ದೇವಕಾನರ ಕಿರೀಟಕ್ಕೆ ರಂಗಮನೆಯ ಪ್ರಶಸ್ತಿ

0
504

ತೆಂಕಣ ಯಕ್ಷಗಾನದ ವೇಷಭೂಷಣಗಳಲ್ಲಿ ದೇವಕಾನದವರ ವೇಷಭೂಷಣ ವೆಂದರೆ ಕಲಾ ವ್ಯಾಕರಣದೊಳಗೆ ಅದು ಶುಚಿರುಚಿಯಾಗಿದೆ. ಕಲಾವಿದರಿಗದು ತೃಪ್ತಿ ಕೊಡುವ ಆಪ್ತ ಉಡುಗೆ. ಯಕ್ಷಗಾನದ ಡ್ರೆಸ್(ವೇಷಭೂಷಣ) ಬಾಡಿಗೆಗೆ ಕೊಟ್ಟು ಮೇಕಪ್(ಮುಖವರ್ಣಿಕೆ) ಮಾಡುವ ವ್ಯವಹಾರಗೈದು ಒಂದಷ್ಟು ದುಡ್ಡು ಗಳಿಸಬೇ ಕೆಂಬ ವ್ಯವಹಾರವಷ್ಟೇ ದೇವಕಾನರದ್ದಲ್ಲ. ಅದರಾಚೆಗೆ ಯಕ್ಷಗಾನಕ್ಕೆ ಚ್ಯುತಿಯಾಗದ ವೇಷಭೂಷಣದೊಂದಿಗೆ ಯಾವ್ಯಾವ ವೇಷಕ್ಕೆ ಯಾವ್ಯಾವ ಬಣ್ಣದ ಬಟ್ಟೆಯ ಉಡುಗೆ-ತೊಡುಗೆ, ಪ್ರತಿ ಯೊಂದು ವೇಷದ ಮುಖ ಬರವಣಿಗೆಯಲ್ಲಿ ಯೂ ಕಟ್ಟುನಿಟ್ಟಿನ ಶಿಸ್ತು ಮತ್ತು ಖಚಿತತೆ ಇವರಲ್ಲಿದೆ. ತತ್ಪರಿಣಾಮವೇ ದೇವಕಾನ ಕೃಷ್ಣ ಭಟ್ಟರು ತೆಂಕಿನ ವೇಷ-ಆಹಾರ್ಯಗಳ ತಜ್ಞರಾಗಿ ಗುರುತಿಸಲ್ಪಟ್ಟಿದ್ದಾರೆ. ಇದು ಸಂಭವಿಸಿ ದ್ದು ಕಳೆದ ೪ ದಶಕಗಳ ಯಕ್ಷಗಾನ ಅವಲಂಬಿತ ಕಲಾಪ್ರೀತಿಯ ಜೀವನ ಮತ್ತು ಅಧ್ಯಯನ ದೃಷ್ಟಿಗಳಿಂದ ಎಂಬುದು ಬಹುಮುಖ್ಯ.

ದೇವಕಾನ ಕೃಷ್ಣ ಭಟ್ಟರು ಕುಡಾಣ ಗೋಪಾಲಕೃಷ್ಣ ಭಟ್ಟರ ಶಿಷ್ಯನಾಗಿ, ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕನಾಗಿದ್ದವರು. ಯಕ್ಷಗಾನ ಅವರ ಆಸಕ್ತಿಯಷ್ಟೇ ಆಗಿತ್ತು. ೮೦ರ ದಶಕದಲ್ಲಿ ಅವರು ಭಾಗವತ ಕುಬಣೂರು ಶ್ರೀಧರ ರಾಯರ ಡ್ರೆಸ್ ಸಹಿತ ಮೇಕಪ್ಪಿಗೆ ಸಹಾಯಕನಾಗಿ ಹೋಗು ತ್ತಿದ್ದರು. ಆಗ ಇವರೇನು ಪರಿಣತರಲ್ಲ. ಶಾಲಾ ವಾರ್ಷಿಕೋತ್ಸವ ಮತ್ತು ಅಪರೂಪದ ಕೆಲವು ಹವ್ಯಾಸಿ ಆಟಗಳಿಗೆ ಗೊತ್ತಿದ್ದದ್ದು ಸಾಕು ಎಂಬ ಮನೋಭಾವ ಎಲ್ಲರಲ್ಲಿತ್ತು. ಕಾಸರಗೋಡು ತಾಲೂಕಿನ ಅನೇಕ ಸಂಘ-ಸಂಸ್ಥೆಗಳ, ಶಾಲೆಗಳ ವಾರ್ಷಿಕೋತ್ಸವದ ಅವಕಾಶಗಳು ಇವರಿಗೆ ಸಿಗುತ್ತಿತ್ತು. ಸಹಜವಾಗಿಯೇ ದೇವಕಾನದವರು ಎಲ್ಲೆಡೆ, ಎಲ್ಲರಿಗೆ ಸುಪರಿಚಿತರಾದರು. ಕ್ರಮೇಣ ಕುಬಣೂರು ಭಾಗವತರ ವೇಷಭೂಷಣಗಳು ಅನ್ಯಾನ್ಯ ಕಾರಣದಿಂದ ಹಿಂದಕ್ಕೆ ಬಿತ್ತು. ಈ ಹೊತ್ತಿನಲ್ಲಿ ತಾನೇ ಒಂದು ವೇಷಭೂಷಣ ಒದಗಿಸುವ ವ್ಯವಸ್ಥೆ ಆರಂಭಿಸಿದರೇನೆಂಬ ಯೋಚನೆ ಬಂತು. ಆದರೆ ಹಣ ಬೇಕಲ್ಲಾ…? ಭಟ್ಟರು ಪ್ರಯತ್ನ ಶೀಲರಾದರು. ಅಲ್ಲಿಂದ ಇಲ್ಲಿಂದ ಡ್ರೆಸ್ ಹೊಂದಾಣಿ ಸಿಕೊಂಡು ಶಾಲಾ ವಾರ್ಷಿ ಕೋತ್ಸವಗಳಿಗೆ ಹೋಗತೊಡಗಿದರು. ಪರಿಚಿತ ವಲಯ ವಿಸ್ತರಿಸಿಕೊಂಡಿತು. ಹವ್ಯಾಸಿ ಯಕ್ಷಗಾನಕ್ಕೂ ಕರೆ ಬರಲಾರಂ ಭಿಸಿತು. ಕರೆ ಬಂದರೆ ಸಾಕೆ…? ಒಂದಾಟ ವನ್ನು ಪೂರೈಸುವಷ್ಟು ಡ್ರೆಸ್ ಬೇಡವೇ…?

ಬ್ಯಾಂಕ್ ಸಾಲ, ಕೈಸಾಲ ಮಾಡಿ ಕೊಂಡರು. ಒಂದಷ್ಟು ಡ್ರೆಸ್ ತಮ್ಮ ವಶಕ್ಕೆ ಖರೀದಿಸಿಕೊಂಡರು. ಆದರೆ ಅದು ತಾನು ಬಯಸಿದಂತೆ ಇರಲಿಲ್ಲ. ಅದಕ್ಕೆ ವರ್ಣ ಸಾಂಗತ್ಯಗಳ ಖಚಿತತೆ-ವ್ಯಕ್ತಿ ದೇಹಗಳ ಆಯ, ಅಳತೆ ಸಮರ್ಪಕವಾಗಿರಲಿಲ್ಲ. ಆ ದಿನಗಳಲ್ಲಿ ಕೆಲವು ಮೇಳ ಹೊರತು ಪಡಿಸಿದರೆ ಎಲ್ಲೆಡೆಯ ವೇಷಭೂಷಣಗಳು ಹೀಗೆಯೇ ಇತ್ತು. ಇದ್ದುದರಲ್ಲಿ ಸುಧಾರಿ ಸುತ್ತಾ ಭಟ್ಟರು ಕನಸು ಕಂಡರು. ತನ್ನದೇ ಸ್ವಂತ ಡ್ರೆಸ್ ಮಾಡಬೇಕೆಂಬ ಯೋಚನೆ ಹಾಕಿದರು. ಈ ನಡುವೆ ವಾರ್ಷಿಕೋತ್ಸವ, ಹವ್ಯಾಸಿ ಬಯಲಾಟಗಳ ಕರೆ ಹೆಚ್ಚಿತು. ಒಂದೆಡೆ ಬಯಲಾಟದಲ್ಲಿ ಹಲವು ವೈವಿಧ್ಯ ಪಾತ್ರಗಳಿಗೆ ಮುಖವರ್ಣಿಕೆ ಮಾಡುವ ಸಂದರ್ಭ ಎದುರಾಯಿತು. ನಿಜಕ್ಕೂ ಆ ಪಾತ್ರದ ವೇಷ-ಭೂಷಣ ಸಾಂಗತ್ಯದ ಅರಿವು ಭಟ್ಟರಿಗೆ ಇರಲಿಲ್ಲ. ಅಲ್ಲಿಯೇ ಕೆಲವರಲ್ಲಿ ಕೇಳಿದರೂ ಸಮರ್ಪಕ ಉತ್ತರ ಸಿಗಲಿಲ್ಲ. ಸವಾಲನ್ನು ಸವಾ ಲಾಗಿಯೇ ಸ್ವೀಕರಿಸಿದ ಭಟ್ಟರು ತೆಂಕಿನ ವೇಷ-ಭೂಷಣಗಳ ಖಚಿತತೆ, ನಿಖರತೆಗಾಗಿ ಹಿರಿಯ ಕಲಾವಿದರ ಮೊರೆ ಹೋದರು. ಅನುಭವ ಕೇಳಿ ಪಡೆದರು. ಕಮ್ಮಟ-ಗೋಷ್ಠಿ-ಬಯ ಲಾಟಗಳೆಂದು ಅಲೆದಾಡಿದರು. ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಸಂಗ್ರಹಿಸುತ್ತಲೇ ಬಂದರು. ಈ ನಡುವೆ ಧರ್ಮಸ್ಥಳ ಮೇಳಕ್ಕೆ ಹಿರಿಯ ಕಲಾವಿದ ಕಡಬ ಶಾಂತಪ್ಪರ ಮೇಲುಸ್ತು ವಾರಿಯಲ್ಲಿ ನೂತನ ವೇಷ ಭೂಷಣಗಳು ಸಿದ್ಧಗೊಂಡವು. ಒಂದೆರೆಡು ವರ್ಷದಲ್ಲಿ ಕಡಬ ಶಾಂತಪ್ಪರು ಧರ್ಮಸ್ಥಳ ಮೇಳದಿಂದ ನಿವೃತ್ತರಾದರು. ಶಾಂತಪ್ಪರನ್ನು ನೇರ ತನ್ನ ಮನೆಗೆ ಕರೆಸಿ ತಮ್ಮ ಜೊತೆ ಸುದೀರ್ಘ ಉಳಿಸಿಕೊಂಡ ಭಟ್ಟರು ಅನೇಕ ವೇಷ ಭೂಷಣಗಳನ್ನು ನಿರ್ಮಿಸಿದರು. ಮಣಿ ಸಾಮಗ್ರಿಗಳನ್ನೆಲ್ಲ ಕೈಬಿಟ್ಟು ಸಂಪೂರ್ಣ ಮರದ ಸಾಮಗ್ರಿಗಳ ಅಚ್ಚ ಹೊಸ, ಪರಂಪರೆ ಶೈಲಿಯ ವೇಷಗಳನ್ನು ತನ್ನ ಕನಸಿನ ಹಂಬಲ ದಂತೆ ತಾನೇ ರೂಪಿಸಿಕೊಂಡರು. ಜೊತೆಗೆ ನಿರ್ಮಾ ಣ ಕಸುಬನ್ನು ಅರಿತುಕೊಂಡರು.

ಹೀಗೆ ೧೯೮೫ರಲ್ಲಿ ಯಾವುದೇ ಪ್ರಚಾರ, ಉದ್ಘಾಟನೆ, ಸಭೆಗಳಿಲ್ಲದೇ ಹುಟ್ಟಿಕೊಂಡ ಭಟ್ಟರ ಸಾರಥ್ಯದ ಗಣೇಶ ಕಲಾವೃಂದ ಪೈವಳಿಕೆ ಈಗ ತ್ರಿಂಶತಿ ದಾಟಿ ನಿಂತಿದೆ. ಒಮ್ಮೆ ಸಂಪೂರ್ಣ ಮರದ ಸಾಮಗ್ರಿಗಳಿಂದಲೇ ನಿರ್ಮಿಸಿದ ಪರಂಪರೆಯ ವೇಷಭೂಷಣಗಳೊಂದಿಗೆ ಭಟ್ಟರ ಡ್ರೆಸ್ಸಿಗೆ ಜಪಾನಿಗೆ ಹೋಗುವ ಅವಕಾಶ ಬಂತು. ಅದಕ್ಕಾಗಿಯೇ ಹೊಸ ವೇಷಭೂಷಣಗಳು ನಿರ್ಮಾಣಗೊಂ ಡಿತು. ೨೦೦೪ರಲ್ಲಿ  ಎಡನೀರು ಮೇಳ ಗಜಮೇಳವಾಗಿ ಹೊರಡುವಾಗ ಮೇಳಕ್ಕೆ ಬೇಕಾದ ಸಂಪೂರ್ಣ ವೇಷಭೂಷಣಗ ಳನ್ನೊದ ಗಿಸುವಂತೆ ಎಡನೀರು ಶ್ರೀಗಳಿಂದ ಅಪ್ಪಣೆಯಾಯಿತು. ಪರಿಣಾಮ ದೇವಕಾನದವರ ಡ್ರೆಸ್ಸಿನ ಬಗ್ಗೆ, ಮೇಕಪ್ಪಿನ ಬಗ್ಗೆ ಪ್ರಚಾರ-ಪ್ರಶಂಸೆ ಬರತೊಡಗಿತು. ಇದೇ ಅವಧಿಯಲ್ಲಿ ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ, ಹಿರಿಯರ ಯಕ್ಷಗಾನ, ಸಪ್ತಾಹ ಇತ್ಯಾದಿಗಳ ಸಂಖ್ಯೆ ಹೆಚ್ಚಿತು. ಸಹಜವಾಗಿಯೇ ಬೇಡಿಕೆ ಹೆಚ್ಚಿತು.  ಭಟ್ಟರು ರಂಗದ ಸೂಕ್ಷ್ಮಗಳನ್ನು, ಸಮಸ್ಯೆಗಳನ್ನು ಸ್ವತಃ ಅರಿತರು. ವಯೋಮಾನಕ್ಕನುಸಾರ ಆಯ-ಅಳತೆಯ ಡ್ರೆಸ್‌ಗಳನ್ನು ಮಾಡಿಕೊಂಡು ಬೇಡಿಕೆ ಪೂರೈಸಿಕೊಂಡರು. ಯಕ್ಷಗಾನವನ್ನು ಕೇವಲ ಕಸುಬಾಗಿಸದೇ, ಕಸುಬಿನೊಂದಿಗೆ ಕಲೆಯಾಗಿ ಕಂಡ ಅಪೂರ್ವ ರಂಗಪ್ರೇಮಿ ದೇವಕಾನ ಕೃಷ್ಣ ಭಟ್ಟರು. ಅವರು ವೇಷಗಳ ವರ್ಣ ಸಾಂಗತ್ಯದ ಬಗ್ಗೆ ಮಾತಡನಾಡ ಬಲ್ಲವರು. ಆಹಾರ್ಯಗಳ ಬಗ್ಗೆ ಹಿರಿಯರಿಂದ ದೊರೆತ ಉಪದೇಶನುಸಾರ ಚಿತ್ರಣ ನೀಡಬಲ್ಲರು. ರಂಗದಲ್ಲಿ ವೇಷಧಾರಿ ಯಾಗಿ ಕುಣಿದ ಅನುಭವಸ್ಥರು. ಜೊತೆಗೆ ಚೌಕಿಯ ಸೂಕ್ಷ್ಮ-ಸೌಕರ್ಯಗಳನ್ನರಿತು ನಿಭಾಯಿಸುವ ಜಾಣ್ಮೆಯವರು. ಕಲೆಯನ್ನು ಆರಾಧನೆಯಾಗಿಸಿ, ಅನುಭವಕ್ಕಾಗಿ ಹಂಬಲಿಸಿ ಪ್ರಯತ್ನ ಶೀಲರಾದುದರಿಂದ ದೇವಕಾನದ ಡ್ರೆಸ್ ಎಂದರೆ ಯಕ್ಷಗಾನ ದಲ್ಲಿಂದು ಮೇಲ್ಪಂಕ್ತಿಯ ಮಾದರಿಯಾಗಿದೆ.

ಇವರ ಕಲಾಜೀವನ ಅಧ್ಯಯನ ಮತ್ತು ಪ್ರಯೋಗದ ನೆಲೆಯಲ್ಲಿ ಅರಳಿಕೊಂಡದ್ದು ಕಸುಬು ವಾಣಿಜ್ಯೋದ್ದೇಶಕ್ಕೆ ಮಾತ್ರವೇ ಸೀಮಿತಗೊಂಡಿರುತ್ತಿದ್ದರೆ ಇದು ಸಾಧ್ಯ ವಾಗುತ್ತಿರಲಿಲ್ಲ. ಇಂದೀಗ ಅನೇಕ ಮ್ಯೂಸಿ ಯಂಗಳಲ್ಲಿ ಯಕ್ಷಗಾನದ ಬೊಂಬೆಗಳು ದೇವಕಾನದವರು ನಿರ್ಮಿಸಿಕೊಟ್ಟ ವೇಷಭೂಷಣ ತೊಟ್ಟು ಕುಳಿತಿವೆ. ಸಂದರ್ಶಿತ ಶೋಧಕರಿಗೆ ಪರಂಪರೆಯನ್ನು ಬಿಂಬಿಸುತ್ತಿವೆ. ದೇಶ-ವಿದೇಶಗಳಿಗೆ ಅವರ ವೇಷ-ಭೂಷಣಗಳು ಪೂರೈಕೆಯಾಗುತ್ತವೆ. ಈ ಸಾಧನೆಗಳನ್ನು ಮಾನಿಸಿ ಕರ್ನಾಟಕ ಸರಕಾರದ ಅಕಾಡೆಮಿ ಯಕ್ಷಗಾನ ಅಕಾಡೆ ಮಿ ಪ್ರಶಸ್ತಿ ಇವರಿಗೊಳಿದಿದೆ. ಹಲವು ಸನ್ಮಾನ ಗಳು ಸಂದಿವೆ. ಇದೀಗ ಸುಳ್ಯದ ರಂಗಮನೆ ಪ್ರಶಸ್ತಿ ಭಟ್ಟರ ಪಾಲಿಗೆ ಕರಾವಳಿಯ ರಂಗಭೂಮಿಯ ಅಂಗೀ ಕಾರವೂ ಹೌದು. ದೇವಕಾನ ಎಂಬ ಹೆಸ ರಲ್ಲಿ ದೇವರೂ ಇದ್ದಾ ರೆ. ಕಾಡು ತುಂಬಿದೆ. ಕಾಡು ಸಮೃದ್ಧಿಯ ಸಂಕೇತ. ದೇವರು ಅದರ ರಕ್ಷಕ. ಯಕ್ಷಗಾ ನದ ವೇಷಭೂಷಣ ಗಳ ಪಾಲಿಗೆ ಕಾಡಿನಂತೆ ಸಮೃದ್ಧ ಅನು ಭವಗಳನ್ನು ಹೊಂದಿರುವ ದೇವಕಾನದವರು ಕಾಸರಗೋಡು ಜಿಲ್ಲೆಯ ಪೈವಳಿಕೆ ನಿವಾಸಿ. ಗಡಿನಾಡಿನ ಪ್ರತಿಭೆ. ಗ್ರಾಮೀಣತೆ ಸುಖದಲ್ಲಿ ಸೌಕರ್ಯ ವಂಚಿತನಾದರೂ ಕಲೆಯ ಬಲೆಯಲ್ಲಿ ಬದುಕು ನೇಯ್ದು ಅರಿವಿನ ಜ್ಞಾನಮಂದಿರ ಕಟ್ಟಿದವರು. ಯಕ್ಷಗಾನದ ಆಹಾರ್ಯದ ವರ್ಣ ಸಂಕರತೆಯ ಬಗ್ಗೆ ದೇವಕಾನರು ನಮ್ಮ ನಡುವಿನ ಸಂಪನ್ಮೂಲ ವ್ಯಕ್ತಿ-ಶಕ್ತಿ.

 

NO COMMENTS

LEAVE A REPLY