್ದೇ ಈಗ ಮದುವೆ ಮಾತು ಪತ್ತಾ ಆಗಿದೆ. ಮಗಳು ಗಂಡನ ಮನೆಯ ಹೊಸ್ತಿಲು ತುಳಿಯಲಿದ್ದಾಳೆ. ಈ ಅಮ್ಮ ಒಂಟಿಯಾಗಲಿದ್ದಾರೆ. ಮುಂದೆ?

ಗಾಯತ್ರಿ ಪ್ರಭಾಕರ್ ಹೇಳುತ್ತಾರೆ: ‘ಇದ್ದೇ ಇದೆ. ಈಗಿನದ್ದನ್ನು ತಾತ್ಕಾಲಿಕ ನಿವೃತ್ತಿ ಅಂತಂದುಕೊಳ್ಳುತ್ತೇನೆ. ಬಿಟ್ಟು ಹೋದ ಸಂಪರ್ಕವನ್ನು ಮತ್ತೆ ಬೆಸೆದು ಕಿರುತೆರೆಯಲ್ಲಿ ಅಭಿನಯಿಸುವುದನ್ನು ಮುಂದುವರಿಸುತ್ತೇನೆ. ಕಂಠದಾನವೇ ಮಾಡಬೇಕೆಂದಿಲ್ಲವಲ್ಲಾ? ಒಬ್ಬಳೇ ಇರುವುದು ಬೇಸರ. ಹಾಗಾಗಿ ನನ್ನ ದಾರಿಯನ್ನು ನಾನು ನೋಡಿ ಕೊಳ್ಳಬೇಕಲ್ಲಾ? ಮಗಳು ಚಿತ್ರ ರಂಗಕ್ಕೆ  ಬಂದ ಮೂರು ವರ್ಷಗಳಲ್ಲೇ ಮದುವೆಯಾಗಿ ಗಂಡನ ಮನೆಗೆ ಹೋಗಬೇಕೆಂದು ಕನಸು ಕಂಡವಳು ನಾವು. ಈ ಕನಸು ಈಗ ನನಾಗುತ್ತಿದೆ. ಇದಕ್ಕಿಂಥಾ ಸೌಭಾಗ್ಯ ಬೇರೆ ಬೇಕೇ?’

                ………..

ಇಲ್ಲಿಗೆ ಆ ಬರಹ ಮುಕ್ತಾಯ ವಾಗುತ್ತದೆ. ಈಗ ನೋಡಿದರೆ ಅದೇ ಅನುಪ್ರಭಾಕರ್ ಮತ್ತು ಕೃಷ್ಣ ಕುಮಾರ್ ದಾಂಪತ್ಯ ಬದುಕು ಕೂಡಾ ಮುಕ್ತಾಯವಾಗಿ ಬಿಟ್ಟಿದೆ.

ಕೃಷ್ಣ ಕುಮಾರ್ ಅವರನ್ನು ಬಿಟ್ಟು ಅನುಪ್ರಭಾಕರ್ ತಾವು ಲವ್ ಮಾಡಿದ ರಘು ಮುಖರ್ಜಿ ಅನ್ನುವವರನ್ನು ಮದುವೆಯಾಗಿದ್ದಾರೆ. “ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ  ಎಂದು ಹೇಳಿದರೆ ಅದು ನೇರಾ ರಫ್ ಕಾಮೆಂಟ್ ಆಗುತ್ತದೆ. ರಘು ಮುಖರ್ಜಿಯನ್ನು ಮದುವೆಯಾದ ಅನುಪ್ರಭಾಕರ್ ಸುಖವಾಗಿದ್ದಾರೋ ಗೊತ್ತಿಲ್ಲ. ಈ ಕಡೆ ಗಾಯತ್ರಿ ಪ್ರಭಾಕರ್ ಮತ್ತೆ ಕಿರುತೆರೆಗಾಗಿ ಬಣ್ಣ ಹಚ್ಚಿದ್ದಾರೆ. ಆ ಕಡೆ ಜಯಂತಿ ಹಾಸಿಗೆ ಪಾಲಾಗಿದ್ದಾರೆ. ಕೃಷ್ಣ ಕುಮಾರ್ ಒಂಟಿ ಬದುಕಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದಾರೆ.

NO COMMENTS

LEAVE A REPLY