ಬೀಗ ಜಡಿದ ಮನೆಯಲ್ಲಿ ಕಳವು: ಇಬ್ಬರ ಸೆರೆ

ಕಾಸರಗೋಡು: ಬೀಗ ಜಡಿದ ಮನೆಗೆ ನುಗ್ಗಿ ಕಳವು ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಅಣಂಗೂರು ತುರ್ತಿ ಮುಬಾರಕ್ ಮಂಜಿಲ್‌ನ ನಿವಾಸಿ ಹಾಗೂ ಈಗ ಕೋಟೆಕಣಿಯಲ್ಲಿ ನೆಲೆಸಿರುವ ಆಸಿಫ್ ಟಿ.ಎ(೩೭) ಮತ್ತು ಮೂಲತಃ ಕಾಸರಗೋಡು  ಆಲಂಪಾಡಿ ಎರಿಯಪ್ಪಾಡಿ ಹೌಸ್‌ನ ನಿವಾಸಿ ಹಾಗೂ ಈಗ ಬೇಕಲ ಪಾಲಕುನ್ನು ಆರಾಟುಕಡವಿನಲ್ಲಿ ವಾಸಿಸುತ್ತಿರುವ ಅಬ್ದುಲ್ ಖಾದರ್ ಪಿ.ಎಂ(೪೦) ಎಂಬವರು ಬಂಧಿತರಾದ ಆರೋಪಿಗಳು. ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಕೆ.ಪಿ. ವಿನೋದ್ ಕುಮಾರ್‌ರ ನೇತೃತ್ವದ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಚಂದ್ರಗಿರಿ ಸೇತುವೆ ಬಳಿ ನಿವಾಸಿ ಮೊಹಮ್ಮದ್ ಶಾ (೨೩) ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಈ ಮನೆಯವರು ಡಿ. ೧೦ರಂದು ಮನೆಗೆ ಬೀಗ ಜಡಿದು ಸಂಬಂಧಿಕರೋರ್ವರ ಮನೆಗೆ ಹೋಗಿದ್ದರು. ಈ ಮಧ್ಯೆ ಕಳ್ಳರು ಆ ಮನೆಯ ಬೀಗ ಒಡೆದು ಒಳನುಗ್ಗಿ ಕಳವು ನಡೆಸಿದ್ದಾರೆ. ಮನೆಯಿಂದ ೧೫,೦೦೦ ರೂ. ನಗದು, ೨ ಗ್ರಾಂ ಚಿನ್ನ, ಎರಡು ಗ್ಯಾಸ್ ಸಿಲಿಂಡರ್ ಮತ್ತು ಕೆಲವು ಪಾತ್ರೆಗಳು ಸೇರಿ ಒಟ್ಟು  ೪೦,೦೦೦ ರೂ. ಮೌಲ್ಯದ ಸಾಮಗ್ರಿಗಳ ಕಳವು ಗೈಯ್ಯಲ್ಪಟ್ಟಿದೆ ಎಂದು ಈ ಬಗ್ಗೆ ಮುಹಮ್ಮದ್ ಶಾ ಕಾಸರಗೋಡು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಂಬಂಧಿಕರಲ್ಲಿಗೆ ಹೋದ ಮನೆಯವರು ಮೊನ್ನೆ ರಾತ್ರಿಯಷ್ಟೇ ಹಿಂತಿರುಗಿದ್ದರು. ಆಗಲಷ್ಟೇ ಮನೆಯಲ್ಲಿ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಕೆ ನಡೆಸಿದ ಬಳಿಕ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕದ್ದ ಮಾಲುಗಳ ಪೈಕಿ ಗ್ಯಾಸ್ ಸಿಲಿಂಡರ್ ಮತ್ತಿತರ ಸಾಮಗ್ರಿಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಮಾಲುಗಳನ್ನು ಆರೋಪಿಗಳು ಗುಜರಿ ಅಂಗಡಿಗಳಿಗೆ ಮಾರಾಟ ಮಾಡುವ ಯತ್ನವನ್ನೂ ನಡೆಸಿದ್ದರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

Leave a Reply

Your email address will not be published. Required fields are marked *

You cannot copy content of this page