ಅಮಿತ ಕರ್ತವ್ಯದ ಹೊರೆ, ತೀವ್ರ ಮಾನಸಿಕ ಒತ್ತಡ ರಾಜ್ಯದಲ್ಲಿ ೬೯ ಪೊಲೀಸರು ಆತ್ಮಹತ್ಯೆಗೆ ಶರಣು

ಕಾಸರಗೋಡು: ಅಮಿತ ಕರ್ತವ್ಯದ ಹೊರೆ, ತೀವ್ರ ಮಾನಸಿಕ ಒತ್ತಡ ಹಾಗೂ ಕೌಟುಂಬಿಕ ಸಮಸ್ಯೆ ಇತ್ಯಾದಿ ಕಾರಣಗಳಿಂದ ೨೦೧೯ ಜನವರಿಯಿಂದ ೨೦೨೩ ಸೆಪ್ಟಂಬರ್ ತಿಂಗಳ ತನಕದ  ಅವಧಿಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ಒಟ್ಟು ೬೯ ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೀಗೆ ಆತ್ಮಹತ್ಯೆಗೈದವರಲ್ಲಿ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್, ೧೨ ಎಸ್‌ಐಗಳು, ೮ ಎಎಸ್‌ಐಗಳು, ೧೬ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳು ಮತ್ತು ೩೨ ಸಿವಿಲ್ ಪೊಲೀಸ್ ಆಫೀಸರ್‌ಗಳು ಒಳಗೊಂಡಿದ್ದಾರೆ. ರಾಜ್ಯ ಗೃಹ ಇಲಾಖೆಯ ವರದಿಯಲ್ಲಿ ಈ ಲೆಕ್ಕಾಚಾರ ನೀಡಲಾಗಿದೆ.

೨೦೨೨ರಲ್ಲಿ ಮಾತ್ರವಾಗಿ ೨೦ ಪೊಲೀಸರು ಆತ್ಮಹತ್ಯೆಗೈದಿದ್ದಾರೆ. ಈ ವರ್ಷ ೧೩ ಮಂದಿ ಇದೇ ರೀತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗೆ ಆತ್ಮಹತ್ಯೆಗೈದ ಒಟ್ಟು ೬೯ ಮಂದಿಯಲ್ಲಿ ೩೦ ಮಂದಿ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ

ಇನ್ನು ಅಮಿತ ಕೆಲಸದ ಹೊರೆ ಹಾಗೂ ತೀವ್ರ ಮಾನಸಿಕ ಒತ್ತಡ ಸಹಿಸಲಾರದ ೨೦ ಮಂದಿ ಆತ್ಮಹತ್ಯೆಗೈದರೆ, ಅನಾರೋಗ್ಯ ಹಾಗೂ ಆರ್ಥಿಕ ಸಮಸ್ಯೆ ಹೆಸರಲ್ಲಿ ಐದು ಮಂದಿ ಆತ್ಮಹತ್ಯೆಗೈದಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲೂ ಹೀಗೆ ಕೆಲವು ಪೊಲೀಸರು ಆತ್ಮಹತ್ಯೆಗೈದಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಆತ್ಮಹತ್ಯೆಗೈಯ್ಯುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪೊಲೀಸರಿಗೆ ಯೋಗ ತರಬೇತಿ ನೀಡುವಿಕೆ ಮಾತ್ರವಲ್ಲದೆ ಮಾನಸಿಕ ಒತ್ತಡ ನಿವಾರಿಸಲು  ಮಾನಸಿಕ ತಜ್ಞರಿಂದ ಕೌನ್ಸಿಲಿಂಗ್ ನೀಡುವಂತೆಯೂ ರಾಜ್ಯ ಗೃಹ ಖಾತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶ ನೀಡಿದೆ.

Leave a Reply

Your email address will not be published. Required fields are marked *

You cannot copy content of this page